ಮೈಸೂರು ಮೂಲದ ಲಿಂಗಾಂತರಿ ವ್ಯಕ್ತಿಗೆ ರಕ್ಷಣೆ ನೀಡುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದ ಬಾಂಬೆ ಹೈಕೋರ್ಟ್

ತಮ್ಮ ಇಚ್ಛೆಯಂತೆ ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಹಕ್ಕು ಲಿಂಗಾಂತರಿ ವ್ಯಕ್ತಿಗಳಿಗೆ ಇದೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.
ಮೈಸೂರು ಮೂಲದ ಲಿಂಗಾಂತರಿ ವ್ಯಕ್ತಿಗೆ ರಕ್ಷಣೆ ನೀಡುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದ ಬಾಂಬೆ ಹೈಕೋರ್ಟ್

ತಮ್ಮ ಇಚ್ಛೆಯಂತೆ ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಹಕ್ಕು ಲಿಂಗಾಂತರಿ ವ್ಯಕ್ತಿಗಳಿಗೆ ಇದೆ ಎಂದು ಬಾಂಬೈ ಹೈಕೋರ್ಟ್‌ ಶನಿವಾರ ತಿಳಿಸಿದ್ದು ಮೈಸೂರು ಮೂಲದ ಲಿಂಗಾಂತರಿ ವ್ಯಕ್ತಿಯೊಬ್ಬರಿಗೆ ರಕ್ಷಣೆ ಒದಗಿಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದೆ.

ವಕೀಲ ವಿಜಯ್‌ ಹಿರೇಮಠ ಅವರ ಮೂಲಕ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ತಮ್ಮ ಪೋಷಕರು ಬಲವಂತವಾಗಿ ತಮ್ಮನ್ನು ಮೈಸೂರಿಗೆ ಕರೆಸಿಕೊಂಡು ಸುಳ್ಳು ಆರೋಪ ಹೊರಿಸುವ ಭೀತಿ ಇರುವುದರಿಂದ ತಮಗೆ ರಕ್ಷಣೆ ಒದಗಿಸಬೇಕು ಎಂದು ಲಿಂಗಾಂತರಿ ವ್ಯಕ್ತಿಯೊಬ್ಬರು ಕೋರಿದ್ದರು.

ಅರ್ಜಿದಾರ ಲಿಂಗಾಂತರಿ ವ್ಯಕ್ತಿ ಕಿರುಕುಳಕ್ಕೊಳಗಾಗದಂತೆ ಅಥವಾ ತನ್ನ ಇಚ್ಛೆಗೆ ವಿರುದ್ಧವಾಗಿ ಮುಂಬೈ ತೊರೆಯದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಎನ್‌ ಜೆ ಜಾಮದಾರ್‌ ಅವರಿದ್ದ ಪೀಠ ಪೊಲೀಸರಿಗೆ ನಿರ್ದೇಶನ ನೀಡಿತು.

ಹುಟ್ಟಿನಿಂದ ಹೆಣ್ಣಾಗಿರುವ ವ್ಯಕ್ತಿಯು ತಮ್ಮನ್ನು ಪುರುಷನೆಂದು ಗುರುತಿಸಿಕೊಂಡಿದ್ದರು. ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಹೊರಟಿದ್ದರಿಂದ ಅರ್ಜಿದಾರರು ತನ್ನ ಹೆತ್ತವರನ್ನು ತೊರೆದು ಮುಂಬೈಗೆ ಬಂದಿದ್ದರು. ಪೋಷಕರ ನೆರವು ದೊರೆಯುವುದಿಲ್ಲ ಎಂಬುದನ್ನು ಮನಗಂಡ ಅರ್ಜಿದಾರರು ನೃತ್ಯಪಟುವಾಗಿ ಜೀವನ ನಡೆಸಲು ಮುಂಬೈ ನಗರವನ್ನು ಆರಿಸಿಕೊಂಡಿದ್ದರು. ಬಳಿಕ ಮುಂಬೈನಲ್ಲಿರುವ ತನ್ನ ಸ್ನೇಹಿತರಿಗೆ ಅರ್ಜಿದಾರರ ಪೋಷಕರ ಕಡೆಯಿಂದ ಕರೆಗಳು ಬರಲಾರಂಭಿಸಿದವು ಹಾಗೂ ಮೈಸೂರು ಪೊಲೀಸ್‌ ಠಾಣೆಯಲ್ಲಿ ತಾನು ಕಾಣೆಯಾಗಿರುವ ಬಗ್ಗೆ ಪ್ರಕರಣದ ದಾಖಲಿಸಲಾಗಿರುವುದನ್ನು ಅರ್ಜಿದಾರರು ಕಂಡುಕೊಂಡರು.

ಒಂದು ದಿನ ಅರ್ಜಿದಾರರ ಸ್ನೇಹಿತನೊಬ್ಬ ವರ್ಸೋವಾ ಕಡಲತೀರಕ್ಕೆ ತೆರಳುವಂತೆ ತಿಳಿಸಿದರು. ಅಲ್ಲಿಗೆ ಹೋದಾಗ ಅರ್ಜಿದಾರರ ತಂದೆ ಮೈಸೂರಿನ ಪೊಲೀಸ್‌ ಅಧಿಕಾರಿಗಳೊಂದಿಗೆ ತಮ್ಮನ್ನು ಕರೆಯದೊಯ್ಯಲು ಬಂದಿರುವುದು ತಿಳಿಯಿತು. ತಮಗೆ ಪೊಲೀಸರು ಯಾವುದೇ ತೊಂದರೆ ನೀಡುವುದಿಲ್ಲ, ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಚೇತರಿಸಿಕೊಂಡ ಬಳಿಕ ತಮ್ಮನ್ನು ಮರಳಿ ಮುಂಬೈಗೆ ಕಳುಹಿಸಲಾಗುವುದು ಎಂಬ ಭರವಸೆ ಬಳಿಕ ಅರ್ಜಿದಾರರು ಮೈಸೂರಿಗೆ ಮರಳಿದರು. ಆದರೆ ಅಲ್ಲಿ ಅವರು ಕುಟುಂಬಸ್ಥರು ಅರ್ಜಿದಾರರನ್ನು ಅವರ ಲಿಂಗತ್ವ ಗುರುತನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು. ಅಲ್ಲದೆ ಅರ್ಜಿದಾರರ ಮೇಲೆ ಕೆಲ ರೀತಿಯ ಆಚರಣೆಗಳನ್ನು ಮಾಡಿದ ಪೋಷಕರು ಅವರನ್ನು ಕೆಲ ಕಾಲ ಮನೆಯಲ್ಲೇ ಬಂಧಿಸಿಟ್ಟರು. ಕಡೆಗೆ ಅರ್ಜಿದಾರರು ರಾಹಿ ಎಂಬ ಸರ್ಕಾರೇತರ ಸಂಸ್ಥೆಯ ಸಹಾಯದೊಂದಿಗೆ ಬೆಂಗಳೂರಿನಲ್ಲಿ ಸುರಕ್ಷಿತ ಸ್ಥಳವೊಂದರಲ್ಲಿ ಆಶ್ರಯಪಡೆದು ನಂತರ ಮುಂಬೈಗೆ ಮರಳಿದರು.

Also Read
ಲಿಂಗ ತಾರತಮ್ಯ ಕುರಿತಂತೆ ಮೂರ್ನಾಲ್ಕು ದಶಕಗಳ ಹಿಂದಿನ ಧೋರಣೆ ಬದಲಾಗಿಲ್ಲ: ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್

ಅಲ್ಲಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ಬದಲಿಸಿದ ಅರ್ಜಿದಾರರು ಕುಟುಂಬ ಅಥವಾ ಪೊಲೀಸರು ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಹುದು ಎಂಬ ಭಯ ಆತಂಕದಿಂದ ತಲೆಮರೆಸಿಕೊಂಡರು. ಅವರು ಅಲ್ಲಿ ಭಯದಲ್ಲಿಯೇ ಬದುಕುತ್ತಿದ್ದಾರೆ ಎಂದು ವಕೀಲ ಹಿರೇಮಠ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ ವಿ ಸಸ್ತೆ ಅವರು ವಾದ ಮಂಡಿಸಿ ಮೈಸೂರಿನಲ್ಲಿ ಕಾಣೆಯಾದ ವ್ಯಕ್ತಿ ಕುರಿತು ಮುಂಬೈ ಪೊಲೀಸರು ಮೈಸೂರು ಪೊಲೀಸರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಆಗ "ನೀವು ಹೇಗೆ ಸಹಾಯ ಮಾಡುತ್ತಿದ್ದೀರಿ? ಅರ್ಜಿದಾರರು ಅಪರಾಧ ಎಸಗಿದ್ದಾರೆಯೇ? ಅವರನ್ನು ಅಪರಾಧಿಗಳಂತೆ ಪರಿಗಣಿಸಬೇಡಿ" ಎಂದ ನ್ಯಾಯಾಲಯ ಸೂಕ್ತ ರಕ್ಷಣೆ ಒದಗಿಸುವಂತೆ ಹಾಗೂ ಅರ್ಜಿದಾರರು ಒತ್ತಾಯಪೂರ್ವಕವಾಗಿ ಮುಂಬೈ ತೊರೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿತು.

Related Stories

No stories found.
Kannada Bar & Bench
kannada.barandbench.com