ಮೃತ ವಕೀಲರ ಕುಟುಂಬ ಸದಸ್ಯರ ಆರ್ಥಿಕ ಸಂಕಷ್ಟ ನಿವಾರಿಸಲು ನೀತಿ ರೂಪಿಸುವಂತೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ದೆಹಲಿಯ ವಕೀಲರ ಪರಿಷತ್ತಿಗೆ (ಬಿಸಿಡಿ) ದೆಹಲಿ ಹೈಕೋರ್ಟ್ ಇತ್ತೀಚೆಗೆ ಸೂಚಿಸಿದೆ [ದರ್ಶನಾ ರಾಣಿ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಂತಹ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡುವ ನೀತಿ ರೂಪಿಸುವಂತೆ ವಕೀಲ ಸಂಸ್ಥೆಗಳಿಗೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗಡೆಲಾ ಅವರಿದ್ದ ಪೀಠ ಸಲಹೆ ನೀಡಿತು.
"ವಕೀಲರ ಸಾವಿನಿಂದಾಗಿ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಮೇಲ್ಮನವಿದಾರರಂತಹ ವ್ಯಕ್ತಿಗಳ ಪರಿಸ್ಥಿತಿ ಸುಧಾರಿಸಲು ಕೆಲವು ನೀತಿ ಅಥವಾ ಯೋಜನೆ ರೂಪಿಸಲು ಬಿಸಿಐ ಮತ್ತು ಬಿಸಿಡಿಗೆ ವಿನಂತಿಮಾಡಿಕೊಳ್ಳಲಾಗುತ್ತಿದೆ. ಬಹುತೇಕ ವಕೀಲರು ಮತ್ತು ಅವರ ಕುಟುಂಬಕ್ಕೆ, ಸಾಮಾನ್ಯವಾಗಿ ಆದಾಯದ ಮೂಲ ವೃತ್ತಿಪರ ವಕೀಲರ ಪರಿಶ್ರಮದಿಂದ ಬಂದಿದ್ದು ಸಾಮಾನ್ಯವಾಗಿ ವಕೀಲರು ದುರದೃಷ್ಟವಶಾತ್ ತೀರಿಕೊಂಡ ಸಂದರ್ಭಗಳಲ್ಲಿ ಕುಟುಂಬಗಳಿಗೆ ಹಣಕಾಸಿನ ನೆರವು ದೊರೆಯುವುದಿಲ್ಲ" ಎಂದು ನ್ಯಾಯಾಲಯ ವಿವರಿಸಿದೆ.
ತಮ್ಮ ಮಗ ಮೃತಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಕೀಲರ ಕಲ್ಯಾಣ ಯೋಜನೆ ಅಡಿಯಲ್ಲಿ ₹10 ಲಕ್ಷ ಜೀವ ವಿಮಾ ದೊರಕಿಸಿಕೊಡುವಂತೆ ಕೋರಿ ಮೃತ ವಕೀಲರ ತಾಯಿ ಅರ್ಜಿ ಸಲ್ಲಿಸಿದ್ದರು.
"ವಿಮಾ ರಕ್ಷಣೆಯು ಪಾಲಿಸಿಯ ಸಕ್ರಿಯಗೊಳಿಸುವಿಕೆ ಮೇಲೆ ನಿರ್ಧರಿತವಾಗಲಿದ್ದು, ಈ ಪ್ರಜರಣದಲ್ಲಿ ವಕೀಲರು ಮೃತಪಟ್ಟ ಬಳಿಕ ಪಾಲಿಸಿ ಸಕ್ರಿಯಗೊಂಡಿದೆ" ಎಂಬ ನೆಪವೊಡ್ಡಿ ದೆಹಲಿ ಸರ್ಕಾರ ಈ ಹಿಂದೆ ಜೀವ ವಿಮಾ ಪರಿಹಾರ ತಿರಸ್ಕರಿಸಿತ್ತು.
ಹೈಕೋರ್ಟ್‌ನ ಏಕ ಸದಸ್ಯ ಪೀಠ ಸರ್ಕಾರದ ನಿರ್ಧಾರ ಎತ್ತಿಹಿಡಿದಿದ್ದರಿಂದ ತಾಯಿ ವಿಭಾಗೀಯ ಪೀಠದ ಮೆಟ್ಟಿಲೇರಿದರು.
ಯೋಜನೆ ಜಾರಿಗೆ ಬರುವ ಮೊದಲೇ ಅವರ ಮಗ ನಿಧನರಾದ ಕಾರಣ, ಆ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.
ವಕೀಲರು ಬದುಕಿದ್ದಾಗ ಮಾತ್ರ ಯೋಜನೆಯ ಲಾಭ ನೀಡಲಾಗುವುದರಿಂದ ಅವರು ಸೌಲಭ್ಯ ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯ ಹೇಳಿತು.
ಆದರೆ ವಕೀಲರ ಮರಣದ ನಂತರ ಸುಮಾರು 2 ವರ್ಷಗಳ ಕಾಲ ಕುಟುಂಬಕ್ಕೆ ಬಿಸಿಡಿ ಆರ್ಥಿಕ ನೆರವು ನೀಡುತ್ತಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಆ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿತು.
"ನಮ್ಮ ಅಭಿಪ್ರಾಯದಲ್ಲಿ, ಮೇಲ್ಮನವಿದಾರರ ಮಗನ ಮರಣದ ನಂತರ, ಮೇಲ್ಮನವಿದಾರರ ಕುಟುಂಬ ಎದುರಿಸಿರುವ ಆರ್ಥಿಕ ಬಿಕ್ಕಟ್ಟನ್ನು ತಗ್ಗಿಸುವ ಸಲುವಾಗಿ, 15.12.2023 ರಿಂದ 15.12.2025 ರವರೆಗೆ ಮಾಸಿಕ ಆರ್ಥಿಕ ಸಹಾಯ ನೀಡುವ ಮೂಲಕ ಮೇಲ್ಮನವಿದಾರರಿಗೆ ಆರ್ಥಿಕ ನೆರವು ನೀಡುವಲ್ಲಿ ಬಿಸಿಡಿ ಪೂರ್ವಭಾವಿಯಾಗಿ ಪರೋಪಕಾರಿ ಕ್ರಮ ತೆಗೆದುಕೊಂಡಿದೆ. ಈ ಸಂದರ್ಭಗಳಲ್ಲಿ, ಅಂತಹ ನೀತಿ ಇಲ್ಲದಿದ್ದಾಗ ಬಿಸಿಡಿ ಹೆಚ್ಚಿನ ಸಹಾಯ ನೀಡುವಂತೆ ನಿರ್ದೇಶಿಸಲಾಗದು" ಎಂದು ನ್ಯಾಯಾಲಯ ಹೇಳಿತು.
ಅಂತೆಯೇ ಆರ್ಥಿಕ ಸಹಾಯಕ್ಕಾಗಿ ಬಿಸಿಐ ಮತ್ತು ಬಿಸಿಡಿ ಸಂಪರ್ಕಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಅದು ನೀಡಿತು.