MP Mohan Delkar  
ಸುದ್ದಿಗಳು

ಸಂಸದ ದೇಲ್ಕರ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ: ಪ್ರಕರಣ ರದ್ದತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

ದಾದ್ರ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು ಹಾಗೂ ಲಕ್ಷದ್ವೀಪಗಳ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಸೇರಿದಂತೆ ಒಂಬತ್ತು ಜನರ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಪೀಠ ಎತ್ತಿಹಿಡಿದಿದೆ.

Bar & Bench

ಸಂಸದ ಮೋಹನ್‌ ದೇಲ್ಕರ್‌ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಮತ್ತೆ ತೆರೆಯಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ಅಭಿನವ್ ಮೋಹನ್ ದೇಲ್ಕರ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ದಾದ್ರ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು ಹಾಗೂ ಲಕ್ಷದ್ವೀಪಗಳ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಸೇರಿದಂತೆ ಒಂಬತ್ತು ಜನರ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ವಿನೋದ್‌ ಚಂದ್ರನ್‌ ಹಾಗೂ ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ಎತ್ತಿಹಿಡಿದಿದೆ.

ದಾದ್ರ ಮತ್ತು ನಗರ ಹವೇಲಿಯಿಂದ ಏಳು ಬಾರಿ ಸಂಸದರಾಗಿರಾಗಿದ್ದ ದೇಲ್ಕರ್, 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2021ರಲ್ಲಿ ಹೋಟೆಲ್ ಕೋಣೆಯೊಳಗೆ ಅವರ ಶವ ಪತ್ತೆಯಾಗಿತ್ತು. ತಾವು ಆತ್ಮಹತ್ಯೆ ‌ಮಾಡಿಕೊಳ್ಳಲು  ರಾಜಕೀಯ ಒತ್ತಡವೇ ಕಾರಣ ಎಂದು 14 ಪುಟಗಳ ಆತ್ಮಹತ್ಯೆ ಪತ್ರದಲ್ಲಿ ದೇಲ್ಕರ್ ಆರೋಪಿಸಿದ್ದರು.

ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ಆದೇಶದಂತೆ ಕೇಂದ್ರಾಡಳಿತ ಪ್ರದೇಶ ಸರ್ಕಾರ ಕಿರುಕುಳ ನೀಡಿದ್ದರಿಂದ ದೇಲ್ಕರ್ ಒಂದು ವರ್ಷದಿಂದ ಒತ್ತಡದಲ್ಲಿದ್ದರು ಎಂದು ಮೋಹನ್‌ ಅವರ ಪುತ್ರ ಅಭಿನವ್‌ ದೇಲ್ಕರ್‌ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ತಿಳಿಸಲಾಗಿತ್ತು.

ಕಳೆದ ಬಾರಿಯ ವಿಚಾರಣೆ ವೇಳೆ ನ್ಯಾಯಾಲಯ ಆರೋಪಿಗಳ ವಿರುದ್ಧ ನೀಡಲಾಗಿರುವ ದೂರು ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ಆರೋಪಗಳನ್ನು ಸಮರ್ಥಿಸಬಲ್ಲದೇ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು.

ಅವಮಾನ ಆಗಿದ್ದ ಮಾತ್ರಕ್ಕೆ ಅದು ಆತ್ಮಹತ್ಯೆಗೆ ಪ್ರಚೋದನೆ ಆಗುವುದಿಲ್ಲ ಎಂದು ಸಿಜೆಐ ಗವಾಯಿ ಹೇಳಿದ್ದರು. "ಯಾರನ್ನಾದರೂ ಹೋಗಿ ಸಾಯಿ ಎಂದು ಹೇಳಿದರೂ, ಮತ್ತು ಆ ವ್ಯಕ್ತಿ 48 ಗಂಟೆಗಳ ಒಳಗೆ ಸತ್ತರೂ, ಸೆಕ್ಷನ್ 306 ಅನ್ವಯಿಸುವುದಿಲ್ಲ" ಎಂದು ಪೀಠ ತಿಳಿಸಿತ್ತು.