ಮಾಜಿ ಸಂಸದ ದೇಲ್ಕರ್‌ ಆತ್ಮಹತ್ಯೆ ಪ್ರಕರಣ:"ಅಪಮಾನ ಆತ್ಮಹತ್ಯೆಗೆ ಪ್ರಚೋದನೆಯಾಗುತ್ತದೆಯೇ?" ಸುಪ್ರೀಂ ಪ್ರಶ್ನೆ

ದಾದ್ರ ಮತ್ತು ನಗರ ಹವೇಲಿಯಿಂದ ಏಳು ಬಾರಿ ಸಂಸದರಾಗಿರಾಗಿದ್ದ ದೇಲ್ಕರ್, 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2021ರಲ್ಲಿ ಹೋಟೆಲ್ ಕೋಣೆಯೊಳಗೆ ಅವರ ಶವ ಪತ್ತೆಯಾಗಿತ್ತು.
MP Mohan Delkar
MP Mohan Delkar
Published on

ಸಂಸದರಾಗಿದ್ದ ಮೋಹನ್ ದೇಲ್ಕರ್ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ಆರೋಪಗಳನ್ನು ಸಮರ್ಥಿಸಬಲ್ಲದೇ ಎಂದು ಸುಪ್ರೀಂ ಕೋರ್ಟ್ ಗುರುವಾರ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

ಬಾಂಬೆ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಮೃತರ ಪುತ್ರ ಅಭಿನವ್ ದೇಲ್ಕರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ದಾದ್ರ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು ಹಾಗೂ ಲಕ್ಷದ್ವೀಪಗಳ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಸೇರಿದಂತೆ ಒಂಬತ್ತು ಜನರ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು.

Also Read
ರೈತನ ಆತ್ಮಹತ್ಯೆ ಸುಳ್ಳು ಸುದ್ದಿ ಟ್ವೀಟ್‌: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ದಾದ್ರ ಮತ್ತು ನಗರ ಹವೇಲಿಯಿಂದ ಏಳು ಬಾರಿ ಸಂಸದರಾಗಿರಾಗಿದ್ದ ದೇಲ್ಕರ್, 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2021ರಲ್ಲಿ ಹೋಟೆಲ್ ಕೋಣೆಯೊಳಗೆ ಅವರ ಶವ ಪತ್ತೆಯಾಗಿತ್ತು.

ತಾವು ಆತ್ಮಹತ್ಯೆ ‌ಮಾಡಿಕೊಳ್ಳಲು  ರಾಜಕೀಯ ಒತ್ತಡವೇ ಕಾರಣ ಎಂದು 14 ಪುಟಗಳ ಆತ್ಮಹತ್ಯೆ ಪತ್ರದಲ್ಲಿ ದೇಲ್ಕರ್ ಆರೋಪಿಸಿದ್ದರು.

ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ಆದೇಶದಂತೆ ಕೇಂದ್ರಾಡಳಿತ ಪ್ರದೇಶ ಸರ್ಕಾರ ಕಿರುಕುಳ ನೀಡಿದ್ದರಿಂದ ದೇಲ್ಕರ್ ಒಂದು ವರ್ಷದಿಂದ ಒತ್ತಡದಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿತ್ತು.

ಮೇಲ್ಮನವಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು, ದೇಲ್ಕರ್ ನಿರಂತರವಾಗಿ ಅವಮಾನ ಎದುರಿಸಿದ್ದಾರೆ ಎಂದು ಆತ್ಮಹತ್ಯೆ ಟಿಪ್ಪಣಿ ಮತ್ತು ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದರು.

ಆಗ ಸಿಜೆಐ ಆತ್ಮಹತ್ಯೆ ಕುಮ್ಮಕ್ಕಿನ‌ ಮಾನದಂಡವನ್ನು ಪ್ರಶ್ನಿಸಿದರು. “ಇಂತಹ ಅವಮಾನ ಆತ್ಮಹತ್ಯೆಗೆ ಒತ್ತಾಯಿಸುತ್ತದೆ ಎಂದು ಹೇಳಬಹುದೇ? ಒಬ್ಬ ವಕೀಲರಿಗೆ ನ್ಯಾಯಾಧೀಶರು ʼಕಕ್ಷಿದಾರ ಮೂರ್ಖ ವಕೀಲರನ್ನು ಆಯ್ಕೆ ಮಾಡಿಕೊಂಡಿದ್ದಾರೆಂದುʼ ಹೇಳಿ ಆ ಬಳಿಕ, ವಕೀಲರು ಮೂರು ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡರೆ, ನ್ಯಾಯಾಧೀಶರು ಸೆಕ್ಷನ್ 306ರ ಅಡಿಯಲ್ಲಿ ಹೊಣೆಗಾರರಾಗುತ್ತಾರೆಯೇ? ಬಾಂಬೆ ಹೈಕೋರ್ಟ್‌ನಲ್ಲಿ, ಇಂತಹ ಹಲವಾರು ಪ್ರಕರಣಗಳನ್ನು ರದ್ದುಗೊಳಿಸಿದ್ದೇನೆ, ”ಎಂದು ಸಿಜೆಐ ಗವಾಯಿ ತಿಳಿಸಿದರು.

ಜಿಲ್ಲಾಧಿಕಾರಿ ಆಹ್ವಾನಿಸದೆ ತಹಶೀಲ್ದಾರ್‌ ಅವರ ಮೂಲಕ ಆಹ್ವಾನ ನೀಡಿ ದೇಲ್ಕರ್‌ ಅವರಿಗೆ ಅಪಮಾನಿಸಲಾಯಿತು ಎಂದು ಅರೋರಾ ತಿಳಿಸಿದರು. ಆಗ ಸಿಜೆಐ ಅವರು " ಜಿಲ್ಲಾಧಿಕಾರಿ ಆಹ್ವಾನಿಸದೆ ತಹಶೀಲ್ದಾರ್‌ ಅವರು ಆಹ್ವಾನ ನೀಡಿದರೆ ಅದು ಆತ್ಮಹತ್ಯೆಗೆ ಪ್ರಚೋದನೆ ಎನಿಸಿಕೊಳ್ಳಲು ಸಾಲುತ್ತದೆಯೇ” ಎಂದು ಪ್ರಶ್ನಿಸಿದರು.

ಆತ್ಮಹತ್ಯೆ ಪತ್ರದಲ್ಲಿ ನಿರಂತರ ಕಿರುಕುಳದ ಬಗ್ಗೆ ಉಲ್ಲೇಖಿಸಲಾಗಿದೆ ಮತ್ತು ದೇಲ್ಕರ್‌ ಅವರು ಸಂಸತ್ತಿನ ಸವಲತ್ತು ಸಮಿತಿಗೆ, ಪ್ರಧಾನಿ, ಗೃಹ ಸಚಿವರು ಮತ್ತು ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದರು ಎಂದು ಅರೋರಾ ಪ್ರತಿಕ್ರಿಯಿಸಿದ್ದರು.

ದೇಲ್ಕರ್‌ ಅವರನ್ನು ಕೊಲ್ಲುವುದಾಗಿ ಕೌಶಲ್‌ ಪಟೇಲ್‌ ಅವರಿಗೆ ಆಡಳಿತಾಧಿಕಾರಿ ತಿಳಿಸಿದ್ದರು ಎಂದು ಅರೋರಾ ಹೇಳಿದರು.

Also Read
ಇಲ್ಲಿದೆ ಸುಪ್ರೀಂ ಕೋರ್ಟ್‌ ಹೊರಡಿಸಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆ ಮಾರ್ಗಸೂಚಿಯ ವಿವರ

ಆಗ ಸಿಜೆಐ ಅವರು "ಪ್ರಫುಲ್ ಪಟೇಲ್ ಅವರ ವಿರುದ್ಧ ಆರೋಪ ಎಲ್ಲಿದೆ? ಇದು ಸಂಕೀರ್ಣವಾದ ಪ್ರಶ್ನೆಯಲ್ಲ. ದಯವಿಟ್ಟು ಹೌದು ಅಥವಾ ಇಲ್ಲ ಎಂದು ಉತ್ತರಿಸಿ," ಎಂದರು.

"ಯಾರನ್ನಾದರೂ ಹೋಗಿ ಸಾಯಿ ಎಂದು ಹೇಳಿದರೂ, ಮತ್ತು ಆ ವ್ಯಕ್ತಿ 48 ಗಂಟೆಗಳ ಒಳಗೆ ಸತ್ತರೂ, ಸೆಕ್ಷನ್ 306 ಅನ್ವಯಿಸುವುದಿಲ್ಲ" ಎಂದು ಪೀಠ ತಿಳಿಸಿತು.

ಮಹಾರಾಷ್ಟ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ದೇಲ್ಕರ್‌ ತುಂಬಾ ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿಯಾಗಿದ್ದರು ಎಂದರು. ಪ್ರಫುಲ್‌ ಪಟೇಲ್‌ ಅವರ ಪರವಾಗಿ ಹಿರಿಯ ನ್ಯಾಯವಾದಿ ಮಹೇಶ್‌ ಜೇಠ್ಮಲಾನಿ ಅವರು ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್‌ 5ರಂದು ನಡೆಯಲಿದೆ.

Kannada Bar & Bench
kannada.barandbench.com