Chitra Ramkrishna
Chitra Ramkrishna  Bloomberg
ಸುದ್ದಿಗಳು

ಎನ್ಎಸ್ಇ ಹಗರಣ: ಚಿತ್ರಾ ರಾಮಕೃಷ್ಣಗೆ ನೀಡಿರುವ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌

Bar & Bench

ಸಿಬಿಐ ತನಿಖೆ ನಡೆಸುತ್ತಿರುವ ಎನ್‌ಎಸ್‌ಇ ಕೋ-ಲೊಕೇಷನ್‌ ಹಗರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿತ್ರಾ ರಾಮಕೃಷ್ಣ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ [ಸಿಬಿಐ ಮತ್ತು ಚಿತ್ರಾ ರಾಮಕೃಷ್ಣ ನಡುವಣ ಪ್ರಕರಣ].

ಪ್ರಕರಣದಲ್ಲಿ ರಾಮಕೃಷ್ಣ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ನಿರಾಕರಿಸಿತು.

"ಜಾಮೀನು ಆದೇಶದಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ. ನ್ಯಾಯಾಲಯದ ಅವಲೋಕನಗಳು ಡಿಫಾಲ್ಟ್ ಜಾಮೀನು ಮಂಜೂರಿಗೆ ಸಂಬಂಧಪಟ್ಟಂತೆ ಮಾತ್ರವಾಗಿದೆ, ಇದು ಪ್ರಕರಣದ ವಿಚಾರಣೆಯ ಅರ್ಹತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ; ಕಾನೂನಿನ ಎಲ್ಲಾ ಪ್ರಶ್ನೆಗಳನ್ನು ಮುಕ್ತವಾಗಿ ಇರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿತು. ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರು.

ಎನ್‌ಎಸ್‌ಇ ಕೋ-ಲೊಕೇಷನ್‌ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಸೆಪ್ಟೆಂಬರ್‌ನಲ್ಲಿ  ಚಿತ್ರಾ ಮತ್ತು ಎನ್‌ಎಸ್‌ಇಯ ಮಾಜಿ ಅಧಿಕಾರಿ ಆನಂದ್ ಸುಬ್ರಮಣಿಯನ್ ಅವರಿಗೆ ಶಾಸನಬದ್ಧ ಜಾಮೀನು ನೀಡಿತ್ತು. ಚಿತ್ರಾ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.