ಎನ್ಎಸ್ಇ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಿತ್ರಾ ರಾಮಕೃಷ್ಣ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ನವೆಂಬರ್ 15ರಂದು ಈ ಪ್ರಕರಣದ ಆದೇಶಗಳನ್ನು ಕಾಯ್ದಿರಿಸಲಾಗಿತ್ತು. ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ಚಿತ್ರಾ ಅವರಿಗೆ ಜಾಮೀನು ನೀಡಿದರು. ಪ್ರಕರಣದಲ್ಲಿ ಎನ್‌ಎಸ್‌ಇ ಉದ್ಯೋಗಿಗಳ ಫೋನ್ ಕದ್ದಾಲಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಎಂಟಿಎನ್‌ಎಲ್ ಫೋನ್‌ಗಳ ಕದ್ದಾಲಿಕೆ ಮಾಡುವುದು ಟೆಲಿಗ್ರಾಫ್ ಕಾಯಿದೆಗೆ ವಿರುದ್ಧವಾಗಿದೆ ಕದ್ದಾಲಿಕೆಗೆ ₹ 4. 54 ಕೋಟಿ ಪಾವತಿಸಲಾಗಿದ್ದು ಇದು ಅಪರಾಧವಾಗುತ್ತದೆ ಎಂದು ಎಂದು ಸಿಬಿಐ ಮತ್ತು ಇ ಡಿ ಆರೋಪಿಸಿದ್ದವು. ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಸಂಜಯ್ ಪಾಂಡೆ ಕೂಡ ಆರೋಪಿಯಾಗಿದ್ದು ಅವರಿಗೆ ಈ ಹಿಂದೆ ಜಾಮೀನು ದೊರೆತಿತ್ತು.
ಇನ್ನು ಚಿತ್ರಾ ಅವರಯ ತನಗೂ ದಲ್ಲಾಳಿಗಳಿಗೂ ಯಾವುದೇ ಸಂಬಂಧ ಇಲ್ಲ. ಅವರಲ್ಲಿ ಯಾರನ್ನೂ ಇನ್ನೂ ಬಂಧಿಸಿಲ್ಲ ಎಂದಿದ್ದರು. ಚಿತ್ರಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ರೆಬೆಕ್ಕಾ ಜಾನ್ ಆರೋಪಗಳು ನಿಗದಿತ ಅಪರಾಧದ ಚೌಕಟ್ಟಿನೊಳಗೆ ಬರುವುದಿಲ್ಲವಾದ್ದರಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಅರ್ಜಿದಾರರು ಮಹಿಳೆಯಾಗಿರುವುದರಿಂದ ಪಿಎಂಎಲ್‌ಎಯ ಸೆಕ್ಷನ್ 45 (1) ರ ನಿಬಂಧನೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ವಾದಿಸಿದ್ದರು.
ಎನ್‌ಎಸ್‌ಇಯ ಮಾಜಿ ಉದ್ಯೋಗಿ ಆನಂದ್ ಸುಬ್ರಮಣಿಯನ್ ಅವರ ಹುದ್ದೆ ಮತ್ತು ವೇತನವನ್ನು ಚಿತ್ರಾ ಆಗಾಗ್ಗೆ ಪರಿಷ್ಕರಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ಮತ್ತು ಇ ಡಿ ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿವೆ. ಹಿಮಾಲಯದ ಯೋಗಿಯೊಬ್ಬರ ಸಲಹೆಯಂತೆ ತಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಚಿತ್ರಾ ಹೇಳಿದ್ದರು. ಆ ʼಯೋಗಿʼ ಬೇರಾರೂ ಅಲ್ಲ ಆತ ಆನಂದ್ ಸುಬ್ರಮಣಿಯನ್ ಅವರೇ ಆಗಿದ್ದಾರೆ ಎಂದು ತನಿಖಾ ಸಂಸ್ಥೆಗಳು ವಾದಿಸಿದ್ದವು.