ಪರಿಶಿಷ್ಟ ಪಂಗಡದ (ಎಸ್‌ಟಿ) ಸಮುದಾಯಗಳ ಪುರುಷ ಮತ್ತು ಮಹಿಳಾ ಸದಸ್ಯರ ನಡುವಿನ ಉತ್ತರಾಧಿಕಾರ ಹಕ್ಕುಗಳಲ್ಲಿ ಸಮಾನತೆ ತರುವ ಅಗತ್ಯವಿದೆ ಸುಪ್ರೀಂ ಕೋರ್ಟ್ ಗುರುವಾರ ಒತ್ತಿಹೇಳಿದೆ [ತಿರಿತ್ ಕುಮಾರ್ ಮತ್ತಿತರರು ಹಾಗೂ ದಾದುರಾಮ್ ಇನ್ನಿತರರ ನಡುವಣ ಪ್ರಕರಣ].
ವಿಶೇಷವಾಗಿ ಸಮಾನತೆಯ ಹಕ್ಕನ್ನು ಸಂವಿಧಾನ ಭರವಸೆಯಾಗಿ ನೀಡಿರುವಾಗ ಎಸ್‌ಟಿ ಮಹಿಳೆಯರಿಗೆ ಸಮತೆಯ ಹಕ್ಕುಗಳನ್ನು ನಿರಾಕರಿಸುವುದು ಅಸಮರ್ಥನೀಯ ಎಂದು ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ತಿಳಿಸಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿರದ ಮಗಳು ಅಂತಹ ಹಕ್ಕಿಗೆ ಅರ್ಹಳಾಗಿದ್ದರೆ, ಎಸ್‌ಟಿ ಸಮುದಾಯಕ್ಕೆ ಸೇರಿದ ಮಗಳಿಗೆ ಆ ಹಕ್ಕನ್ನು ನಿರಾಕರಿಸಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆದ್ದರಿಂದ, ಹಿಂದೂ ಉತ್ತರಾಧಿಕಾರ ಕಾಯಿದೆ, 1956ರ ನಿಬಂಧನೆಗಳನ್ನು ಮರುಪರಿಶೀಲಿಸಿ ಅಂತಹ ಸಮುದಾಯಗಳಿಗೆ ಸೇರಿದ ಮಹಿಳೆಯರಿಗೆ ಸಮಾನವಾದ ಉತ್ತರಾಧಿಕಾರ ಹಕ್ಕುಗಳನ್ನು ಒದಗಿಸುವುದಕ್ಕಾಗಿ ಕಾಯಿದೆಯನ್ನು ಎಸ್‌ಟಿ ಸಮುದಾಯಗಳಿಗೂ ಅನ್ವಯಿಸುವಂತೆ ಕಾನೂನಿಗೆ ತಿದ್ದುಪಡಿ ಮಾಡುವುದನ್ನು ಪರಿಗಣಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದೆ.
ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯ ಮೂಲಕ ನಿರ್ದೇಶಿಸದ ಹೊರತು ಎಸ್‌ಟಿ ಸಮುದಾಯಗಳಿಗೆ ಕಾಯಿದೆ ಅನ್ವಯಿಸುವುದಿಲ್ಲ ಎಂದು ಪ್ರಸ್ತುತ ಕಾಯಿದೆಯ ಸೆಕ್ಷನ್ 2(2) ಹೇಳುತ್ತದೆ.
ಅಂತೆಯೇ ಸಂವಿಧಾನದ 342 ನೇ ವಿಧಿಯ ಅಡಿಯಲ್ಲಿ ಅಧಿಸೂಚಿತ ಪರಿಶಿಷ್ಟ ಪಂಗಡವಾಗಿರುವ 'ಸವಾರ ಬುಡಕಟ್ಟಿನʼ ಮಹಿಳೆಗೆ ಆಸ್ತಿ ಹಕ್ಕುಗಳನ್ನು ನೀಡುವ ಛತ್ತೀಸ್‌ಗಢ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಹಿಂದೂ ಉತ್ತರಾಧಿಕಾರ ಕಾಯಿದೆಯನ್ನು ಜಾರಿಗೊಳಿಸುವ ಮೊದಲು ಪ್ರತಿವಾದಿಗಳ ತಂದೆ (ಮರ್ದಾನ್) 1951ರಲ್ಲಿ ಮರಣಹೊಂದಿದ್ದರಿಂದ, ಪ್ರತಿವಾದಿಗಳು ಆ ಆಸ್ತಿಯಲ್ಲಿ ಯಾವುದೇ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಮೇಲ್ಮನವಿದಾರರು ವಾದಿಸಿದ್ದರು.
ಎರಡೂ ಕಡೆಯ ಕಕ್ಷಿದಾರರು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದು ಕಾಯಿದೆ ಜಾರಿಗೆ ಬರುವ ಮೊದಲೇ ಮರ್ದಾನ್ ಸಾವು ಸಂಭವಿಸಿದೆ. ಪರಿಣಾಮ, ಮರ್ದಾನ್ ಹೆಣ್ಣುಮಕ್ಕಳಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ ಎಂದು ಮೇಲ್ಮನವಿದಾರರ ಪರವಾಗಿ ಸಿವಿಲ್ ಹಾಗೂ ಮೊದಲ ಮೇಲ್ಮನವಿ ನ್ಯಾಯಾಲಯಗಳು ತೀರ್ಪು ನೀಡಿದ್ದವು.
ಇತ್ತ 1956ರ ಕಾಯಿದೆ ಎಸ್‌ಸಿ ಸಮುದಾಯಗಳಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿತಾದರೂ ಮರ್ದನ್‌ನ ಹೆಣ್ಣುಮಕ್ಕಳಿಗೆ ಬದುಕುಳಿಯುವ ಸವಲತ್ತು ವಿಸ್ತರಿಸುವುದಕ್ಕಾಗಿ ನ್ಯಾಯ, ಸಮಾನತೆ ಮತ್ತು ಉತ್ತಮ ಆತ್ಮಸಾಕ್ಷಿಯ ತತ್ವಗಳನ್ನು ಉಚ್ಚ ನ್ಯಾಯಾಲಯ ಪ್ರಕರಣದಲ್ಲಿ ಅನ್ವಯಿಸಿತು. ಇದರಿಂದ ಅಸಮಾಧಾನಗೊಂಡ ಮೇಲ್ಮನವಿದಾರರು ಪ್ರಸ್ತುತ ಮೇಲ್ಮನವಿ ಸಲ್ಲಿಸಿದ್ದರು.