ಕಡ್ಡಾಯ ಮರಾಠಿ ನಾಮಫಲಕ ಅಳವಡಿಕೆ ವಿರೋಧಿಸುವುದಕ್ಕಾಗಿ ವಕೀಲರಿಗೆ ಹಣ ಖರ್ಚು ಮಾಡುವ ಬದಲು ಸರಳವಾಗಿ ನಾಮಫಲಕಕ್ಕೆ ಹಣ ವ್ಯಯಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮುಂಬೈನ ವ್ಯಾಪಾರಿಗಳಿಗೆ ಬುದ್ಧಿವಾದ ಹೇಳಿದೆ. [ ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಘ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಫಲಕಗಳನ್ನು ಮುಂಬೈನಲ್ಲಿರುವ ಮರಾಠಿ ವ್ಯಕ್ತಿ ಓದುವಂತಿರಬೇಕು ಅರ್ಜಿದಾರರು ಸಮಸ್ಯೆಯನ್ನು ಅತಿರೇಕದ ಭಾಷಾಪ್ರೇಮ ಇಲ್ಲವೇ ಅನ್ಯಭಾಷಿಕರ ದ್ವೇಷ ಎಂದು ಬಿಂಬಿಸಬಾರದು ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಅರ್ಜಿದಾರರಿಗೆ ಮಾತಿನ ಪೆಟ್ಟು ನೀಡಿತು.
“ಹೊಸ ಫಲಕ ಹಾಕಲು ಏನು ಸಮಸ್ಯೆ? ಅದೇನಾದರೂ ಸಂವಿಧಾನದ ಗಂಭೀರ ಸಮಸ್ಯೆಯೇ? ವ್ಯಾಪಾರ ಮಾಡುವ ನಿಮ್ಮ ಹಕ್ಕಿಗೆ ಹೇಗೆ ಧಕ್ಕೆಯಾಗುತ್ತದೆ? ಮರದ ಹಲಗೆ ಹಾಕಿ ಬಣ್ಣ ಬಳಿಸಿರಿ. ಇದಕ್ಕೆಲ್ಲಾ ನೀವು ಹೋರಾಟ ಮಾಡಲೇಬಾರದು. ನೀವು ರಾಜ್ಯದಲ್ಲಿ ವ್ಯಾಪಾರ ಮಾಡುತ್ತಿದ್ದೀರಿ. ಮರಾಠಿ ಗೊತ್ತಿಲ್ಲದವರು ಓದುವಂತಾಗಲಿ. ಮುಂಬೈ ಮಹಾರಾಷ್ಟ್ರದಲ್ಲಿದ್ದು ಅದರ ರಾಜಧಾನಿಯಾಗಿದೆ. ಅತಿರೇಕದ ಭಾಷಾಪ್ರೇಮ ಇಲ್ಲವೇ ಅನ್ಯಭಾಷಿಕರ ದ್ವೇಷ ಎನ್ನುವುದೆಲ್ಲಾ ಬರೀ ಅಹಮಿನ ವಿಚಾರವಷ್ಟೇ. ವಕೀಲರಿಗೆ ಹಣ ಸುರಿಯವ ಬದಲು ದಯವಿಟ್ಟು ಫಲಕ ಹಾಕಿಕೊಳ್ಳಿ” ಎಂದು ನ್ಯಾ. ನಾಗರತ್ನ ಮೌಖಿಕವಾಗಿ ತಿಳಿಸಿದರು.
ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಘ ಸಲ್ಲಿಸಿದ್ದ ಮೂಲ ಅರ್ಜಿ ಮತ್ತು ಸಂಬಂಧಿತ ಇನ್ನೊಂದು ಅರ್ಜಿಯನ್ನು ನ್ಯಾಯಾಲಯ ಆಲಿಸಿತು. ಮರಾಠಿ ನಾಮಫಲಕಗಳಿಗೆ ನಿಯಮಾವಳಿ ರೂಪಿಸುವಲ್ಲಿ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿದೆ ಎಂದು ಎರಡೂ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ದೂರಿದ್ದವು.
ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ಗೆ ವರ್ಗಾಯಿಸಲು ಸರ್ವೋಚ್ಚ ನ್ಯಾಯಾಲಯ ಮೊದಲು ನಿರ್ಧರಿಸಿತಾದರೂ ಬಳಿಕ ಫಲಕ ಅಳವಡಿಸಿಕೊಳ್ಳುವ ನಿಯಮ ಬೆಂಬಲಿಸುವ ರಾಜ್ಯ ಸರ್ಕಾರದ ಅಫಿಡವಿಟ್‌ಗೆ ಮರು ಪ್ರತಿಕ್ರಿಯೆ ಸಲ್ಲಿಸಲು ಅರ್ಜಿದಾರರಿಗೆ ಮೂರು ವಾರಗಳ ಕಾಲಾವಕಾಶ ನೀಡಿತು.