A1
A1
ಸುದ್ದಿಗಳು

ವಕೀಲರ ಭೌತಿಕ ಹಾಜರಿಗೆ ಒತ್ತಾಯಿಸಿದ ಸುಪ್ರೀಂ: ವರ್ಚುವಲ್ ವಿಧಾನದಲ್ಲಿ ಕಾಣಿಸಿಕೊಂಡವರ ಪ್ರಕರಣ ಮುಂದೂಡಿಕೆ

Bar & Bench

ವಿಡಿಯೊ ಕಾನ್ಫರೆನ್ಸ್‌ ಸೌಲಭ್ಯದ ಮೂಲಕ ಹಾಜರಾಗುವ ಬದಲು ವಕೀಲರು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ರಜಾಕಾಲೀನ ಪೀಠ ಸೋಮವಾರ ಒತ್ತಾಯಿಸಿದೆ.

ನ್ಯಾಯಮೂರ್ತಿಗಳು ಪ್ರತಿದಿನ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದು ತಮ್ಮ ಪ್ರಕರಣ ಆಲಿಸಲು ಬಯಸುವ ವಕೀಲರು ಅದರಲ್ಲಿಯೂ ಹಿರಿಯ ನ್ಯಾಯವಾದಿಗಳು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಹೇಳಿತು.

"ನಾವು ಪ್ರತಿದಿನ ನ್ಯಾಯಾಲಯಕ್ಕೆ ಬರುತ್ತೇವೆ. (ವಕೀಲರೇ) ಬನ್ನಿ ವಾದಿಸಿ. ಭೌತಿಕವಾಗಿ ಹಾಜರಿರುವ ವಕೀಲರಿಗೆ ಅವಕಾಶ ದೊರೆಯಲಿದೆ" ಎಂದು ನ್ಯಾಯಮೂರ್ತಿ ರಸ್ತೋಗಿ ಹೇಳಿದರು.

ಈ ಹಿನ್ನೆಲೆಯಲ್ಲಿ ವೀಡಿಯೊ ಕಾನ್ಫರೆನ್ಸ್ ಸೌಲಭ್ಯದ ಮೂಲಕ ತಮ್ಮ ಪ್ರಕರಣಗಳನ್ನು ಆಲಿಸುವಂತೆ ಹಿರಿಯ ವಕೀಲರು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಪೀಠ ಅಂತಹ ಪ್ರಕರಣಗಳನ್ನು ಮುಂದೂಡಿತು. ಇದರಲ್ಲಿ ಹಿರಿಯ ನ್ಯಾಯವಾದಿಗಳಾದ ಮುಕುಲ್‌ ರೋಹಟ್ಗಿ ಮತ್ತು ಅಭಿಷೇಕ್‌ ಮನು ಸಿಂಘ್ವಿ ಅವರ ಪ್ರಕರಣಗಳೂ ಸೇರಿದ್ದವು. ರಜೆ ಇರುವುದು ಕಿರಿಯ ವಕೀಲರಿಗೆ ಹಿರಿಯ ನ್ಯಾಯವಾದಿಗಳಿಗಲ್ಲ ಎಂದು ಕೂಡ ನ್ಯಾಯಾಲಯ ಕಿವಿಮಾತು ಹೇಳಿತು.

ನೀವು ನ್ಯಾಯಾಲಯದಲ್ಲಿ ಇಲ್ಲದೆ ಇರುವಾಗ ನಾವೇಕೆ ನಿಮ್ಮನ್ನು ಆಲಿಸಲು ಅನುಮತಿಸಬೇಕು. ರಜೆಯ ನಡುವೆಯೂ ಅನೇಕರು ಇಲ್ಲಿದ್ದಾರೆ ಎಂದು ರೋಹಟ್ಗಿ ಅವರಿಗೆ ನ್ಯಾಯಾಲಯ ಹೇಳಿತು.