A1
A1
ಸುದ್ದಿಗಳು

ನಟ ಸುಶಾಂತ್ ಸಿಂಗ್ ಮಾದಕ ವ್ಯಸನಿಯಾಗಲು ಆರೋಪಿಗಳು ಕುಮ್ಮಕ್ಕು ನೀಡಿದ್ದರು: ಮುಂಬೈ ನ್ಯಾಯಾಲಯಕ್ಕೆ ಎನ್‌ಸಿಬಿ

Bar & Bench

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜದ ಮೇಲ್ವರ್ಗ ಮತ್ತು ಬಾಲಿವುಡ್‌ ಮಂದಿಗಾಗಿ ಮಾದಕ ವಸ್ತು ಖರೀದಿ, ಸಂಗ್ರಹ ಹಾಗೂ ವಿತರಣೆಯಲ್ಲಿ ತೊಡಗಿದ್ದ 35 ಆರೋಪಿಗಳ ವಿರುದ್ಧ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಕರಡು ಆರೋಪ ಪಟ್ಟಿ ಸಲ್ಲಿಸಿದೆ. ಈ ಕರಡು ಪಟ್ಟಿ ಸಲ್ಲಿಕೆಯಾಗಿದೆ.

ನಟಿ ರಿಯಾ ಚಕ್ರವರ್ತಿ ಇತರ ಇಬ್ಬರೊಂದಿಗೆ ಮೃತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಹವಾಸಿ ಆಗಿದ್ದ ಸಿದ್ಧಾರ್ಥ್‌ ಪಿಠಾನಿ, ನೇರ ಸಂಪರ್ಕದಲ್ಲಿದ್ದು ಸುಶಾಂತ್‌ ತೀವ್ರ ಮಾದಕ ವ್ಯಸನಕ್ಕೆ ಪ್ರಚೋದನೆ ನೀಡಿದ್ದರು ಎಂದು ಎನ್‌ಸಿಬಿ ಆರೋಪಿಸಿದೆ.

ಒಟ್ಟು 11,700 ಪುಟಗಳ ಭೌತಿಕ ಪ್ರತಿ ಮತ್ತು 50,000 ಪುಟಗಳಷ್ಟು ಡಿಜಿಟಲ್ ರೂಪದಲ್ಲಿ - ಸಿಡಿಗಳ ರೂಪದಲ್ಲಿ- ಸಂಸ್ಥೆಯು ಈ ಹಿಂದೆ ಆರೋಪಪಟ್ಟಿ ಸಲ್ಲಿಸಿತ್ತು. ಆರೋಪಿಗಳಲ್ಲಿ ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್‌ ಚಕ್ರವರ್ತಿ, ಬಾಲಿವುಡ್ ನಿರ್ಮಾಪಕ ಕ್ಷಿತಿಜ್ ಪ್ರಸಾದ್, ರಜಪೂತ್ ಅವರ ಸಹವಾಸಿ ಸಿದ್ಧಾರ್ಥ್ ಪಿಠಾನಿ ಹಾಗೂ ಇತರ 31 ಮಂದಿ ಸೇರಿದ್ದಾರೆ. ಮಾದಕವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ ಸೆಕ್ಷನ್ 8(ಸಿ), 20(ಬಿ)(ii), 22, 27ಎ, 28, 29 ಹಾಗೂ 30ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

“ಆರೋಪಿ ಸಂಖ್ಯೆ. 1ರಿಂದ 35ನೇ ಆರೋಪಿಯವರೆಗೆ ಎಲ್ಲರೂ 2020ರ ಮಾರ್ಚ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಪರಸ್ಪರ ಅಥವಾ ಗುಂಪುಗಳಲ್ಲಿ ಮಾದಕ ವಸ್ತು ಖರೀದಿ, ಮಾರಾಟ, ಸಾಗಣೆ ಹಾಗೂ ಸಮಾಜದ ಉನ್ನತ ವರ್ಗ ಮತ್ತು ಬಾಲಿವುಡ್‌ ಮಂದಿಗೆ ವಿತರಿಸಲು, ಹಣಕಾಸು ನೀಡಲು ಕ್ರಿಮಿನಲ್‌ ಪಿತೂರಿ ಮಾಡಿದ್ದಾರೆ” ಎಂದು ಕರಡು ಆರೋಪಪಟ್ಟಿ ವಿವರಿಸಿದೆ. ಅಲ್ಲದೆ ಅದರಲ್ಲಿ ಪ್ರತಿ ಆರೋಪಿಯ ವಿರುದ್ಧವೂ ಪ್ರತ್ಯೇಕ ಆರೋಪಗಳನ್ನು ಮಾಡಲಾಗಿದೆ.

ಶೋವಿಕ್‌ ಡ್ರಗ್‌ ಪೂರೈಕದಾರರ ಜತೆ ನಿರಂತರ ಸಂಪರ್ಕದಲ್ಲಿದ್ದು ಡ್ರಗ್ಸ್‌ ಒದಗಿಸಲು ಪೆಡ್ಲರ್‌ಗಳಲ್ಲಿ ಕೋರಿಕೆ ಇಡುತ್ತಿದ್ದರು ಹಾಗೂ ಇತರರಿಗೆ ಒದಗಿಸುವ ಸಲುವಾಗಿ ಅಮಲು ಪದಾರ್ಥಗಳನ್ನು ಪೆಡ್ಲರ್‌ಗಳಿಂದ ಪಡೆಯುತ್ತಿದ್ದರು. ಕೆಲ ಪ್ರಮಾಣದ ಡ್ರಗ್ಸ್‌ಅನ್ನು ಸುಶಾಂತ್‌ಗೆ ಕೂಡ ಪೂರೈಸಿದ್ದರು. ಇನ್ನು ರಿಯಾ ಚಕ್ರವರ್ತಿಯು ಪೆಡ್ಲರ್‌ಗಳ ಮುಖೇನ ಶೋವಿಕ್ ಸ್ವೀಕರಿಸಿದ ಡ್ರಗ್ಸ್‌ಗಳಿಗೆ ಹಣ ಪಾವತಿಸಿದ್ದರು.

ಇನ್ನು ಪಿಠಾಣಿಯು ಸುಶಾಂತ್‌ಗೆ ಡ್ರಗ್ಸ್‌ ಪೂರೈಸುವ ಸಲುವಾಗಿ ಸಹ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು. ಇದಕ್ಕಾಗಿ ಅವರು ಸುಶಾಂತ್‌ ಬ್ಯಾಂಕ್‌ ಖಾತೆಗಳನ್ನು ಬಳಸಿ ಹಣ ಪಾವತಿಸುತ್ತಿದ್ದರು. ಆ ಮೂಲಕ ಸುಶಾಂತ್‌ ಅವರು "ಅತಿಯಾದ ಮಾದಕವಸ್ತು ಸೇವನೆ" ಚಟ ಹತ್ತಿಸಿಕೊಳ್ಳಲು ಪ್ರಚೋದನೆ ನೀಡಿ ಇದಕ್ಕಾಗಿ ಸಹಾಯ ಮಾಡಿದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.