ಸುದ್ದಿಗಳು

ಸುಶಾಂತ್‌ ಸಹೋದರಿ, ವೈದ್ಯರ ವಿರುದ್ಧ ರಿಯಾ ದೂರು; ಮಾನದಂಡಗಳಿಗೆ ಹೊರತಾಗಿ ಅಕ್ರಮವಾಗಿ ಔಷಧ ನೀಡಿದ ಆರೋಪ

Bar & Bench

ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಪ್ರಿಯಾಂಕಾ ಸಿಂಗ್, ಡಾ. ತರುಣ್ ಕುಮಾರ್ ಮತ್ತು ಇತರೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಮಾದಕ ವಸ್ತು ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌)-1985 ಮತ್ತು ಟೆಲಿಮೆಡಿಸನ್ ಬಳಕೆ ಮಾರ್ಗಸೂಚಿ-2020 ಉಲ್ಲಂಘನೆ ಅನ್ವಯ ನಟಿ ರಿಯಾ ಚಕ್ರವರ್ತಿ ಅವರು ಮುಂಬೈ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಹೆಸರಾಂತ ವೈದ್ಯರ ಬಳಿ ಸುಶಾಂತ್ ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಉನ್ಮಾದ ಖಿನ್ನತೆ (ಬೈಪೋಲಾರ್ ಡಿಸಾರ್ಡರ್) ಇತ್ತು. ಆದರೆ, ಅವರು ಚಿಕಿತ್ಸೆಯ ಬಗ್ಗೆ ಶಿಸ್ತುವಹಿಸುತ್ತಿರಲಿಲ್ಲ ಎಂದು ರಿಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೂನ್ 8ರಂದು ಸಹೋದರಿ ಸಲಹೆ ನೀಡಿದ ಔಷಧ ತೆಗೆದುಕೊಳ್ಳುವುದಾಗಿ ಸುಶಾಂತ್ ಹೇಳಿದ್ದರಿಂದ ನಟನ ಮನೆ ತೊರೆಯಬೇಕಾಯಿತು ಎಂದಿರುವ ರಿಯಾ, ಹೆಸರಾಂತ ವೈದ್ಯರೊಬ್ಬರು ಈಗಾಗಲೇ ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ತನ್ನ ಮತ್ತು ಸುಶಾಂತ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಡಾ. ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯ ಹೃದ್ರೋಗಗಳ ಸಹಾಯಕ ಪ್ರಾಧ್ಯಾಪಕರಾದ ಡಾ. ತರುಣ್ ಕುಮಾರ್ ಅವರು ಅಕ್ರಮವಾಗಿ ಔಷಧ ಸಲಹೆ ಮಾಡಿದ್ದಾರೆ. ಸಮಾಲೋಚನೆ ನಡೆಸದೇ ವಿದ್ಯುನ್ಮಾನ ರೂಪದಲ್ಲಿ ಯಾವುದೇ ತೆರನಾದ ಔಷಧ ತೆಗೆದುಕೊಳ್ಳುವಂತೆ ಸೂಚಿಸುವಂತಿಲ್ಲ. ಸದರಿ ಔಷಧ ತೆಗೆದುಕೊಳ್ಳುವಂಥ ಸೂಚನೆಯು ಟೆಲಿಮೆಡಿಸಿನ್ ಬಳಕೆ ಮಾರ್ಗಸೂಚಿ-2020ಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಯಾವುದೇ ತೆರನಾದ ಸಮಾಲೋಚನೆ ಅಥವಾ ಪರೀಕ್ಷೆ ನಡೆಸದೇ ಸೈಕೋಟ್ರೋಪಿಕ್ (ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಉಂಟು ಮಾಡುವಂತಹ) ಔಷಧ ನೀಡಿರುವ ಪ್ರಿಯಾಂಕಾ ಸಿಂಗ್ ಮತ್ತು ವೈದ್ಯರ ನಡೆಯು ಎನ್‌ಡಿಪಿಎಸ್ ಕಾಯಿದೆ-1985ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರುದಾರರು ವಿವರಿಸಿದ್ದಾರೆ.

ನಿಗದಿತ ಔಷಧ ತೆಗೆದುಕೊಳ್ಳಲು ಹೇಳಿದ ಐದು ದಿನಗಳ ಬಳಿಕ ಸುಶಾಂತ್ ಸಾವನ್ನಪ್ಪಿದ್ದಾರೆ. ಪ್ರಸ್ತುತ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್, ವೈದ್ಯ ಮತ್ತು ಇತರರನ್ನು ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ರಿಯಾ ಮನವಿ ಮಾಡಿದ್ದಾರೆ.

ಅಕಾಲಿಕವಾಗಿ ಸಾವನ್ನಪ್ಪಿದ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ರಜಪೂತ್ ತಂದೆ ಪಟ್ನಾದಲ್ಲಿ ರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ತನಿಖೆಯ ಜವಾಬ್ದಾರಿ ಹಸ್ತಾಂತರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಿಬಿಐಗೆ ಸಲ್ಲಿಸುವಂತೆ ಮುಂಬೈ ಪೊಲೀಸರಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಪ್ರಮುಖ ಆರೋಪಿಗಳಾದ ರಿಯಾ, ಶೌವಿಕ್ ಚಕ್ರವರ್ತಿ, ಇಂದ್ರಜಿತ್ ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ, ಸಿದ್ಧಾರ್ಥ್‌ ಪಿಠಣಿ, ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ಶ್ರುತಿ ಮೋದಿ ಅವರನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ವಿಚಾರಣೆಗೆ ಒಳಪಡಿಸಿದ ಬಳಿಕ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.