ಸರ್ಕಾರಿ ಉದ್ಯೋಗಕ್ಕೆ ಪುತ್ರಿಯು ಅಕ್ರಮವಾಗಿ ನೇಮಕವಾಗಲು ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ ಆರೋಪದ ಮೇಲೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿರುವ ಅರ್ಜಿಯಲ್ಲಿ ಸರ್ಕಾರವನ್ನು ಪ್ರತಿವಾದಿ ಮಾಡುವಂತೆ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಸೂಚಿಸಿದೆ.
ರಾಜ್ಯಪಾಲರ ಆದೇಶ ರದ್ದುಕೋರಿ ಶಿವಶಂಕರಪ್ಪ ಸಾಹುಕಾರ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಅರ್ಜಿ ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಸಂವಿಧಾನದ 317(1)ನೇ ವಿಧಿಯ ಅನ್ವಯ ಕೆಪಿಎಸ್‌ಸಿ ಅಧ್ಯಕ್ಷರ ಮೇಲೆ ಆರೋಪವಿದ್ದರೆ, ಮೊದಲಿಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ರಾಷ್ಟ್ರಪತಿಗಳು ಶಿಫಾರಸ್ಸು ಮಾಡಬೇಕಾಗುತ್ತದೆ. ವಿಚಾರಣಾ ವರದಿ ಬರುವವರೆಗೆ 317(2)ನೇ ವಿಧಿ ಅನ್ವಯ ರಾಜ್ಯಪಾಲರು ಅಮಾನತು ಆದೇಶ ಹೊರಡಿಸಬೇಕಾಗುತ್ತದೆ. ಹಾಗೆಯೇ ಸಚಿವ ಸಂಪುಟದ ಸಲಹೆ ಹಾಗೂ ಶಿಫಾರಸ್ಸು ಇಲ್ಲದೇ ಅಮಾನತು ಮಾಡುವಂತಿಲ್ಲ. ಹೀಗಾಗಿ, ಈ ನಿಯಮಕ್ಕೆ ವಿರುದ್ಧವಾಗಿ ರಾಜ್ಯಪಾಲರು ಅರ್ಜಿದಾರರ ಅಮಾನತು ಆದೇಶ ಹೊರಡಿಸಿದ್ದಾರೆ. ಅದು ಅಪಕ್ವ ಹಾಗೂ ಕಾನೂನುಬಾಹಿರವಾಗಿದೆ. ಹೀಗಾಗಿ, ಆದೇಶಕ್ಕೆ ತಡೆ ನೀಡಿ ಅರ್ಜಿದಾರರಿಗೆ ರಕ್ಷಣೆ ಕಲ್ಪಿಸಬೇಕು” ಎಂದು ಕೋರಿದರು.
ರಾಜ್ಯಪಾಲರ ಕಾರ್ಯದರ್ಶಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು “ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್‌ಸಿಯ ಹಿತಾಸಕ್ತಿ ಮತ್ತು ಸಾರ್ವಜನಿಕರ ನಂಬಿಕೆ ರಕ್ಷಿಸಲು ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತು ಮಾಡಲಾಗಿದೆ. ಗಂಭೀರ ಆರೋಪಗಳಿದ್ದ ಪಕ್ಷದಲ್ಲಿ ರಾಜ್ಯಪಾಲರೇ ಅಮಾನತು ಮಾಡಬಹುದು. ಇನ್ನೂ ರಾಜ್ಯ ಸರ್ಕಾರದ ಸಚಿವ ಸಂಪುಟ ಸದಸ್ಯರ ಸಲಹೆಯಿಲ್ಲದೇ ಅರ್ಜಿದಾರರನ್ನು ಅಮಾನತು ಆದೇಶ ಮಾಡುವಂತಿಲ್ಲ ಎಂದು ವಾದಿಸಲಾಗಿದೆ. ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ವಾದ ಮಂಡನೆ ವೇಳೆ ಹೇಳಲಾಗುತ್ತಿದೆ. ಈ ಅಂಶ ಆಧರಿಸುವುದಾದರೆ ಅರ್ಜಿಯಲ್ಲಿ ಸರ್ಕಾರವನ್ನು ಸಹ ಪ್ರತಿವಾದಿ ಮಾಡಬೇಕು” ಎಂದು ಪೀಠದ ಗಮನಕ್ಕೆ ತಂದರು.
ಈ ಅಂಶ ಪರಿಗಣಿಸಿದ ಪೀಠವು ಸರ್ಕಾರವನ್ನು ಪಕ್ಷಗಾರನನ್ನಾಗಿ (ಪ್ರತಿವಾದಿ) ಮಾಡುವ ಬಗ್ಗೆ ನಿರ್ಧರಿಸುವಂತೆ ಅರ್ಜಿದಾರರಿಗೆ ಸೂಚಿಸಿತು.
ಅರ್ಜಿದಾರರ ಪರ ವಕೀಲರು “ರಾಜ್ಯ ಸಚಿವ ಸಂಪುಟ ಸದಸ್ಯರ ಸಲಹೆ ಹಾಗೂ ಶಿಫಾರಸ್ಸು ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ರಾಜ್ಯಪಾಲರೇ ಹೇಳಬೇಕಾಗುತ್ತದೆ. ಒಂದೊಮ್ಮೆ ರಾಜ್ಯ ಸಚಿವ ಸಂಪುಟ ಸದಸ್ಯರ ಸಲಹೆ ಹಾಗೂ ಶಿಫಾರಸ್ಸು ಇದ್ದಿದ್ದರೆ, ಅದನ್ನು ರಾಜ್ಯಪಾಲರು ತಮ್ಮ ಆದೇಶದಲ್ಲಿ ಕಾಣಿಸುತ್ತಿದ್ದರು ಎಂದರಲ್ಲದೇ, ಸರ್ಕಾರವನ್ನು ಪಕ್ಷಗಾರನನ್ನಾಗಿ ಮಾಡಲು ಎಂದು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದರಿಂದ ಅರ್ಜಿಯ ವಿಚಾರಣೆಯನ್ನು ಪೀಠ ಶುಕ್ರವಾರಕ್ಕೆ ಮುಂದೂಡಿತು.