CJI NV Ramana, Swami Vivekananda 
ಸುದ್ದಿಗಳು

ದೇಶದ ಸಂವಿಧಾನ ರಚನೆಗೂ ಮುನ್ನವೇ ಸ್ವಾಮಿ ವಿವೇಕಾನಂದರು ಜಾತ್ಯತೀತತೆ ಪ್ರತಿಪಾದಿಸಿದ್ದರು: ಸಿಜೆಐ ಎನ್ ವಿ ರಮಣ

ಧರ್ಮ ಎಂಬುದು ಮೌಢ್ಯ ಮತ್ತು ಜಿಗುಟುತನ ಮೀರಿ ಬೆಳೆಯಬೇಕು ಎಂದು ಸ್ವಾಮಿ ವಿವೇಕಾನಂದರು ಬಯಸಿದ್ದರು ಎಂಬುದಾಗಿ ನ್ಯಾ. ರಮಣ ತಿಳಿಸಿದರು.

Bar & Bench

ದೇಶದ ಸಂವಿಧಾನ ರಚನೆಗೂ ಮೊದಲೇ ಸ್ವಾಮಿ ವಿವೇಕಾನಂದರು ಜಾತ್ಯತೀತತೆ ಪ್ರತಿಪಾದಿಸಿದ್ದರು ಮತ್ತು ದೇಶವನ್ನು ಪಾಶ್ಚಾತ್ಯ ರಾಷ್ಟ್ರಗಳ ವಸಾಹತು ಎಂದು ಕರೆಯುತ್ತಿದ್ದ ಸಂದರ್ಭದಲ್ಲಿ ಅವರ ಬೋಧನೆಗಳು ಗಮನ ಸೆಳೆದವು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ತಿಳಿಸಿದರು.

ಹೈದರಾಬಾದ್‌ನ ವಿವೇಕಾನಂದ ಇನ್ ಸ್ಟಿಟ್ಯೂಟ್ ಆಫ್ ಹ್ಯೂಮನ್ ಎಕ್ಸಲೆನ್ಸ್‌ನ 22ನೇ ಸಂಸ್ಥಾಪನಾ ದಿನ ಹಾಗೂ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 128ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮ ಎಂಬುದು ಮೌಢ್ಯ ಮತ್ತು ಜಿಗುಟುತನವನ್ನು ಮೀರಿ ಬೆಳೆಯಬೇಕು ಎಂದು ಸ್ವಾಮಿ ವಿವೇಕಾನಂದರು ಬಯಸಿದ್ದರು ಮತ್ತು ಧರ್ಮದ ನಿಜ ಸಾರವೆಂದರೆ ಸಹಿಷ್ಣುತೆ ಮತ್ತು ಸರ್ವಜನರ ಒಳಿತು ಎಂದು ಅವರು ನಂಬಿದ್ದರು ಎಂಬುದಾಗಿ ಅವರು ಹೇಳಿದರು.

"ಸ್ವಾತಂತ್ರ್ಯ ಹೋರಾಟದ ವೇಳೆ ಉಪಖಂಡದಲ್ಲಿ ನೋವಿನ ಆಂದೋಲನ ಎದ್ದು ಭಾರತದ ಸಮಾನತೆಯ ಸಂವಿಧಾನ ರೂಪುಗೊಳ್ಳುವ ಬಹು ಹಿಂದೆಯೇ, ವಿದ್ಯಮನಗಳ ಮುನ್ಸೂಚನೆಯಂತೆ ಅವರು ಜಾತ್ಯತೀತತೆಯನ್ನು ಪ್ರತಿಪಾದಿಸಿದರು. ಧರ್ಮದ ನಿಜ ಸಾರವೆಂದರೆ ಸಹಿಷ್ಣುತೆ ಮತ್ತು ಸರ್ವಜನರ ಒಳಿತು ಎಂದು ಅವರು ನಂಬಿದ್ದರು . ಧರ್ಮ ಎಂಬುದು ಮೌಢ್ಯ ಮತ್ತು ಮೊಂಡುತನವನ್ನು ಮೀರಿ ಬೆಳೆಯಬೇಕು ಎಂದು ಅವರು ಬಯಸಿದ್ದರು” ಎಂಬುದಾಗಿ ನ್ಯಾ. ರಮಣ ವಿವರಿಸಿದರು.

1893 ರಲ್ಲಿ ಚಿಕಾಗೋದಲ್ಲಿ ನಡೆದ ʼಧರ್ಮಗಳ ಸಂಸತ್ತಿನಲ್ಲಿʼ ಅವರ ಭಾಗವಹಿಸಿದ್ದು ಆಗ ಕೇವಲ ವಸಾಹತುಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದ ದೇಶಕ್ಕೆ ಗೌರವಯುತ ಮನ್ನಣೆ ದೊರಕಿಸಿಕೊಟ್ಟಿತು. ಅವರ ಭಾಷಣ ವೇದದ ಪ್ರಾಚೀನ ಭಾರತೀಯ ತತ್ವಜ್ಞಾನದತ್ತ ವಿಶ್ವದ ಗಮನ ಸೆಳೆಯುವಂತೆ ಮಾಡಿತು. ಪ್ರೀತಿ, ಸಹಾನುಭೂತಿ ಮತ್ತು ಎಲ್ಲರಿಗೂ ಸಮಾನ ಗೌರವವನ್ನು ಬೋಧಿಸುವ ಪ್ರಾಯೋಗಿಕ ವೇದಾಂತವನ್ನು ಜನಪ್ರಿಯಗೊಳಿಸಿತು. ಅವರ ಬೋಧನೆಗಳು ಎಲ್ಲಾ ಕಾಲಕ್ಕೂ ಹೆಚ್ಚು ಪ್ರಸ್ತುತವಾಗಿವೆ "ಎಂದು ಅವರು ಸ್ಮರಿಸಿದರು.

ವಿವೇಕಾನಂದರು ಯುವಕರಿಗೆ ನೀಡಿದ ಕೊಡುಗೆಯನ್ನು ಕೂಡ ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. "ಭವಿಷ್ಯದ ಭರವಸೆ ಯುವಕರ ಕೈಯಲ್ಲಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು... ದೇಶದ ಸ್ವಭಾವ ಯುವಕರ ಸ್ವಭಾವವನ್ನು ಅವಲಂಬಿಸಿರುತ್ತದೆ. ಯುವಕರು ನೀಡಿದ ಶಕ್ತಿಯ ಸಾಕ್ಷಿಯಾಗಿದೆ ಇತಿಹಾಸ. ಬಿರ್ಸಾ ಮುಂಡಾ ಅಥವಾ ಭಗತ್‌ ಸಿಂಗ್‌ ಮತ್ತು ಮೂವರು ಸಹವರ್ತಿಗಳು ಇಲ್ಲವೇ ಪ್ರತಿರೋಧ ಚಳವಳಿ ವೇಳೆ ಗುಂಡೇಟಿಗೆ ಬಲಿಯಾದ ಅಲ್ಲೂರಿ ಸೀತಾರಾಮ ರಾಜು ಅವರ ಉಲ್ಲೇಖವಿಲ್ಲದೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ಅಪೂರ್ಣವಾಗುತ್ತದೆ” ಎಂದು ಸಿಜೆಐ ತಿಳಿಸಿದರು.

"ಯುವಕರ ಧ್ವನಿ ಮತ್ತು ಶಕ್ತಿ ಜಗತ್ತನ್ನು ಬದಲಾಯಿಸಬಲ್ಲದು. ಅವರ ಹಕ್ಕುಗಳು ಮತ್ತು ಹೊಣೆಗಾರಿಕೆ ಬಗ್ಗೆ ಅರಿವು ಮೂಡಿಸುವ ದೊಡ್ಡ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿದೆ ಎಂಬುದು ಚೆನ್ನಾಗಿ ತಿಳಿದಿರುವ ವಿಚಾರ" ಎಂದು ಅವರು ಹೇಳಿದರು.