[ಆಂಧ್ರ ವರ್ಸಸ್‌ ತೆಲಂಗಾಣ ಜಲ ವಿವಾದ] ಕಾನೂನು ವಿಚಾರ ಆಲಿಸಲಾಗದು, ಸಂಧಾನದಲ್ಲಿ ಸಹಾಯ ಮಾಡುವೆ: ಸಿಜೆಐ ರಮಣ

ನಾನು ಎರಡೂ ರಾಜ್ಯಗಳಿಗೆ ಸೇರಿದವನಾಗಿದ್ದು, ಕಾನೂನು ವಿಚಾರಗಳನ್ನು ಆಲಿಸಲು ನನಗೆ ಇಚ್ಛೆ ಇಲ್ಲ. ಉಭಯ ಪಕ್ಷಕಾರರು ಸಂಧಾನಕ್ಕೆ ನಿರ್ಧರಿಸಿದರೆ ನಾನು ಸಹಾಯ ಮಾಡುವೆ ಎಂದು ಹೇಳಿದ್ದಾರೆ.
CJI Ramana, Andhra Pradesh and Telangana
CJI Ramana, Andhra Pradesh and Telangana

ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಉದ್ಭವಿಸಿರುವ ಜಲ ವಿವಾದ ಕುರಿತು ತಾನು ಕಾನೂನು ವಿಚಾರಗಳನ್ನು ಆಲಿಸಲು ಸಿದ್ಧವಿಲ್ಲ. ಆದರೆ, ಉಭಯ ರಾಜ್ಯಗಳ ನಡುವೆ ಸಂಧಾನಕ್ಕೆ ಒಲವು ಹೊಂದಿರುವುದಾಗಿ ಸೋಮವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಹೇಳಿದ್ದಾರೆ.

ತಮ್ಮ ಸರ್ಕಾರಗಳಿಂದ ಅಭಿಪ್ರಾಯ ಪಡೆದುಕೊಳ್ಳುವಂತೆ ಉಭಯ ರಾಜ್ಯಗಳ ವಕೀಲರಿಗೆ ಸೂಚಿಸಿರುವ ಸಿಜೆಐ ರಮಣ ಅವರು ಪ್ರಕರಣವನ್ನು ಆಗಸ್ಟ್‌ 4ರಂದು ಪರಿಗಣಿಸಲಾಗುವುದು ಎಂದಿದ್ದಾರೆ.

“ನಾನು ಎರಡೂ ರಾಜ್ಯಗಳಿಗೆ ಸೇರಿದವನಾಗಿದ್ದು, ಕಾನೂನು ವಿಚಾರಗಳನ್ನು ಆಲಿಸಲು ನನಗೆ ಇಚ್ಛೆ ಇಲ್ಲ. ಉಭಯ ಪಕ್ಷಕಾರರು ಒಪ್ಪಿದರೆ ನಾನು ಸಂಧಾನಕ್ಕೆ ಸಹಾಯ ಮಾಡುವೆ” ಎಂದಿದ್ದಾರೆ.

ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗಾಗಿ ಶಾಸನಬದ್ಧವಾಗಿ ತಮಗೆ ಸಿಗಬೇಕಾದ ನೀರು ಹರಿಸಲು ತೆಲಂಗಾಣ ಸಮ್ಮತಿಸುತ್ತಿಲ್ಲ ಎಂದು ಆರೋಪಿಸಿ ಆಂಧ್ರ ಪ್ರದೇಶ ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರನ್ನು ಒಳಗೊಂಡ ಪೀಠ ಆಲಿಸಿತು.

ಅರ್ಜಿಯಲ್ಲಿ ಕೆಳಗಿನ ಕೋರಿಕೆಗಳನ್ನು ಉಲ್ಲೇಖಿಸಲಾಗಿದೆ:

2014ರ ಕಾಯಿದೆಯ ಅನ್ವಯ ವ್ಯಾಪ್ತಿಯ ಕುರಿತು ಅಧಿಸೂಚನೆ ಹೊರಡಿಸುವಂತೆ ತೆಲಂಗಾಣ ಸರ್ಕಾರಕ್ಕೆ ನಿರ್ದೇಶಿಸಬೇಕು.

ತೆಲಂಗಾಣ ಸರ್ಕಾರವು ಜೂನ್‌ 28ರಂದು ಹೊರಡಿಸಿರುವ ಆದೇಶವು ಅನ್ಯಾಯ ಮತ್ತು ಕಾನೂನುಬಾಹಿರ ಎಂದು ಹೇಳಿ ಅದನ್ನು ವಜಾ ಮಾಡಬೇಕು.

ಸಾಮಾನ್ಯ ಅಣೆಕಟ್ಟುಗಳಾದ ಶ್ರೀಶೈಲಂ, ನಾಗಾರ್ಜುನಸಾಗರ ಮತ್ತು ಪುಲಿಚಿಂತಲ ಅಣೆಕಟ್ಟೆಗಳು ಸೇರಿದಂತೆ ಹೊರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಆಂಧ್ರ ಪ್ರದೇಶಕ್ಕೆ ಅನುಮತಿಸಬೇಕು.

ತೆಲಂಗಾಣವು ವಿದ್ಯುತ್‌ ಉತ್ಪಾದನೆಗೆ ಇಳಿದಿರುವುದರಿಂದ ಶ್ರೀಶೈಲಂ ಅಣೆಕಟ್ಟು ಯೋಜನೆಯಲ್ಲಿ ನೀರಿನ ಸಂಗ್ರಹ ಸಾಮರ್ಥ್ಯವು ಗಣನೀಯವಾಗಿ ಕುಗ್ಗಿದೆ. ಇದನ್ನು ನಿಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ ಆಂಧ್ರ ಪ್ರದೇಶ ಸರ್ಕಾರ ಮನವಿ ಮಾಡಿದರೂ ಅದನ್ನು ಅನುಸರಿಸಲಾಗುತ್ತಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
ಕೃಷ್ಣಂ ರಾಜು ಪ್ರಕರಣ: ಸಿಐಡಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ಆಂಧ್ರ ಹೈಕೋರ್ಟ್

“ಶ್ರೀಶೈಲಂ, ನಾಗಾರ್ಜುನಸಾಗರ, ಪುಲಿಚಿಂತಲಾ ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿರುವುದು ಆಂಧ್ರ ಪ್ರದೇಶದ ಜನರಿಗೆ ಭಾರಿ ಸಮಸ್ಯೆ ಉಂಟು ಮಾಡಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ. ತೆಲಂಗಾಣ ಸರ್ಕಾರದ ಕ್ರಮವು ಅಸಾಂವಿಧಾನಿಕವಾಗಿದ್ದು, ಆಂಧ್ರ ಪ್ರದೇಶ ಜನರ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದೆ.

ಆಂಧ್ರ ಪ್ರದೇಶ ವಿಭಜನಾ ಕಾಯಿದೆ 2014 ಮತ್ತು ಕೃಷ್ಣ ನದಿ ನಿರ್ವಹಣಾ ಮಂಡಳಿ ಹಾಗೂ ಭಾರತ ಸರ್ಕಾರದ ನಿರ್ದೇಶನಗಳ ಅನ್ವಯ ಜಾರಿಗೆ ಬಂದಿರುವ ಸರ್ವೋಚ್ಚ ಮಂಡಳಿಯಲ್ಲಿ ಕೈಗೊಳ್ಳಲಾದ ನಿರ್ಧಾರವನ್ನು ಪಾಲಿಸಲು ತೆಲಂಗಾಣ ಸರ್ಕಾರ ನಿರಾಕರಿಸುತ್ತಿದೆ ಎಂದು ಮನವಿಯಲ್ಲಿ ಆಪಾದಿಸಲಾಗಿದೆ.

Kannada Bar & Bench
kannada.barandbench.com