ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಸ್ಟ್ಯಾನ್ ಸ್ವಾಮಿಯಂತಹ ವ್ಯಕ್ತಿಗಳಿಗೆ ಆಡಳಿತ ಪಕ್ಷದೊಂದಿಗೆ ನಂಟಿಲ್ಲದ ಕಾರಣ ಜಾಮೀನು ನಿರಾಕರಿಸಲಾಗಿತ್ತು ಆದರೆ ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್ ಅಧಿಕಾರದಲ್ಲಿರುವವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ಅವರಿಗೆ ಆಗಾಗ್ಗೆ ಪೆರೋಲ್ ದೊರೆಯುತ್ತದೆ ಎಂಬ ಹೇಳಿಕೆ ಒಪ್ಪುವಂಥದ್ದಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಓಕಾ ಹೇಳಿದ್ದಾರೆ.
ʼಸರ್ಕಾರವನ್ನು ಹೊಣೆ ಮಾಡುವುದು: ಸ್ವತಂತ್ರ ನ್ಯಾಯಾಂಗ ಮತ್ತು ಮುಕ್ತ ಪತ್ರಿಕೆಯ ಪಾತ್ರʼ ಎಂಬ ವಿಷಯದ ಕುರಿತು ಮುಂಬೈನ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಡಳಿತ ಪಕ್ಷದ ಆಪ್ತರಿಗೆ ಮಾತ್ರ ಜಾಮೀನು ಸಿಗುತ್ತದೆ ಎಂದು ದೂರುವ ಮೊದಲು ವ್ಯವಸ್ಥಿತ ಅಧ್ಯಯನ ನಡೆಸಿರಬೇಕು. ಅಂತಹ ಅಧ್ಯಯನವು ಅದನ್ನು ಹೇಳಿದ ನಂತರ, ಹಾಗೆ ಆರೋಪಿಸಬಹುದು.ನ್ಯಾ. ಎ ಎಸ್ ಓಕಾ
ಆಡಳಿತ ಪಕ್ಷದ ಆಪ್ತರಿಗೆ ಮಾತ್ರ ಜಾಮೀನು ಸಿಗುತ್ತದೆ ಎಂದು ದೂರುವ ಮೊದಲು ವ್ಯವಸ್ಥಿತ ಅಧ್ಯಯನ ನಡೆಸಿರಬೇಕು. ಆನಂತರವಷ್ಟೇ ಹಾಗೆ ಆರೋಪ ಮಾಡಬಹುದು ಎಂದು ಅವರು ಹೇಳಿದರು.
"ಕಾನೂನಿನ ಪ್ರಕಾರ ಜಾಮೀನು ಪಡೆಯಲು ಅರ್ಹರಾಗಿರುವ ವ್ಯಕ್ತಿಗೆ ಜಾಮೀನು ಸಿಗಲೇಬೇಕು ಮತ್ತು ಈ ಬಗ್ಗೆ ಯಾವುದೇ ವಿವಾದ ಇರಲು ಸಾಧ್ಯವಿಲ್ಲ. ಆದರೂ, ಆಡಳಿತ ಪಕ್ಷದ ಆಪ್ತರಿಗೆ ಜಾಮೀನು ಸಿಗುತ್ತದೆ ಎಂಬ ವಾದ ಒಂದು ಊಹೆಯಾಗಿದೆ. ಅದು ನಿಜವಿರಬಹುದಾದರೂ ವ್ಯವಸ್ಥಿತ ಅಧ್ಯಯನದ ಅಗತ್ಯವಿದೆ. ಆಡಳಿತ ಪಕ್ಷದ ಆಪ್ತರಿಗೆ ಮಾತ್ರ ಜಾಮೀನು ಸಿಗುತ್ತದೆಯೇ ಎಂದು ನೋಡಲು ಅಧ್ಯಯನದ ಅಗತ್ಯವಿದ್ದು ಅಂತಹ ಅಧ್ಯಯನವು ಅದನ್ನು ಹೇಳಿದ ನಂತರ, ಹಾಗೆ ಆರೋಪಿಸಬಹುದು" ಎಂದು ಅವರು ಹೇಳಿದರು.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆ ಆವರಣದಲ್ಲಿ ಇತ್ತೀಚೆಗೆ ಸುಟ್ಟ ನೋಟುಗಳು ಪತ್ತೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನ್ಯಾ. ಓಕಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಾಲೋಚನಾ ಪ್ರಕ್ರಿಯೆಯ ಭಾಗವಾಗಿದ್ದೇನೆ. ಆದ್ದರಿಂದ ಪ್ರಕರಣದ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಆದರೂ, ನ್ಯಾಯಾಧೀಶರ ವಿರುದ್ಧ ಎಫ್‌ಐಆರ್ ದಾಖಲಾಗದಂತೆ ತಡೆಯುವ ಕಾನೂನು ರಕ್ಷಣೆ ಜಾರಿಯಲ್ಲಿದ್ದು ಈ ರಕ್ಷಣೆ ಅಸ್ತಿತ್ವದಲ್ಲಿರಲು ಕಾರಣ ಇದೆ. ನ್ಯಾ. ವರ್ಮಾ ಅವರ ಪ್ರಕರಣದಾಚೆಗೆ ಗಮನಿಸಿದಾಗ, ಕಾನೂನು ಸುರಕ್ಷತಾ ಕ್ರಮ ತೆಗೆದುಹಾಕಿದರೆ ನ್ಯಾಯಾಧೀಶರು ಕಾರ್ಯನಿರ್ವಹಿಸಲು ಸಾಧ್ಯವಾಗುವುದೇ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ಮಾಧ್ಯಮ ಮತ್ತು ನ್ಯಾಯಾಂಗದ ಕುರಿತು ಕೆಲವು ಒಳನೋಟಗಳನ್ನು ಹಂಚಿಕೊಂಡ ಅವರು ಯಾವುದು ಕಾನೂನುಬದ್ಧ ಮತ್ತು ಕಾನೂನುಬಾಹಿರ ಎಂಬುದನ್ನಷ್ಟೇ ನ್ಯಾಯಾಲಯಗಳು ನಿರ್ಧರಿಸಬಹುದಾಗಿದ್ದು ಯಾವುದು ಸರಿ ಅಥವಾ ತಪ್ಪು ಎಂದು ಹೇಳುವ ಅಧಿಕಾರ ಪತ್ರಿಕಾ ಮಾಧ್ಯಮಗಳಿಗೆ ಇದೆ ಎಂದು ತಿಳಿಸಿದರು.
ನಾಗರಿಕರ ಹಕ್ಕುಗಳು ಮತ್ತು ಸಂವಿಧಾನದಿಂದ ರಚಿತವಾದ ಸಂಸ್ಥೆಗಳನ್ನು ರಕ್ಷಿಸಲು ನ್ಯಾಯಾಂಗ ಮತ್ತು ಮಾಧ್ಯಮ ಎರಡೂ ಜಾಗರೂಕರಾಗಿರಬೇಕು. ಆದರೆ ಮಾಧ್ಯಮರಂಗ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದ್ದು ಸಾಮಾಜಿಕ ದೃಷ್ಟಿಕೋನಗಳನ್ನು ರೂಪಿಸುವಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ಒಬ್ಬ ವ್ಯಕ್ತಿ ಮಾಡಿದ್ದು ಸರಿ ಅಥವಾ ತಪ್ಪು ಎಂದು ಹೇಳುವ ಅಧಿಕಾರ ನ್ಯಾಯಾಧೀಶರಿಗೆ ಇರುವುದಿಲ್ಲ. ಅದು ನ್ಯಾಯಾಲಯದ ಕೆಲಸವಲ್ಲ. ಆದರೆ ಮಾಧ್ಯಮ ಆ ಬಗ್ಗೆ ಸಾರ್ವಜನಿಕ ಅಭಿಪ್ರಾಯ ರೂಪಿಸಬಹುದಾಗಿದೆ. ಹೀಗಾಗಿ ಮಾಧ್ಯಮ ಮತ್ತು ನ್ಯಾಯಾಲಯದ ಪಾತ್ರದ ನಡುವೆ ವ್ಯತ್ಯಾಸ ಇದೆ ಎಂದರು.
ನ್ಯಾಯಾಂಗ ಮತ್ತು ಮಾಧ್ಯಮ ಸಂಸ್ಥೆಗಳು ಒಗ್ಗೂಡಿ ಸಂವಿಧಾನದ ವಿಚಾರಗಳನ್ನು ಗೌರವಿಸಿ ಎತ್ತಿಹಿಡಿಯದಿದ್ದರೆ, ಸಂವಿಧಾನದ ಪೀಠಿಕೆ ಜನರಿಗೆ ನೀಡಿದ ಭರವಸೆ ವಾಸ್ತವದಲ್ಲಿ ಅನವಶ್ಯಕವಾಗಿಬಿಡುತ್ತವೆ. ನ್ಯಾಯಾಂಗ ಮತ್ತು ಮಾಧ್ಯಮಗಳೆರಡರ ಸಾಮಾನ್ಯ ಕರ್ತವ್ಯ ಎಂದರೆ ಸಂವಿಧಾನವನ್ನು ಎತ್ತಿ ಹಿಡಿದು ಸಂವಿಧಾನದಿಂದ ರಚಿತವಾದ ಸಂಸ್ಥೆಗಳನ್ನು ರಕ್ಷಿಸುವುದಾಗಿದೆ ಎಂದು ಅವರು ಹೇಳಿದರು.