ತಬ್ಲಿಘಿ ಜಮಾತ್  
ಸುದ್ದಿಗಳು

'ವಾಕ್ ಸ್ವಾತಂತ್ರ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಅತಿ ದುರ್ಬಳಕೆಯಾಗಿರುವ ಸ್ವಾತಂತ್ರ್ಯಗಳಲ್ಲೊಂದು' ಸಿಜೆಐ ಬೊಬ್ಡೆ

ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ಅನ್ನು ಕಿರಿಯಮಟ್ಟದ ಅಧಿಕಾರಿಯೊಬ್ಬರು ಏಕೆ ಸಲ್ಲಿಸಿದ್ದಾರೆ ಎಂದು ಕೇಳಿರುವ ನ್ಯಾಯಾಲಯ ಇದೊಂದು "ತಪ್ಪಿಸಿಕೊಳ್ಳುವ ಮತ್ತು ಲಜ್ಜೆಗೆಟ್ಟ" ಕ್ರಮ ಎಂದು ಹೇಳಿದೆ.

Bar & Bench

ತಬ್ಲಿಘಿ ಜಮಾತ್ ಘಟನೆಯನ್ನು ಮಾಧ್ಯಮಗಳು ಕೋಮುವಾದೀಕರಣಗೊಳಿಸಿದ ಕುರಿತಂತೆ "ಯಾವುದೇ ಕೆಟ್ಟ ವರದಿಗಳ ಉದಾಹರಣೆಗಳಿಲ್ಲ" ಎಂದು ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಗುರುವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ಅನ್ನು ಕಿರಿಯಮಟ್ಟದ ಅಧಿಕಾರಿಯೊಬ್ಬರು ಏಕೆ ಸಲ್ಲಿಸಿದ್ದಾರೆ ಎಂದು ಕೇಳಿರುವ ನ್ಯಾಯಾಲಯ ಇದೊಂದು "ತಪ್ಪಿಸಿಕೊಳ್ಳುವ ಮತ್ತು ಲಜ್ಜೆಗೆಟ್ಟ" ಕ್ರಮ ಎಂದು ಹೇಳಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಹೊಸ ಅಫಿಡವಿಟ್ ಸಲ್ಲಿಸಬೇಕೆಂದು ಸಿಜೆಐ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಸೂಚಿಸಿದೆ.

ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಈ ರೀತಿ ಹೇಳಿದ್ದಾರೆ:

"ನೀವು ನ್ಯಾಯಾಲಯವನ್ನು ಹೇಗೆ ಪರಿಗಣಿಸುತ್ತಿದ್ದೀರೋ ಹಾಗೆ ಪರಿಗಣಿಸಲು ಸಾಧ್ಯವಿಲ್ಲ. ಅಫಿಡವಿಟ್ ಅನ್ನು ಕಿರಿಯ ಅಧಿಕಾರಿಯೊಬ್ಬರಿಂದ ಸಲ್ಲಿಸಲಾಗಿದೆ.. ಅಫಿಡವಿಟ್ ಅಸ್ಪಷ್ಟವಾಗಿದ್ದು, ಅರ್ಜಿದಾರರು ಕೆಟ್ಟ ವರದಿಯ ಯಾವುದೇ ಉದಾಹರಣೆ ತೋರಿಸಿಲ್ಲ ಎಂದಿದೆ. ನೀವು ಒಪ್ಪದೇ ಇರಬಹುದು, ಆದರೆ ಕೆಟ್ಟ ವರದಿಯ ಯಾವುದೇ ಉದಾಹರಣೆ ಇಲ್ಲ ಎಂದು ನೀವು ಹೇಗೆ ಹೇಳಲು ಸಾಧ್ಯ? ಇಲಾಖೆಯ ಕಾರ್ಯದರ್ಶಿ ಅಫಿಡವಿಟ್ ಸಲ್ಲಿಸತಕ್ಕದ್ದು ಮತ್ತು ಈಗ ಮಾಡಿದಂತೆ ಯಾವುದೇ ಅನಗತ್ಯ ಮತ್ತು ಅಸಂಬದ್ಧ ವಾದಗಳನ್ನು ತಪ್ಪಿಸಬೇಕು”.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬೊಬ್ಡೆ

ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಹೊಸ ಅಫಿಡವಿಟ್ ಸಲ್ಲಿಸಲಿದ್ದಾರೆ ಮತ್ತು ಹೊಸ ದಾಖಲೆಯನ್ನು "ತಾವೇ ಪರಿಶೀಲಿಸುವುದಾಗಿ"ಎಸ್.ಜಿ. ಮೆಹ್ತಾ ಕೋರ್ಟಿಗೆ ತಿಳಿಸಿದರು.

1995ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ (ನಿಯಂತ್ರಣ) ಕಾಯ್ದೆಯ ಸೆಕ್ಷನ್ 20 ಅನ್ನು ಉಲ್ಲೇಖಿಸಿ, ಈ ಕಾಯಿದೆಯು ಕೇಬಲ್ ಟಿವಿ ಸಂಕೇತಗಳ ವ್ಯಾಪ್ತಿಯನ್ನು ಮಾತ್ರ ಒಳಗೊಂಡಿದೆ ಎಂದು ನ್ಯಾಯಪೀಠ ಹೇಳಿತು ಮತ್ತು ಅಂತಹ ಸಂಕೇತಗಳನ್ನು ನಿಷೇಧಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ ಎಂದು ಸಿಜೆಐ ಬೊಬ್ಡೆ ಪ್ರಶ್ನಿಸಿದರು.

"ಈ ಅಧಿಕಾರವನ್ನು ಕೇಬಲ್ ಟಿವಿ ನೆಟ್‌ವರ್ಕ್‌ಗಳಿಗೆ ಸಂಬಂಧಿಸಿದಂತೆ ಮಾತ್ರ ಚಲಾಯಿಸಬಹುದಾಗಿದೆ. ದೂರದರ್ಶನದ ರೀತಿಯ ಟಿವಿ ಸಿಗ್ನಲ್‌ಗಳಿಗೆ ಇದು ಸಂಬಂಧಿಸಿಲ್ಲ. ಸಿಗ್ನಲ್‌ಗಳನ್ನು ನಿಷೇಧಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ? ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸಲಹೆಗಳನ್ನು ನೀಡಲಾಗಿದೆ ಎಂದಿದೆ," ಎಂದು ಸಿಜೆಐ ಕೇಳಿದರು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಈ ಕಾಯಿದೆಯು ಕೇಬಲ್ ಟಿವಿ ಸಂವಹನಗಳನ್ನು ಸಹ ಒಳಗೊಂಡಿದೆ ಎಂದು ವಾದಿಸಿದರು. ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯದಲ್ಲಿ ಈ ವಿಷಯವನ್ನು ಸಾಬೀತುಪಡಿಸುವಂತೆ ದವೆ ಅವರಿಗೆ ಕೋರ್ಟ್ ಸೂಚಿಸಿತು.

ತಬ್ಲಿಘಿ ಜಮಾತ್ ಸಭೆಯ ಕೋಮುವಾದೀಕರಣದ ಕುರಿತು ಜಾಮಿಯಾತ್ ಉಲೆಮಾ-ಇ-ಹಿಂದ್ ಸಲ್ಲಿಸಿದ್ದ ಮನವಿಯನ್ನು ಎರಡು ವಾರಗಳ ಬಳಿಕ ನ್ಯಾಯಾಲಯ ಆಲಿಸಲಿದೆ.

ವಿಚಾರಣೆ ಅಂತಿಮ ಹಂತಕ್ಕೆ ಬಂದಾಗ ಸಿಜೆಐ ಬೊಬ್ಡೆ ಅವರು, "ವಾಕ್ ಸ್ವಾತಂತ್ರ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಅತಿ ದುರ್ಬಳಕೆಯಾಗಿರುವ ಸ್ವಾತಂತ್ರ್ಯಗಳಲ್ಲೊಂದಾಗಿದೆ” ಎಂದರು.

"ನಿಜಾಮುದ್ದೀನ್ ಮರ್ಕಜ್ ವಿಷಯಕ್ಕೆ ಸಂಬಂಧಿಸಿದಂತೆ ಧರ್ಮಾಂಧತೆ ಮತ್ತು ಕೋಮು ದ್ವೇಷ ಹರಡಿವೆ" ಎನ್ನಲಾದ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.