ನ್ಯಾಯಮೂರ್ತಿಗಳನ್ನು ಟೀಕಿಸುವ ಗುಣ ವ್ಯಾಪಕವಾಗುತ್ತಿರುವುದರ ಬಗ್ಗೆ ವರ್ಚುವಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್ ಭಾನುಮತಿ ರಚಿಸಿರುವ “ನ್ಯಾಯಾಂಗ, ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗದ ಆಡಳಿತ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎನ್ ವಿ ರಮಣ ಅವರು ಕ್ರಮವಾಗಿ ಅಧ್ಯಕ್ಷೀಯ ಮತ್ತು ಮುಖ್ಯ ಭಾಷಣ ಮಾಡಿದರು.
ಭಾನುಮತಿ ಅವರ ಪುಸ್ತಕವು ಮಾಹಿತಿಪೂರ್ಣ ಮತ್ತು ನ್ಯಾಯಾಂಗ ವ್ಯವಸ್ಥೆ ಕಾರ್ಯನಿರ್ವಹಿಸುವ ಕುರಿತು ಹೊಳಹುಗಳನ್ನು ಹೊಂದಿದೆ ಎಂದ ನ್ಯಾ. ರಮಣ ಅವರು, ಭಾನುಮತಿ ಅವರು ನ್ಯಾಯಾಂಗದ ಬೆಳವಣಿಗೆಗಳ ಸಾರವನ್ನು ಗ್ರಹಿಸಿದ್ದಾರೆ. ಸದ್ಯ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದಂತೆ ಒಂದು ರೀತಿಯ ತಪ್ಪು ತಿಳಿವಳಿಕೆ ಇದೆ ಎಂದೆನಿಸುತ್ತದೆ ಎಂದರು.
ನ್ಯಾಯಮೂರ್ತಿಗಳು ವೈಭವೋಪೇತ ಜೀವನ ನಡೆಸುತ್ತಾರೆ ಎಂದು ಭಾವಿಸಿಕೊಳ್ಳಲಾಗುತ್ತಿದೆ ಎಂದ ನ್ಯಾ. ರಮಣ ಅವರು ಇದು ಸತ್ಯಕ್ಕೆ ದೂರವಾದ ಸಂಗತಿ. ಸ್ವಾತಂತ್ರ್ಯದಿಂದ ಇರಲು ನ್ಯಾಯಮೂರ್ತಿಗಳು ಸಾಮಾಜಿಕ ಬದುಕನ್ನು ಸೂಕ್ಷ್ಮವಾಗಿ ಸರಿದೂಗಿಸಿಕೊಂಡು ಹೋಗಬೇಕಿದೆ ಎಂದರು.
ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನ್ಯಾಯಮೂರ್ತಿಗಳಿಗೆ ಯಾವುದೇ ದಾರಿ ಇಲ್ಲ. ಅವರು ತಮ್ಮ ತೀರ್ಪುಗಳು ಮತ್ತು ನ್ಯಾಯಿಕ ಕೆಲಸಗಳ ಮೂಲಕ ಮಾತ್ರ ಮಾತನಾಡಬೇಕು ಎಂದು ನ್ಯಾ. ರಮಣ ಹೇಳಿದರು. ಇದೇ ಮಾತುಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ಸಿ ಎ ಬೊಬ್ಡೆ ಅವರು ಪುನರುಚ್ಚರಿಸಿದರು.
ತಮ್ಮ ಭಾಷಣದ ವೇಳೆ ಸಿಜೆಐ ಬೊಬ್ಡೆ ಅವರು ಯಾವುದೇ ನ್ಯಾಯಾಲಯದಲ್ಲಿ ಕುಳಿತಿದ್ದರೂ ನ್ಯಾಯದಾನ ನೀಡುವ ಕೆಲಸವನ್ನು ನ್ಯಾಯಮೂರ್ತಿಗಳು ಮಾಡಬೇಕು. “ಇದು ಸುಲಭದ ಕೆಲಸವಲ್ಲ” ಎಂದರು. ಡೇವಿಡ್ ಪೆನ್ನಿಕ್ ಬರೆದಿರುವ “ಜಡ್ಜ್ಸ್” ಪುಸ್ತಕ ಉಲ್ಲೇಖಿಸಿದ ಸಿಜೆಐ ಬೊಬ್ಡೆ ಅವರು ಇತರರು ಮಾಡಲು ಹಿಂಜರಿಯುವ ಕೆಲಸವನ್ನು ಮಾಡುವಂತೆ ನ್ಯಾಯಮೂರ್ತಿಗಳನ್ನು ಆಹ್ವಾನಿಸಲಾಗುತ್ತದೆ ಎಂದರು.
ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುತ್ತಲೇ ಮತ್ತು ನಿರಂತರವಾಗಿ “ತಮ್ಮ ಕೆಲಸದಲ್ಲಿ ಔನ್ನತ್ಯ ಸಾಧಿಸಬೇಕಾಗುತ್ತದೆ” ಎಂದರು. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಬಗ್ಗೆ ಆಗಾಗ್ಗೆ ವ್ಯಕ್ತವಾಗುತ್ತಿರುವ ಟೀಕೆಯನ್ನು ಉಲ್ಲೇಖಿಸಿದ ಸಿಜೆಐ ಬೊಬ್ಡೆ ಅವರು ಹೀಗೆ ಹೇಳಿದರು,
ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ವಿವಾದದ ಕೇಂದ್ರವಾಗಿರುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಇಬ್ಬರು ಪ್ರಮುಖ ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಜೆಐ ಬೊಬ್ಡೆ ಹಾಗೂ ಹಿಂದಿನ ಸಿಜೆಐಗಳನ್ನು ಟೀಕಿಸಿ ಟ್ವೀಟ್ ಮಾಡಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದೋಷಿ ಎಂದು ಘೋಷಿಸಿ, ಶಿಕ್ಷೆ ವಿಧಿಸಲಾಗಿದೆ.
ಈಚೆಗೆ ಸಿಎಎನ್ ಫೌಂಡೇಶನ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು “ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಿನ್ನಾಭಿಪ್ರಾಯ ಮುಖ್ಯ. ಇತ್ತೀಚಿನ ದಿನಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿರುವ ರೀತಿಯು ಅಧಃಪತನದ ಸೂಚನೆಯಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು.