<div class="paragraphs"><p>Police</p></div>

Police

 
ಸುದ್ದಿಗಳು

ಸಂಜ್ಞೇಯ ಅಪರಾಧದಲ್ಲಿ ಎಫ್ಐಆರ್ ದಾಖಲಿಸದ ಪೊಲೀಸ್ ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ ಕೈಗೊಳ್ಳಿ: ಕರ್ನಾಟಕ ಹೈಕೋರ್ಟ್

Bar & Bench

ಸಂಜ್ಞೇಯ ಅಪರಾಧದಲ್ಲಿ ಎಫ್‌ಐಆರ್‌ ದಾಖಲಿಸದ ಇನ್‌ಸ್ಪೆಕ್ಟರ್‌ ಒಬ್ಬರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್‌ ಅಧೀಕ್ಷಕರಿಗೆ ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠ ಇತ್ತೀಚೆಗೆ ಸೂಚಿಸಿದೆ. [ಗಣೇಶ್ ಎಸ್ ಹೆಗಡೆ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನಗಳಿಗೆ ವಿರುದ್ಧವಾಗಿ ಪೊಲೀಸ್‌ ಇನ್‌ಸ್ಪೆಕ್ಟರ್‌ ನಡೆ ಇದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.

“ಸಂಜ್ಞೇಯ ಅಪರಾಧದ ನಡೆದಿದೆ ಎನ್ನುವ ಯಾವುದೇ ಮಾಹಿತಿ ಸ್ವೀಕರಿಸಿದಾಗ ಅನುಮತಿಸಬೇಕಾದ ಯಾವುದೇ ಪ್ರಾಥಮಿಕ ವಿಚಾರಣೆ ಇರುವುದಿಲ್ಲ ಮತ್ತು ಮಾಹಿತಿ ಸ್ವೀಕರಿಸುವ ವ್ಯಕ್ತಿ ಎಫ್‌ಐಆರ್‌ ನೋಂದಾಯಿಸುವ ಅಗತ್ಯವಿದೆ. ಸ್ವೀಕೃತ ಮಾಹಿತಿ ಸಂಜ್ಞೇಯ ಅಪರಾಧದ ವಿಚಾರವನ್ನು ಬಹಿರಂಗಪಡಸದೇ ಇದ್ದಾಗ ಮಾತ್ರ ಸಂಜ್ಞೇಯ ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಾಥಮಿಕ ತನಿಖೆ ನಡೆಸಬಹುದು. ವಿಚಾರಣೆ ವೇಳೆ ಸಂಜ್ಞೇಯ ಅಪರಾಧ ನಡೆದಿರುವುದು ತಿಳಿದುಬಂದರೆ ಎಫ್‌ಐಆರ್‌ ದಾಖಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ. ಅಂತಹ ಪ್ರಕರಣಗಳಲ್ಲಿ, ಎಫ್‌ಐಆರ್ ದಾಖಲಿಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ಪೀಠ ವಿವರಿಸಿದೆ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರನ ಸಹೋದರಿ ಮತ್ತು ಆಕೆಯ ಪತಿ 30 ಗುಂಡಾಗಳೊಂದಿಗೆ ಅರ್ಜಿದಾರನ ಜಮೀನಿಗೆ ನುಗ್ಗಿ ಆತ ಬೆಳೆದಿದ್ದ ಅಡಿಕೆ ಬೆಳೆ ನಾಶಪಡಿಸಿ ಅವರಿಗೆ ಬೆದರಿಕೆ ಹಾಕಿದ್ದರು. ಕೂಡಲೇ ತಾಲೂಕು ಪೊಲೀಸ್‌ ಠಾಣೆಗೆ ಅರ್ಜಿದಾರ ಫೋನಾಯಿಸಿದರೂ ಪ್ರಕರಣದ ನಾಲ್ಕನೇ ಪ್ರತಿವಾದಿಯಾದ ಇನ್‌ಸ್ಪೆಕ್ಟರ್‌ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದರೂ ಉಪಯೋಗವಾಗದಿದ್ದಾಗ ಅವರು ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಎಸ್‌ ಪಿ ಅವರ ನಿರ್ದೇಶನದಂತೆ ಅರ್ಜಿದಾರನನ್ನೂ ಆತನ ಸಹೋದರಿಯನ್ನೂ ಇನ್‌ಸ್ಪೆಕ್ಟರ್‌ ಠಾಣೆಗೆ ಕರೆಸಿಕೊಂಡಿದ್ದರು. ಆದರೆ ಆಗಲೂ ಯಾವುದೇ ದೂರು ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಅರ್ಜಿದಾರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಸಂಬಂಧಪಟ್ಟ ತಹಶೀಲ್ದಾರ್‌ ಅವರಿಗೆ ಸೂಚಿಸಿರುವ ಹೈಕೋರ್ಟ್‌ ಇನ್‌ಸ್ಪೆಕ್ಟರ್‌ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಎಂಟು ವಾರದೊಳಗೆ ತನಗೆ ವರದಿ ಸಲ್ಲಿಸಬೇಕು ಎಂದು ಎಸ್‌ಪಿ ಅವರಿಗೆ ಸೂಚಿಸಿತು.

ಅರ್ಜಿದಾರರ ಪರವಾಗಿ ವಕೀಲರಾದ ವಿಶ್ವನಾಥ್‌ ಭಟ್‌ ಮತ್ತು ನಾರಾಯನ್‌ ವೈ ಯಾಜಿ ವಾದ ಮಂಡಿಸಿದ್ದರು.ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಶಿವಪ್ರಭು ಹಿರೇಮಠ್‌ ಅವರು ಸರ್ಕಾರವನ್ನು ಪ್ರತಿನಿಧಿಸಿದ್ದರು.