ಸುದ್ದಿಗಳು

ಸರ್ಕಾರದ ಉಸ್ತುವಾರಿಯಲ್ಲಿ ವೇದಾಂತ ಆಮ್ಲಜನಕ ಸ್ಥಾವರ ಪುನರಾರಂಭಕ್ಕೆ ಸುಪ್ರೀಂ ಅನುಮತಿ

Bar & Bench

ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಪೂರೈಸುವ ಉದ್ದೇಶದಿಂದ ತೂತ್ತುಕುಡಿಯಲ್ಲಿರುವ ಆಕ್ಸಿಜನ್‌ ಘಟಕ ತೆರೆಯಲು ವೇದಾಂತ ಗಣಿಗಾರಿಕೆ ಕಂಪೆನಿಗೆ ಮಂಗಳವಾರ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಆದರೆ ಈ ಆದೇಶದ ನೆಪದಲ್ಲಿ ವೇದಾಂತ ಕಂಪೆನಿ ತಾಮ್ರ ಸಂಸ್ಕರಣೆ ಘಟಕದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರಿದ್ದ ಪೀಠ ಸ್ಪಷ್ಟಪಡಿಸಿತು.

ಘಟಕದ ಮೇಲ್ವಿಚಾರಣೆಗಾಗಿ ತೂತ್ತುಕುಡಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪರಿಸರ ಎಂಜಿನಿಯರ್‌, ಉಪ ಜಿಲ್ಲಾಧಿಕಾರಿ, ವಾಣಿಜ್ಯ ಜ್ಞಾನ ಹೊಂದಿರುವ ಇಬ್ಬರು ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸರ್ಕಾರಕ್ಕೆ ಪೀಠ ಇದೇ ಸಂದರ್ಭದಲ್ಲಿ ನಿರ್ದೇಶಿಸಿತು. ಅಲ್ಲದೆ ಸ್ಥಾವರ ನಡೆಸಲು ಸಂಪೂರ್ಣವಾಗಿ ಅಗತ್ಯವಿರುವ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳ ಪಟ್ಟಿಯನ್ನು ಸಮಿತಿಗೆ ಸಲ್ಲಿಸುವಂತೆ ವೇದಾಂತಕ್ಕೆ ನಿರ್ದೇಶಿಸಲಾಗಿದೆ.

ತಮಿಳುನಾಡಿನ ಪರಿಸರ ತಜ್ಞರ ಮೂರು ಸದಸ್ಯರ ಸಮಿತಿಯನ್ನು ರಚಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸೂಚಿಸಲಾಗಿದೆ. ಈ ಸಮಿತಿಯಲ್ಲಿ ಇಬ್ಬರು ಸದಸ್ಯರನ್ನು ವೇದಾಂತ ಸಂಘರ್ಷ ಘಟನೆಯ ಸಂತ್ರಸ್ತರು 48 ಗಂಟೆಗಳ ಒಳಗೆ ನಾಮನಿರ್ದೇಶನ ಮಾಡಬಹುದು. ಅದು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರವೇ ಸದಸ್ಯರ ನೇಮಕ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಆದೇಶ ಜುಲೈ 31, 2021 ರವರೆಗೆ ಚಾಲ್ತಿಯಲ್ಲಿರಲಿದ್ದು ಆ ಸಮಯದಲ್ಲಿ ಅದು ಕೋವಿಡ್‌ ಸ್ಥಿತಿಗತಿಯನ್ನು ನಿರ್ಣಯಿಸುತ್ತದೆ.

ಸೋಮವಾರ ನಡೆದ ವಿಚಾರಣೆ ವೇಳೆ ತಮಿಳುನಾಡು ಸರ್ಕಾರ "ಈ ಹಿಂದೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ರಚಿಸಲಾದ ಸಮಿತಿಯೊಂದು ಸ್ಥಾವರದ ಮೇಲ್ವಿಚಾರಣೆ ನಡೆಸಲಿದೆ. ಅಲ್ಲದೆ ವೇದಾಂತ ಕಂಪೆನಿಯ ತಾಮ್ರ ಸಂಸ್ಕರಣೆ, ಶಾಖ ವಿದ್ಯುತ್‌ ಉತ್ಪಾದನೆ ಅಥವಾ ಇನ್ನಾವುದೇ ಘಟಕಗಳಿಗೆ ಅನುಮತಿ ನೀಡುವುದಿಲ್ಲ" ಎಂದು ಅಫಿಡವಿಟ್‌ ಸಲ್ಲಿಸಿತ್ತು.

ಸ್ಥಾವರಕ್ಕೆ ಅನುಮತಿಸುವ ಕುರಿತಂತೆ ಸರ್ಕಾರದ ನಿಲವು ಹೀಗಿತ್ತು:

  • ಆಮ್ಲಜನಕ ಸ್ಥಾವರ ಕಾರ್ಯಾಚರಣೆಯ ಸಂಪೂರ್ಣ ಮೇಲ್ವಿಚಾರಣೆ ಸರ್ಕಾರ ರಚಿಸಿದ ಸಮಿತಿಯದ್ದು.

  • ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸಮಿತಿಗೆ ಇರುತ್ತದೆ.

  • ವೇದಾಂತ ಕಂಪೆನಿ ಮಾನವ ಸಂಪನ್ಮೂಲ, ಅಗತ್ಯ ತಂತ್ರಜ್ಞಾನವನ್ನು ಒದಗಿಸಬೇಕು ಮತ್ತು ಸಂಬಂಧಿಸಿದ ವೆಚ್ಚವನ್ನು ನಿಭಾಯಿಸಲಿದೆ.

  • ಕೋರ್ಟ್‌ ಒಪ್ಪಿದರೆ ತಕ್ಷಣವೇ ತಮಿಳುನಾಡು ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜು ನಿಗಮದಿಂದ ತಾತ್ಕಾಲಿಕವಾಗಿ ವಿದ್ಯುತ್‌ ಪೂರೈಸಿ ವೇದಾಂತ ಕಾರ್ಯ ಆರಂಭಿಸಲು ಅನುವು ನೀಡಲಾಗುವುದು.

  • ಒಂದು ವಾರದ ಅವಧಿಯಲ್ಲಿ ಆಮ್ಲಜನಕ ಉತ್ಪಾದಿಸುವುದಾಗಿ ನೀಡಿರುವ ವಾಗ್ದಾನಕ್ಕೆ ಬದ್ಧವಾಗಿರುವಂತೆ ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶಿಸಬಹುದು.

  • ಆಮ್ಲಜನಕ ಉತ್ಪಾದನೆಯೊಂದಿಗೆ ನೇರವಾಗಿ ಸಂಬಂಧ ಇರುವ ಸ್ಟೆರ್‌ಲೈಟ್‌ನ ಅಗತ್ಯ ತಾಂತ್ರಿಕ ಸಿಬ್ಬಂದಿಗೆ ಮಾತ್ರ ಸೂಕ್ತ ಪಾಸ್‌ನೊಂದಿಗೆ ಅನುಮತಿ ನೀಡಲಾಗುವುದು.

  • ಆಮ್ಲಜನಕ ಪೂರೈಸುವಾಗ ಎಲ್ಲ ರಾಜ್ಯಗಳಿಗಿಂತಲೂ ಮೊದಲು ತಮಿಳುನಾಡಿಗೆ ಆದ್ಯತೆ ನೀಡಬೇಕು.

ಆಮ್ಲಜನಕ ಬಿಕ್ಕಟ್ಟು ಪರಿಹರಿಸಲು ಸ್ಥಾವರ ಪುನರಾರಂಭಕ್ಕೆ ವೇದಾಂತ ಕಂಪೆನಿ ಸುಪ್ರೀಂಕೋರ್ಟ್‌ ಕದ ತಟ್ಟಿದ ಬಳಿಕ ತಮಿಳುನಾಡು ಸರ್ಕಾರ ಅಫಿಡವಿಟ್‌ ಸಲ್ಲಿಸಿತ್ತು. ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಬಹುದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಸ್ಥಾವರ ತೆರೆಯುವುದನ್ನು ಮೊದಲು ವಿರೋಧಿಸಿತ್ತು. ಆದರೆ ಸರ್ಕಾರವೇ ಸ್ಥಾವರವನ್ನು ಸುಪರ್ದಿಗೆ ತೆಗೆದುಕೊಂಡು ಚಾಲನೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಸಲಹೆ ನೀಡಿತ್ತು. ಅಗತ್ಯ ತಂತ್ರಜ್ಞರು ಅಥವಾ ಆರ್ಥಿಕ ಸೌಲಭ್ಯ ಸರ್ಕಾರದ ಬಳಿ ಇಲ್ಲ ಎಂಬ ಕಾರಣ ನೀಡಿ ಸುಪ್ರೀಂ ಸಲಹೆಯನ್ನು ವೇದಾಂತ ವಿರೋಧಿಸಿತ್ತು. ಆ ಬಳಿಕ ಸರ್ಕಾರದ ಮೇಲ್ವಿಚಾರಣೆಯಲ್ಲಿ ವೇದಾಂತ ಕಾರ್ಯನಿರ್ವಹಿಸಬಹುದು ಎಂಬ ಸಲಹೆಯನ್ನು ಕೋರ್ಟ್‌ ನೀಡಿತ್ತು.