Chhattisgarh High Court 
ಸುದ್ದಿಗಳು

ಪತಿ ನಿರುದ್ಯೋಗಿ ಎಂದು ನಿಂದಿಸುವುದು ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್

ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಲು ಅನುಮತಿಸಿದ ನ್ಯಾಯಮೂರ್ತಿಗಳಾದ ರಜನಿ ದುಬೆ ಮತ್ತು ಅಮಿತೇಂದ್ರ ಕಿಶೋರ್ ಪ್ರಸಾದ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

Bar & Bench

ಪತಿ ನಿರುದ್ಯೋಗಿ ಎಂದು ನಿಂದಿಸುವುದು ಜೊತೆಗೆ ಆತ ಆರ್ಥಿಕ ಸಂಕಷ್ಟದಲ್ಲಿರುವಾಗ ಅತಾರ್ಕಿಕ ಬೇಡಿಕೆಗಳನ್ನು ಇರಿಸುವುದು ಮಾನಸಿಕ ಕ್ರೌರ್ಯ ಎಂದು ಛತ್ತೀಸ್‌ಗಢ ಹೈಕೋರ್ಟ್ ಆಗಸ್ಟ್ 18 ರಂದು ತೀರ್ಪು ನೀಡಿದೆ.

ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಲು ಅನುಮತಿಸಿದ ನ್ಯಾಯಮೂರ್ತಿಗಳಾದ  ರಜನಿ ದುಬೆ ಮತ್ತು ಅಮಿತೇಂದ್ರ ಕಿಶೋರ್ ಪ್ರಸಾದ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪಿಎಚ್‌ಡಿ ಪದವಿ ಪಡೆದು ಪ್ರಾಂಶುಪಾಲೆಯಾಗಿ ಹೆಚ್ಚಿನ ಸಂಬಳ ಪಡೆದ ನಂತರ, ಪತಿಯ  ಬಗ್ಗೆ ಪತ್ನಿಯ ವರ್ತನೆ ಗಮನಾರ್ಹವಾಗಿ ಬದಲಾಗಿದೆ ಎಂಬುದು ಸ್ಪಷ್ಟವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಿರುದ್ಯೋಗಿಯಾಗಿದ್ದಕ್ಕಾಗಿ ಪತಿಯನ್ನು ಅಗೌರವದಿಂದ ನಡೆಸಿಕೊಂಡು, ಆಗಾಗ್ಗೆ ನಿಂದಿಸುತ್ತಿದ್ದರು.  ಕ್ಷುಲ್ಲಕ ವಿಷಯಗಳಿಗೆ ಪದೇ ಪದೇ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಪತಿ ಆರ್ಥಿಕವಾಗಿ ದುರ್ಬಲನಾಗಿದ್ದ ಸಂದರ್ಭದಲ್ಲಿ ಅಪಮಾನ ಸೇರಿದಂತೆ ನಡೆಸುವ ಕೃತ್ಯಗಳು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ನ್ಯಾಯಾಲಯ ವಿವರಿಸಿದೆ.

ಮಗಳನ್ನೇ ತಂದೆಯ ವಿರುದ್ಧ ಎತ್ತಿಕಟ್ಟುವುದು, ಆತ ಆರ್ಥಿಕ ಸಂಕಷ್ಟದಲ್ಲಿರುವಾಗ ಅತಾರ್ಕಿಕ ಬೇಡಿಕೆಗಳನ್ನು ಇರಿಸುವುದು, ಮಗನನ್ನು ತೊರೆದು ಮಗಳೊಟ್ಟಿಗೆ ಮನೆ ಬಿಟ್ಟು ಹೋಗುವುದು ಸೇರಿದಂತೆ ಆಕೆಯ ನಡೆ ಮಾನಸಿಕ ಕಿರುಕುಳ ಮತ್ತು ವೈವಾಹಿಕ ಬಾಂಧವ್ಯ ನಿರ್ಲಕ್ಷಿಸಿರುವುದರ ಧ್ಯೋತಕ ಎಂದು ನ್ಯಾಯಾಲಯ ನುಡಿದಿದೆ.

ಈ ವಿಚಾರವಾಗಿ ಪತ್ನಿ ಖಂಡನೆ ಅಥವಾ ಪ್ರತಿ ಸಾಕ್ಷ್ಯ ಸಲ್ಲಿಸದಿರುವುದು ಪ್ರಸ್ತುತ. ವಿಚಾರಣೆ ಮತ್ತು ಮೇಲ್ಮನವಿ ಪ್ರಕ್ರಿಯೆಗಳ ಉದ್ದಕ್ಕೂ ಆಕೆಯ ಅನುಪಸ್ಥಿತಿ ಪತಿಯ ಆರೋಪಗಳನ್ನು ನಿರಾಕರಿಸದೆ ಇರುವುದನ್ನು ಸೂಚಿಸುತ್ತದೆ. ಈ ವಿಚಾರಗಳನ್ನು ಗಮನಿಸಲು ಕೌಟುಂಬಿಕ ನ್ಯಾಯಾಲಯ ವಿಫಲವಾಗಿದ್ದು ಕ್ರೌರ್ಯ ಸಾಬೀತಾಗಿಲ್ಲ ಎಂದು ತಪ್ಪು ತೀರ್ಪು ನೀಡಿದೆ ಎಂದು ಅದು ಹೇಳಿತು.

ಆದ್ದರಿಂದ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಅದು ರದ್ದುಗೊಳಿಸಿತು.

ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಆಧರಿಸಿ ಆದೇಶ ಹೊರಡಿಸಿದ ಪೀಠ ವಿವಾಹ ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ ಎಂದಿತು.

"ಪತಿ ಖುದ್ದು ಭೇಟಿಯಾಗಿ ಫೋನ್ ಕರೆ ಮಾಡಿ ಪತ್ನಿಯನ್ನು ಮರಳಿ ಕರೆತರಲು ಪದೇ ಪದೇ ಪ್ರಯತ್ನಿಸಿದರೂ, ಆಕೆ ಹಿಂತಿರುಗಲಿಲ್ಲ ಅಥವಾ ವೈವಾಹಿಕ ಜೀವನವನ್ನು ಪುನರಾರಂಭಿಸುವ ಉದ್ದೇಶ ವ್ಯಕ್ತಪಡಿಸಲಿಲ್ಲ" ಎಂದು ನ್ಯಾಯಾಲಯ ತಿಳಿಸಿತು. ಪತ್ನಿ ವಿಚಾರಣೆಯಲ್ಲಿ  ಪಾಲ್ಗೊಳ್ಳದ ಕಾರಣ ಅಥವಾ ತನ್ನ ವರ್ತನೆಗೆ ಯಾವುದೇ ಸಮರ್ಥನೆ  ನೀಡದ ಕಾರಣ, ಪತಿಯ ಪರವಾಗಿ ಅದು ವಿಚ್ಛೇದನದ ತೀರ್ಪು ನೀಡಿತು.