
ಪತ್ನಿ ಸರಿಯಾಗಿ ಅಡುಗೆ ಮಾಡುವುದಿಲ್ಲ ಬಟ್ಟೆ ತೊಡುವುದಿಲ್ಲ ಎಂಬ ಮಾತುಗಳು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯ ಎನಿಸಿಕೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಇತ್ತೀಚೆಗೆ ತೀರ್ಪು ನೀಡಿದೆ [ತುಷಾರ್ ಸಂಪತ್ ಮಾನೆ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಮಹಿಳೆಯೊಬ್ಬರು ತನ್ನ ಪತಿ, ಆತನ ಪೋಷಕರು ಮತ್ತು ಇಬ್ಬರು ಸಹೋದರಿಯರ ವಿರುದ್ಧ ಸೆಕ್ಷನ್ 498 ಎ ಅಡಿಯಲ್ಲಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಸಂಜಯ್ ದೇಶಮುಖ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಹೆಂಡತಿ ಸರಿಯಾದ ಬಟ್ಟೆ ಧರಿಸಿಲ್ಲ, ಸರಿಯಾಗಿ ಅಡುಗೆ ಮಾಡುತ್ತಿಲ್ಲ ಎಂದು ಗಂಡ ಕಿರಿಕಿರಿ ಮಾತುಗಳನ್ನಾಡಿದರೆ ಅದನ್ನು ಗಂಭೀರ ಕ್ರೌರ್ಯ ಅಥವಾ ಕಿರುಕುಳ ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಅದು ವಿವರಿಸಿದೆ.
ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಿದ್ದರು. ಅಲ್ಲದೆ ಗಂಡನ ಮಾನಸಿಕ ಅನಾರೋಗ್ಯದ ಬಗ್ಗೆ ಹಾಗೂ ಆತ ಮಾನಸಿಕ ಚಿಕಿತ್ಸೆ ಪಡೆಯುತ್ತಿರುವುದನ್ನು ತನ್ನಿಂದ ಮುಚ್ಚಿಡಲಾಗಿತ್ತು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿ ಮತ್ತವರ ಕುಟುಂಬ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್ ಮತ್ತು ಮಹಿಳೆಯ ಪರ ವಕೀಲರು, ಗಂಡ ಮತ್ತು ಆತನ ಮನೆಯವರ ಕೃತ್ಯಗಳು ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯಕ್ಕೆ ಕಾರಣ ಎಂದು ವಾದಿಸಿದರು.
ಆದರೆ ಆರೋಪಗಳು ಸರ್ವೇಸಾಮಾನ್ಯ ಆರೋಪಗಳಾಗಿದ್ದು ದೃಢವಾದ ಪುರಾವೆಗಳ ಕೊರತೆ ಇದೆ ಎಂದು ನ್ಯಾಯಾಲಯ ನುಡಿಯಿತು.
ಸಾಕ್ಷ್ಯಗಳನ್ನು ಗಮನಿಸಿದಾಗ ಮದುವೆಗೆ ಮುನ್ನವೇ ಪತ್ನಿಗೆ ಪತಿಯ ಆರೋಗ್ಯದ ಬಗ್ಗೆ ತಿಳಿದಿತ್ತು ಎಂದ ನ್ಯಾಯಾಲಯ "ಸಂಬಂಧ ಹಳಸಿಹೋದಾಗ, ಉತ್ಪ್ರೇಕ್ಷೆ ಮಾಡಿದಂತೆ ಕಾಣುತ್ತದೆ. ಮದುವೆಗೆ ಮೊದಲು (ತನ್ನ ಕಾಯಿಲೆಗೆ ಸಂಬಂಧಿಸಿದಂತೆ ಗಂಡ) ಎಲ್ಲವನ್ನೂ ಬಹಿರಂಗಪಡಿಸಿರುವಾಗ ಮತ್ತು ಆರೋಪಗಳು ಸಾಮಾನ್ಯವಾದುದಾಗಿದ್ದಾಗ ಅಥವಾ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಪರಿಗಣಿಸಲಾದ ಕ್ರೌರ್ಯದ ಪರಿಕಲ್ಪನೆಗೆ ಸೂಕ್ತವಲ್ಲದೆ ಇದ್ದಾಗ, ಅರ್ಜಿದಾರರನ್ನು ವಿಚಾರಣೆ ಎದುರಿಸುವಂತೆ ಸೂಚಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ" ಎಂಬುದಾಗಿ ಹೇಳಿದೆ. ಅಂತೆಯೇ ನ್ಯಾಯಾಲಯವು ಕುಟುಂಬದ ನಾಲ್ವರು ಸದಸ್ಯರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತು.
[ಆದೇಶದ ಪ್ರತಿ]