Supreme Court
Supreme Court 
ಸುದ್ದಿಗಳು

ತೆಲಂಗಾಣ ಸರ್ಕಾರದಿಂದ ನಿರ್ದಯ ರೀತಿಯಲ್ಲಿ ಮುಂಜಾಗ್ರತಾ ಬಂಧನ: ಸುಪ್ರೀಂ ಕೋರ್ಟ್ ಅಸಮಾಧಾನ

Bar & Bench

ವ್ಯಕ್ತಿಯೊಬ್ಬ ಕ್ರಿಮಿನಲ್‌ ಮೊಕದ್ದಮೆಯಲ್ಲಿ ಸಿಲುಕಿದ್ದಾನೆ ಎಂಬ ಕಾರಣಕ್ಕಾಗಿ ಸರ್ಕಾರ ಆತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಅಧಿಕಾರ ಚಲಾಯಿಸಲಾಗದು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ವ್ಯಕ್ತಿಯೊಬ್ಬರ ವಿರುದ್ಧ ಹೊರಡಿಸಲಾಗಿದ್ದ ಮುಂಜಾಗ್ರತಾ ಕ್ರಮದ ಬಂಧನ ಆದೇಶ ರದ್ದುಗೊಳಿಸಿತು [ಮಲ್ಲಡ ಕೆ ಶ್ರೀ ರಾಮ್ ಮತ್ತು ತೆಲಂಗಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತೆಲಂಗಾಣ ಸರ್ಕಾರದ ಮುಂಜಾಗ್ರತಾ ಬಂಧನದ ಅಧಿಕಾರವನ್ನು ʼನಿರ್ದಯವಾಗಿ ಬಳಸುತ್ತಿದೆʼ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರಿದ್ದ ವಿಭಾಗೀಯ ಪೀಠವು ಇದನ್ನು ಕಟುವಾಗಿ ಪರಿಗಣಿಸಿತು. ಕಳೆದ ಐದು ವರ್ಷಗಳಲ್ಲಿ ತೆಲಂಗಾಣದ ಇಂತಹ ಐದು ಬಂಧನ ಆದೇಶಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದಾಗಿ ಅದು ತಿಳಿಸಿತು. ಅಲ್ಲದೆ ಕಳೆದ ಒಂದು ವರ್ಷದ ಅವಧಿಯಲ್ಲಿಯೇ ತೆಲಂಗಾಣ ಸರ್ಕಾರದ ಕನಿಷ್ಠ ಹತ್ತು ಮುಂಜಾಗ್ರತಾ ಬಂಧನದ ಆದೇಶಗಳನ್ನು ತೆಲಂಗಾಣ ಹೈಕೋರ್ಟ್ ರದ್ದುಗೊಳಿಸಿರುವುದನ್ನು ಕೂಡ ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿತು.

“ಈ ಸಂಖ್ಯೆಗಳು ತೆಲಂಗಾಣ ಸರ್ಕಾರ ನಿರ್ದಯವಾಗಿ ಮುಂಜಾಗ್ರಾತಾ ಬಂಧನಕ್ಕೆ ಮುಂದಾಗಿರುವುದನ್ನು ಸಾಬೀತುಪಡಿಸುತ್ತವೆ” ಎಂದಿರುವ ಪೀಠ “ಬಂಧಿತನ ವಿರುದ್ಧದ ಆರೋಪಗಳ ಸ್ವರೂಪವು ಗಂಭೀರವಾಗಿದೆ. ಆದರೂ, ಆರೋಪಿ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿದ್ದಾನೆ ಎಂದ ಮಾತ್ರಕ್ಕೆ ಆತನ ವೈಯಕ್ತಿಕ ಸ್ವಾತಂತ್ರ್ಯವನ್ನು ಮಂಜಾಗ್ರತಾ ಬಂಧನಕ್ಕೆ ಬಲಿ ಕೊಡಲಾಗದು” ಎಂಬುದಾಗಿ ವಿವರಿಸಿದೆ.

“ಕಾನೂನು ಸುವ್ಯವಸ್ಥೆಯ ಉಲ್ಲಂಘನೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾತ್ರಕ್ಕೆ ಆ ವ್ಯಕ್ತಿ ʼಸಾರ್ವಜನಿಕ ಸುವ್ಯವಸ್ಥೆʼ ಕಾಪಾಡುವಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತಾನೆ ಎಂದು ಅಳೆಯಲಾಗದು ಎಂದು ಕೂಡ ಪೀಠ ತಿಳಿಸಿದೆ. ಈ ಅವಲೋಕನಗಳ ಮೂಲಕ ಮೇಲ್ಮನವಿದಾರನ ವಿರುದ್ಧ ಹೊರಡಿಸಲಾಗಿದ್ದ ಬಂಧನ ಆದೇಶವನ್ನು ಅದು ರದ್ದುಗೊಳಿಸಿದೆ.