Idia, Clat 
ಸುದ್ದಿಗಳು

ಐಡಿಐಎ ವಿದ್ಯಾರ್ಥಿಗಳ ಸಾಧನೆ: ಅಗ್ರ ಕಾನೂನು ಕಾಲೇಜುಗಳಲ್ಲಿ 10 ಮಂದಿಗೆ ಪ್ರವೇಶ; ಇನ್ನೂ 10 ಮಂದಿಗೆ ಸೀಟು ನಿರೀಕ್ಷೆ

ಸ್ವಾಭಿಮಾನ್‌ ಜಯಂತ್‌ ಪಾಟೀಲ್‌ ಅವರು ಅಖಿಲ ಭಾರತ ಮಟ್ಟದಲ್ಲಿ 42ನೇ ರ‌್ಯಾಂಕ್‌ ಪಡೆದಿದ್ದು, ಮಾಯಾಂಕ್ ಕುಮಾರ್‌ಗೆ 97ನೇ ರ‌್ಯಾಂಕ್ ಲಭಿಸಿದೆ.

Bar & Bench

ಪ್ರಸಕ್ತ ವರ್ಷದ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆಯಲ್ಲಿ (ಸಿಎಲ್‌ಎಟಿ 2021) ಐಡಿಐಎ ಸಂಸ್ಥೆ ತರಬೇತುಗೊಳಿಸಿದ್ದ ವೈವಿಧ್ಯಮಯ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಹುಬ್ಬೇರಿಸುವ ಸಾಧನೆ ಮಾಡಿದ್ದಾರೆ.

ಐಡಿಐಎ - ಕಾನೂನು ಶಿಕ್ಷಣದ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಕಾನೂನು ಕ್ಷೇತ್ರದಲ್ಲಿ ವೈವಿಧ್ಯತೆಯನ್ನು ಹೆಚ್ಚಿಸುವ ಸಂಸ್ಥೆಯು (ಇನ್‌ಕ್ರೀಸಿಂಗ್‌ ಡೈವರ್ಸಿಟಿ ಬೈ ಇನ್‌ಕ್ರೀಸಿಂಗ್‌ ಅಕ್ಸೆಸ್‌ ಟು ಲೀಗಲ್‌ ಎಜುಕೇಷನ್‌) ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸುವ ಗುರಿಯಿಂದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿಯನ್ನು ನೀಡಿತ್ತು. ಈಚೆಗೆ ಫಲಿತಾಂಶ ಪ್ರಕಟವಾಗಿದ್ದು ಮೊದಲ ಪಟ್ಟಿಯಲ್ಲಿ ಐಡಿಐಎನ ಹತ್ತು ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಕಾನೂನು ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಗಳಿಸಿದ್ದಾರೆ. ಮುಂಬರಲಿರುವ ಪಟ್ಟಿಯಲ್ಲಿ ಇನ್ನೂ ಹತ್ತು ವಿದ್ಯಾರ್ಥಿಗಳು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಸೀಟು ಪಡೆಯುವ ನಿರೀಕ್ಷೆ ಇದೆ.

ಐಡಿಐಎ ವಿದ್ಯಾರ್ಥಿಗಳು ಯಾವುದೇ ತೆರನಾದ ಸೌಲಭ್ಯಗಳಲ್ಲಿದ ಪ್ರದೇಶದಿಂದ ಬಂದವರಾಗಿದ್ದು, ಹಲವು ಸವಾಲುಗಳನ್ನು ಮೆಟ್ಟಿ ನಿಂತು ದೇಶದ ಅತಿ ಕಷ್ಟಕರವಾದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈಗಾಗಲೇ ಸವಾಲುಗಳ ಸರಮಾಲೆಯನ್ನೇ ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಕೋವಿಡ್‌ ವ್ಯಾಪಿಸಿದ್ದರಿಂದ ಡಿಜಿಟಲ್‌ ಕಂದರ ಸೃಷ್ಟಿಯಾಗಿ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿದ್ದವು.

ಸಾಕಷ್ಟು ಸವಾಲಿನ ನಡುವೆಯೂ ಅತ್ಯಂತ ಜಾಗರೂಕತೆಯಿಂದ ತರಬೇತುಗೊಳಿಸಲಾಗಿದ್ದ ಸ್ವಾಭಿಮಾನ್‌ ಜಯಂತ್‌ ಪಾಟೀಲ್‌ ಅವರು ಸಿಎಲ್‌ಎಟಿಯಲ್ಲಿ 150ಕ್ಕೆ 106.75 ಅಂಕ ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 42ನೇ ರ‌್ಯಾಂಕ್‌ ಗಳಿಸಿದ್ದಾರೆ. ಸ್ವಾಭಿಮಾನ್‌ ಅವರು ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಯ ಕುರ್ದು ಎಂಬ ಸಣ್ಣ ಗ್ರಾಮಕ್ಕೆ ಸೇರಿದವರು. ರೈತರಾದ ಸ್ವಾಭಿಮಾನ್‌ ತಂದೆಯವರು ಶಿಕ್ಷಣದ ಮಹತ್ವ ಅರಿತು ಪುಣೆಗೆ ಬಂದು ನೆಲೆಸಿದ್ದರು. ಕಾಲೇಜಿನಲ್ಲಿ ಐಡಿಐಎ ಕಾರ್ಯಕರ್ತರು ಕೈಗೊಂಡಿದ್ದ ಜಾಗೃತಿ ಕಾರ್ಯಕ್ರಮದಿಂದ ಸ್ವಾಭಿಮಾನ್‌ ಅವರು ಐಡಿಐಎ ಸಂಪರ್ಕಕ್ಕೆ ಬಂದಿದ್ದರು.

Swabhiman Jayant Patil

ಮತ್ತೊಬ್ಬ ಐಡಿಐಎನಲ್ಲಿ ತರಬೇತಿಗೆ ಒಳಪಟ್ಟಿದ್ದ ಮಯಾಂಕ್‌ ಕುಮಾರ್‌ ಅಖಿಲ ಭಾರತ ಮಟ್ಟದಲ್ಲಿ 97ನೇ ರ‌್ಯಾಂಕ್ ಪಡೆದಿದ್ದಾರೆ. ಇವರು ಬಿಹಾರದ ಖಗರಿಯಾ ಜಿಲ್ಲೆಯವರಾಗಿದ್ದಾರೆ. ಸಣ್ಣ ಡೈರಿ ಉದ್ಯಮ ಮತ್ತು ಕೃಷಿಯಿಂದ ₹15-20,000 ಗಳಿಸುವ ಮಯಾಂಕ್ ತಂದೆಯು ಕುಟುಂಬದ ಆಧಾರ ಸ್ತಂಭವಾಗಿದ್ದಾರೆ. ಕಾನೂನು ಕಲಿಯುವ ಮೂಲಕ ತಾನು ಕಾಣಬಯಸಿರುವ ಬದಲಾವಣೆಯ ಬಗ್ಗೆ ಮಾತನಾಡಿರುವ ಮಾಯಾಂಕ್‌ “ಸಮಾಜದ ಶ್ರೇಯೋಭಿವೃದ್ಧಿಗೆ ಕಾನೂನು ಅಸ್ತ್ರವಾಗಿ ಸಹಾಯ ಮಾಡಲಿದೆ. ಕಾನೂನು ತರಬೇತಿಯ ಮೂಲಕ ನನ್ನ ಸಮುದಾಯಕ್ಕೆ ಸಹಾಯ ಮಾಡುವ ಗುರಿ ಹೊಂದಿದ್ದೇನೆ” ಎಂದು ತಿಳಿಸಿದ್ದಾರೆ.

Mayank Kumar

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾಯಾಂಕ್‌ ಕುಂಟುಬ ಅನಿವಾರ್ಯವಾಗಿ ಸ್ವಗ್ರಾಮಕ್ಕೆ ಮರಳಿದ್ದರಿಂದ ಸ್ಥಳಾವಕಾಶ ಮತ್ತು ಲ್ಯಾಪ್‌ಟಾಪ್‌ ಕೊರತೆಯಿಂದ ಅಧ್ಯಯನ ನಡೆಸಲು ಅವರಿಗೆ ಸಾಕಷ್ಟು ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ ನೆರಹೊರೆಯವರು ಸಹಕಾರ ಒದಗಿಸಿದ್ದರು. ಈ ನೆರವನ್ನು ಮನದಲ್ಲಿಟ್ಟುಕೊಂಡಿದ್ದು, ತನ್ನ ಸಮುದಾಯಕ್ಕೆ ಒಳಿತು ಮಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆ.

ಐಡಿಐಎ ರಾಷ್ಟ್ರೀಯ ಆಂದೋಲನವಾಗಿದ್ದು, ಸಮಾಜದಲ್ಲಿ ಅವಕಾಶ ವಂಚಿತ ವರ್ಗಗಳ ವಿದ್ಯಾರ್ಥಿಗಳನ್ನು ಆಯ್ದು ಅವರಿಗೆ ಅತ್ಯುತ್ತಮ ತರಬೇತಿ ನೀಡುವ ಮೂಲಕ ಸಿಎಲ್‌ಎಟಿ ಮತ್ತು ಇತರೆ ಕಾನೂನು ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅವರನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತಿದೆ.

ಅಗ್ರಶ್ರೇಯಾಂಕಿತ ಕಾನೂನು ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಐಡಿಐಎಯು ಹಣಕಾಸು ಸಹಾಯ, ತರಬೇತಿ, ಮಾರ್ಗದರ್ಶನ ಇತ್ಯಾದಿಗಳನ್ನು ಒಳಗೊಂಡ ಶಿಷ್ಯವೇತನ ನೀಡುತ್ತದೆ. ಸಮುದಾಯದ ನಾಯಕರು ಮತ್ತು ಬದಲಾವಣೆ ಹರಿಕಾರರನ್ನು (ಚಾಂಪ್ಸ್‌) ರೂಪಿಸುವುದು ಇದರ ಉದ್ದೇಶ (ಚಾಂಪ್ಸ್‌-ಸೃಜನಶೀಲ, ಸಮಗ್ರ ದೃಷ್ಟಿ ಹೊಂದಿದ, ಪರೋಪಕಾರಿ, ಸ್ವತಂತ್ರ ಚಿಂತನೆ/ನೈತಿಕ, ಸಮಸ್ಯೆ ಬಗೆಹರಿಸುವವರು). ಸಮುದಾಯದೊಳಗಿರುವವರ ಮೂಲಕವೇ ಸಮುದಾಯವನ್ನು ಸಶಕ್ತಗೊಳಿಸುವ ಗುರಿಯನ್ನು ಐಡಿಐಎ ಹೊಂದಿದೆ.

ಕಳೆದ ಹತ್ತು ವರ್ಷಗಳಲ್ಲಿ 129 ಅವಕಾಶ ವಂಚಿತ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಐಡಿಐಎ ವಿದ್ಯಾರ್ಥಿಗಳು ಎಂದು ಪರಿಗಣಿಸಿದ್ದು, 550ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಐಡಿಐಎ ತರಬೇತುಗೊಳಿಸಿದೆ. ತಮ್ಮ ವಿದ್ಯಾರ್ಥಿಗಳಿಗೆ ಅಗ್ರಶ್ರೇಯಾಂಕಿತ ಕಾನೂನು ಕಾಲೇಜುಗಳಲ್ಲಿ ಪ್ರವೇಶಕೊಡಿಸಲು ಐಡಿಐಎ ಆರ್ಥಿಕ ನೆರವವನ್ನು ಬಯಸುತ್ತದೆ.

ಇಂಥ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಬಯಸುವುದಾದರೆ info@idialaw.org ಗೆ ಪ್ರತಿಕ್ರಿಯಿಸಿ. ಐಡಿಐಎ ಬಗ್ಗೆ ಹೆಚ್ಚು ತಿಳಿದುಕೊಳ್ಳಲು https://www.idialaw.org/ ಗೆ ಭೇಟಿ ನೀಡಿ. ಅವರ ಜೊತೆ ಸಂಪರ್ಕದಲ್ಲಿರಲು info@idialaw.org ಬಳಸಬಹುದು.