Justice Vineet Saran 
ಸುದ್ದಿಗಳು

ನ್ಯಾಯಾಧೀಶರ ವರ್ಗ ಅರ್ಜುನನಾದರೆ ವಕೀಲ ವರ್ಗ ಕೃಷ್ಣನಿದ್ದಂತೆ: ವಿದಾಯ ಭಾಷಣದಲ್ಲಿ ನ್ಯಾ. ವಿನೀತ್ ಸರಣ್

ಕಾನೂನು ಅಂಶಗಳಿಗೆ ಸಂಬಂಧಿಸಿದಂತೆ ನ್ಯಾಯವಾದಿಗಳಿಂದ ಸೂಕ್ತ ಸಹಕಾರ ದೊರೆಯದಿದ್ದರೆ ನ್ಯಾಯಮೂರ್ತಿಗಳು ಉತ್ತಮ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

Bar & Bench

ಮಂಗಳವಾರ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿನೀತ್‌ ಸರಣ್‌ ಮಹಾಭಾರತವನ್ನು ಪ್ರಸ್ತಾಪಿಸುತ್ತಾ ನ್ಯಾಯವಾದಿ ವರ್ಗವನ್ನು ಶ್ರೀಕೃಷ್ಣನಿಗೂ, ನ್ಯಾಯಾಧೀಶರ ವರ್ಗವನ್ನು ಅರ್ಜುನನಿಗೂ ಹೋಲಿಸಿದರು.

ಸುಪ್ರೀಂ ಕೋರ್ಟ್‌ ವಕೀಲರ ಸಂಘ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಯಾಂಗದಲ್ಲಿ ಸಮತೋಲನ ಕಾಯ್ದುಕೊಳ್ಳಲು ವಕೀಲ ವರ್ಗ ಮತ್ತು ಪೀಠದ ನಡುವೆ ಉತ್ತಮ ಸಮತೋಲನ ಅಗತ್ಯ ಎಂದು ನ್ಯಾ. ಸರಣ್ ಒತ್ತಿ ಹೇಳಿದರು. ಈ ಎರಡೂ ವರ್ಗಗಳನ್ನು ಶ್ರೀ ಕೃಷ್ಣ ಸಾರಥಿಯಾಗಿಯೂ, ಅರ್ಜುನ ಧನುರ್ಧಾರಿಯಾಗಿಯೂ ಇದ್ದ ರಥದ ಎರಡು ಚಕ್ರಗಳಿಗೆ ಹೋಲಿಸಿದರು.

ಕಾನೂನು ಅಂಶಗಳಿಗೆ ಸಂಬಂಧಿಸಿದಂತೆ ನ್ಯಾಯವಾದಿಗಳಿಂದ ಸೂಕ್ತ ಸಹಕಾರ ದೊರೆಯದಿದ್ದರೆ ನ್ಯಾಯಮೂರ್ತಿಗಳು ಉತ್ತಮ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

“ವಕೀಲ ವರ್ಗ ಮತ್ತು ನ್ಯಾಯಾಧೀಶ ವರ್ಗ ರಥದ ಎರಡು ಚಕ್ರಗಳು ಎಂದು ಯಾವಾಗಲೂ ಹೇಳಲಾಗುತ್ತದೆ... ವಕೀಲ ವರ್ಗ ಶ್ರೀಕೃಷ್ಣನಾದರೆ ಪೀಠ ಅರ್ಜುನನಿದ್ದಂತೆ. ವಕೀಲ ವರ್ಗದ ಪಾತ್ರ ನ್ಯಾಯಾಧೀಶರ ಪಾತ್ರಕ್ಕಿಂತಲೂ ಕಡಿಮೆಯಲ್ಲ. ವಕೀಲರ ಸೂಕ್ತ ಸಹಕಾರವಿಲ್ಲದೆ ನ್ಯಾಯಾಧೀಶರು ಉತ್ತಮ ತೀರ್ಪು ಬರೆಯಲು ಸಾಧ್ಯವಿಲ್ಲ. ವಾದಗಳ ಗುಣಮಟ್ಟ ಅವಲಂಬಿಸಿ ತೀರ್ಪಿನ ಗುಣಮಟ್ಟ ಇರುತ್ತದೆ” ಎಂದು ಅವರು ಹೇಳಿದರು.

ನ್ಯಾಯಿಕ ಕೌಶಲ್ಯದ ಬಗ್ಗೆ ಪ್ರಸ್ತಾಪಿಸಿದ ಅವರು ತಮ್ಮ ಜ್ಞಾನವನ್ನು ನ್ಯಾಯಾಧೀಶರಿಗೆ ಪರಿಣಾಮಕಾರಿಯಾಗಿ ತಿಳಿಸಲು ವಕೀಲರು ಅದನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮುಖ್ಯ. ನ್ಯಾಯಾಲಯದ ಆಡಳಿತವನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲು ನ್ಯಾಯಾಧೀಶರು ಕೂಡ ನ್ಯಾಯಿಕ ಕೌಶಲ್ಯ ಬೆಳೆಸಿಕೊಳ್ಳುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್‌ನ ನೂತನ ಸಂಕೀರ್ಣಕ್ಕೆ ಹೊಂದಿಕೊಂಡಂತಿರುವ ಸಭಾಂಗಣದಲ್ಲಿ ವಿದಾಯ ಕಾರ್ಯಕ್ರಮ ನಡೆದಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಎಸ್‌ಸಿಬಿಎ ಅಧ್ಯಕ್ಷ ಹಿರಿಯ ವಕೀಲ ವಿಕಾಸ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.