Jagdeep Dhankhar
Jagdeep Dhankhar 
ಸುದ್ದಿಗಳು

ಉಪ ರಾಷ್ಟ್ರಪತಿ ಚುನಾವಣಾ ಕಣದಲ್ಲಿ ʼಒಲ್ಲದ ಮನಸಿನ ರಾಜಕಾರಣಿʼ ಜಗದೀಪ್ ಧನಕರ್

Bar & Bench

ರಾಜಕೀಯ ಕ್ಷೇತ್ರಕ್ಕೆ ಧುಮುಕುವ ಮೊದಲು ಧನಕರ್‌ ಕಾನೂನು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಹಿರಿಯ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ್ದರು.

ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಲ ಜಗದೀಪ್ ಧನಕರ್ ಅವರನ್ನು ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಾಮ ನಿರ್ದೇಶನ ಮಾಡಿದೆ.

ರಾಜಕೀಯ ಕ್ಷೇತ್ರಕ್ಕೆ ಧುಮುಕುವ ಮೊದಲು ಧನಕರ್‌ ಕಾನೂನು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಹಿರಿಯ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ್ದರು. ರಾಜಸ್ಥಾನ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಪದವಿ ಪಡೆದ ಧನಕರ್‌ 1979ರಲ್ಲಿ ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠದಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. 1987ರಲ್ಲಿ ರಾಜಸ್ಥಾನ ಹೈಕೋರ್ಟ್ ವಕೀಲರ ಸಂಘಕ್ಕೆ ಆಯ್ಕೆಯಾಗಿದ್ದರು. ಆಗ ಅವರು ಆ ಹುದ್ದೆಗೇರಿದ ಅತಿ ಕಿರಿಯ ವಯಸ್ಸಿನ ವಕೀಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಅವರು 1988ರಲ್ಲಿ ರಾಜಸ್ಥಾನ ವಕೀಲರ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು. ವಕೀಲರಾಗಿ 11 ವರ್ಷ ಸೇವೆ ಸಲ್ಲಿಸಿದ್ದ ಅವರನ್ನು ರಾಜಸ್ಥಾನ ಹೈಕೋರ್ಟ್‌ನಿಂದ ಹಿರಿಯ ನ್ಯಾಯವಾದಿಯಾಗಿ ನೇಮಿಸಿದ್ದರು.

1989ರಲ್ಲಿ ರಾಜಸ್ಥಾನದ ಜುಂಜುನು ಕ್ಷೇತ್ರದಿಂದ ಲೋಕಸಭೆಗೆ ಧನಕರ್ ಆಯ್ಕೆಯಾದರು. ಬಳಿಕ ತಮ್ಮ ವಕೀಲಿಕೆಯನ್ನು ಸುಪ್ರೀಂ ಕೋರ್ಟ್‌ಗೆ ಬದಲಿಸಿದರು. ಅಲ್ಲದೆ ಪ್ಯಾರಿಸ್‌ನಲ್ಲಿರುವ ಐಸಿಸಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಸದಸ್ಯರಾಗಿ ಮೂರು ವರ್ಷ ಸೇವೆ ಸಲ್ಲಿಸಿದರು. ಅಲ್ಲಿ ಅವರು ವಿವಿಧ ಮಾನವ ಸಂಪನ್ಮೂಲ ಮತ್ತು ಮತ್ತು ವಾಣಿಜ್ಯ ಪ್ರಕರಣಗಳನ್ನು ನಿರ್ವಹಿಸಿದ್ದರು.

ಧನಕರ್‌ ಹೇಳುವಂತೆ ಅವರಿಗೆ ರಾಜಕೀಯ ಪ್ರವೇಶಿಸಲು ಇಷ್ಟವಿರಲಿಲ್ಲ. ಅದು ಅವರ ಆಯ್ಕೆಯ ಕೊನೆಯ ವಿಚಾರವಾಗಿತ್ತು. ಬೋಫೋರ್ಸ್‌ ಹಗರಣ ಸದ್ದು ಮಾಡುತ್ತಿದ್ದ ಕಾಲದಲ್ಲಿ ಅವರು ರಾಜಕೀಯ ರಂಗಕ್ಕೆ ಕಾಲಿಟ್ಟು ಸಂಸದರಾದರು.

“ಸಂಸದ, ಶಾಸಕ, ಕೇಂದ್ರ ಸಚಿವನೂ ಆಗಿರುವ ಹಿನ್ನೆಲೆಯಲ್ಲಿ ನಾನೊಬ್ಬ 'ಒಲ್ಲದ ಮನಸ್ಸಿನ ರಾಜಕಾರಣಿ' ಎಂಬುದನ್ನು ಇತರರಿಗೆ ಅರಗಿಸಿಕೊಳ್ಳುವುದು ಕಷ್ಟ, ನನ್ನ ಹೃದಯ ಯಾವತ್ತೂ ರಾಜಕೀಯದೆಡೆಗೆ ಇರಲಿಲ್ಲ” ಎಂದು ಅವರು ಒಂದೆಡೆ ಹೇಳಿದ್ದಾರೆ.

ಜುಲೈ 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡರು ಧನಕರ್‌. ಅವರ ಮತ್ತು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಆಗಾಗ್ಗೆ ಉಂಟಾಗುತ್ತಿದ್ದ ಭಿನ್ನಾಭಿಪ್ರಾಯಗಳು ಸುದ್ದಿಗೆ ಗ್ರಾಸವಾಗುತ್ತಿದ್ದವು. “ಬಿಜೆಪಿ ವಕ್ತಾರರಿಗಿಂತ ಆಡಳಿತ ಪಕ್ಷವನ್ನು ಹೆಚ್ಚು ಟೀಕಿಸುತ್ತಿದ್ದಾರೆ” ಎಂದು ರಾಜ್ಯಪಾಲ ಧನಕರ್‌ ಅವರನ್ನು ಮಮತಾ ಬಣ್ಣಿಸುತ್ತಿದ್ದ ರೀತಿ. ಆದರೆ, ತಾನೆಂದೂ ಸಾಂವಿಧಾನಿಕ ನಿಯಮ ಮೀರಿ ಹೋಗಿಲ್ಲ ಎಂಬುದು ಧನಕರ್‌ ಸಮರ್ಥಿಸಿಕೊಂಡಿದ್ದರು.

ರಾಜ್ಯಪಾಲರು ಎಂದರೆ ಉತ್ಸವ ಮೂರ್ತಿಯಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದರು. “ರಾಜ್ಯಪಾಲರು ತಮ್ಮ ಎಲ್ಲಾ ಕಾರ್ಯಗಳನ್ನು ಸಚಿವ ಸಂಪುಟದ ನೆರವು ಮತ್ತು ಸಲಹೆ ಪಡೆದು ನಿರ್ವಹಿಸಬಾರದು” ಎಂದು ವಿವರಿಸಿದ್ದರು.

“ರಾಜ್ಯಪಾಲರು ರಾಜ್ಯದ ರಾಜಕೀಯದಲ್ಲಿ ಭಾಗಿದಾರರಲ್ಲ ನಿಜ. ಆದರೆ ಖಂಡಿತವಾಗಿಯೂ ರಾಜ್ಯದ ಆಡಳಿತದಲ್ಲಿ ಹೆಚ್ಚಿನ ಪಾಲು ಅವರಿಗೆ ಇದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ” ಎಂದು ಅವರು ಪ್ರತಿಪಾದಿಸಿದ್ದಿದೆ.