Justice S Abdul Nazeer 
ಸುದ್ದಿಗಳು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಕನ್ನಡಿಗ ಅಬ್ದುಲ್ ನಜೀರ್ ಅವರು ನೀಡಿದ ಪ್ರಮುಖ ತೀರ್ಪುಗಳ ಮಾಹಿತಿ

ಅಯೋಧ್ಯೆ ವಿವಾದದಿಂದ ಹಿಡಿದು ತ್ರಿವಳಿ ತಲಾಖ್‌ವರೆಗೆ ದೇಶದ ಇತ್ತೀಚಿನ ಚರಿತ್ರೆಯಲ್ಲಿ ಕೆಲ ಪ್ರಮುಖ ಎನ್ನಬಹುದಾದ ಪ್ರಕರಣಗಳಲ್ಲಿ ತೀರ್ಪು ನೀಡಿದ ಪೀಠಗಳ ಭಾಗವಾಗಿದ್ದರು ನ್ಯಾ. ನಜೀರ್.

Bar & Bench

ಬುಧವಾರ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌. ಅಬ್ದುಲ್‌ ನಜೀರ್‌ ಅವರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸದೆಯೇ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ದೇಶದ ಮೂರನೇ ನ್ಯಾಯಮೂರ್ತಿ ಎಂಬುದು ವಿಶೇಷ.

ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ಐದು ವರ್ಷಗಳ ಅವಧಿಯಲ್ಲಿ, ನ್ಯಾ, ನಜೀರ್ ಅವರು ಅಯೋಧ್ಯೆ ವಿವಾದದಿಂದ ಹಿಡಿದು ತ್ರಿವಳಿ ತಲಾಖ್‌ವರೆಗೆ ದೇಶದ ಇತ್ತೀಚಿನ ಚರಿತ್ರೆಯಲ್ಲಿ ಕೆಲ ಪ್ರಮುಖ ಎನ್ನಬಹುದಾದ ಪ್ರಕರಣಗಳಲ್ಲಿ ತೀರ್ಪು ನೀಡಿದ ಪೀಠಗಳ ಭಾಗವಾಗಿದ್ದರು. ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ನೀಡಿದ ಅತ್ಯಂತ ಮಹತ್ವದ ತೀರ್ಪುಗಳ ಸಂಕ್ಷಿಪ್ತ ನೋಟ ಇಲ್ಲಿದೆ:

ನೋಟು ರದ್ದತಿ: ಕೇಂದ್ರ ಸರ್ಕಾರವು 2016ರಲ್ಲಿ ಕೈಗೊಂಡಿದ್ದ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕೆಲ ದಿನಗಳ ಹಿಂದಷ್ಟೇ ನ್ಯಾಯಮೂರ್ತಿ  ನಜೀರ್, ನೇತೃತ್ವದ ಸಾಂವಿಧಾನಿಕ ಪೀಠ ವಜಾಗೊಳಿಸಿತ್ತು.

ಪ್ರಕರಣದ ಶೀರ್ಷಿಕೆ: ವಿವೇಕ್ ನಾರಾಯಣ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ.

ಸಾರ್ವಜನಿಕ ಸೇವಕನ ಭ್ರಷ್ಟಾಚಾರ: ಭ್ರಷ್ಟಾಚಾರ ಎಸಗಿದ ಸಾರ್ವಜನಿಕ ಸೇವಕನನ್ನು ಸಾಂದರ್ಭಿಕ ಸಾಕ್ಷ್ಯ ಆಧರಿಸಿಯೂ ದೋಷಿ ಎಂದು ಪರಿಗಣಿಸಬಹುದು. ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಮತ್ತು ಪಡೆದಿದ್ದಕ್ಕೆ ನೇರ ಮೌಖಿಕ ಅಥವಾ ದಾಖಲೆಯಲ್ಲಿ ಸಾಕ್ಷ್ಯಗಳು ಇಲ್ಲದಿದ್ದಲ್ಲಿ ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಅದನ್ನು ಸಾಬೀತುಪಡಿಸಬಹುದು  ಎಂದು ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಪ್ರಕರಣದ ಶೀರ್ಷಿಕೆ: ನೀರಜ್‌ ದತ್ತಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ.

ಜನಪ್ರತಿನಿಧಿಗಳ ವಾಕ್‌ ಸ್ವಾತಂತ್ರ್ಯ: ಸಚಿವರು, ಸಂಸದರು ಹಾಗೂ ಶಾಸಕರು ದೇಶದ ಎಲ್ಲ ನಾಗರಿಕರಿಗೆ ಸರಿಸಮನಾಗಿ ಸಂವಿಧಾನದ 19(1)(a) ಅಡಿ ನೀಡಲಾಗಿರುವ ವಾಕ್‌ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ ಎಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಭಾಗವಾಗಿದ್ದರು ನ್ಯಾ. ನಜೀರ್‌. ಜನಪ್ರತಿನಿಧಿಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಚಲಾಯಿಸುವ ವಾಕ್ ಸ್ವಾತಂತ್ರ್ಯದ ಹಕ್ಕಿನ  ಮೇಲೆ ಹೆಚ್ಚುವರಿಯಾಗಿ ನಿರ್ಬಂಧ  ಹೇರುವಂತಿಲ್ಲ ಎಂದು ಸಾಂವಿಧಾನಿಕ ಪೀಠ ಹೇಳಿತು.

ಪ್ರಕರಣದ ಶೀರ್ಷಿಕೆ: ಕೌಶಲ್ ಕಿಶೋರ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ.

ಅಯೋಧ್ಯೆ ವಿವಾದ: ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನ್ಯಾಯಮೂರ್ತಿಗಳಾದ ಎಸ್ ‌ಎ ಬೊಬ್ಡೆಡಿ ವೈ ಚಂದ್ರಚೂಡ್ಅಶೋಕ್ ಭೂಷಣ್ ಹಾಗೂ ಎಸ್ ಅಬ್ದುಲ್ ನಜೀರ್ ಅವರಿದ್ದ ಪೀಠ ಹಿಂದೂ ಅರ್ಜಿದಾರರ ಪರವಾಗಿ ತೀರ್ಪು ನೀಡಿ ವಿವಾದಿತ ಸ್ಥಳವನ್ನು ಬಾಲದೈವ ರಾಮಲಲ್ಲಾಗೆ ವಹಿಸಿತು. ಮತ್ತೊಂದೆಡೆ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಂ ಪಕ್ಷಗಳಿಗೆ ಐದು ಎಕರೆ ವಿಸ್ತೀರ್ಣದ ಮತ್ತೊಂದು ಜಾಗವನ್ನು ಗುರುತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಪ್ರಕರಣದ ಶೀರ್ಷಿಕೆ: ವಕೀಲರ ಮೂಲಕ ಎಂ ಸಿದ್ದೀಕ್‌ ಮತ್ತು ಮಹಾಂತ ದಾಸ ಇನ್ನಿತರರ ನಡುವಣ ಪ್ರಕರಣ.

ಖಾಸಗಿತನ ಮೂಲಭೂತ ಹಕ್ಕು: ಸಂವಿಧಾನದ 21ನೇ ವಿಧಿಯಡಿ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದು ನ್ಯಾ. ನಜೀರ್ ಅವರನ್ನೊಳಗೊಂಡ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ಜೊತೆಗೆ ದತ್ತಾಂಶ ಗೌಪ್ಯತೆಗೆ ಸಂಬಂಧಿಸಿದ ಹೊಸ ಕಾನೂನಿನ ಅನುಷ್ಠಾನದ ಅಗತ್ಯವಿದೆ ಎಂದು ಹೇಳಿದ ಪೀಠ ವೈಯಕ್ತಿಕ ಸ್ಥಳಗಳಲ್ಲಿ ಗೌಪ್ಯತೆಯ ವ್ಯಾಪ್ತಿಯನ್ನು ವಿಸ್ತರಿಸಿತು ಮತ್ತು ಗೌಪ್ಯತೆಯನ್ನು ಆಂತರಿಕ ಹಕ್ಕು ಎಂದು ಘೋಷಿಸಿತು.

ಪ್ರಕರಣದ ಶೀರ್ಷಿಕೆ: ನ್ಯಾ. ಕೆ.ಎಸ್.ಪುಟ್ಟಸ್ವಾಮಿ (ನಿವೃತ್ತ) ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ.

ಮರಾಠಾ ಮೀಸಲಾತಿ: ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ 2018ರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಹಾರಾಷ್ಟ್ರ ರಾಜ್ಯ ಮೀಸಲಾತಿ (ಎಸ್‌ಬಿಸಿ) ಕಾಯಿದೆಯನ್ನು ಸುಪ್ರೀಂಕೋರ್ಟ್‌ ಕಳೆದ ವರ್ಷ ಅನೂರ್ಜಿತಗೊಳಿಸಿತು. 1992ರ ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನ ವೇಳೆ ಸುಪ್ರೀಂಕೋರ್ಟ್‌ ನಿಗದಿಪಡಿಸಿದ್ದ ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ಮರಾಠಾ ಸಮುದಾಯಕ್ಕೆ ನೀಡಲು ಯಾವುದೇ ವಿಶೇಷ ಸಂದರ್ಭಗಳಿಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿತ್ತು.

ಪ್ರಕರಣದ ಶೀರ್ಷಿಕೆ: ಜೈಶ್ರೀ ಲಕ್ಷ್ಮಣರಾವ್ ಪಾಟೀಲ್  ಮತ್ತು ಮುಖ್ಯಮಂತ್ರಿ ನಡುವಣ ಪ್ರಕರಣ.

ಸಿಆರ್‌ಪಿಸಿ ಸೆಕ್ಷನ್‌ ಸೆಕ್ಷನ್ 319:  ನ್ಯಾ. ನಜೀರ್‌ ಅವರು ನೀಡಿದ ಮಹತ್ವದ ತೀರ್ಪುಗಳಲ್ಲಿ ಇದೂ ಕೂಡ ಒಂದು. ಸಿಆರ್‌ಪಿಸಿ ಸೆಕ್ಷನ್‌ 319ರ ಅಡಿಯಲ್ಲಿ ಆರೋಪಿಗೆ ಹೊರತಾದ ವ್ಯಕ್ತಿಗಳಿಗೆ ಸಮನ್ಸ್‌ ನೀಡುವ ವಿಚಾರಣಾ ನ್ಯಾಯಾಲಯದ ಅಧಿಕಾರವನ್ನು ಖುಲಾಸೆ ಅಥವಾ ಶಿಕ್ಷೆ ವಿಧಿಸುವ ಮೊದಲು ಚಲಾಯಿಸಬಹುದು ಎಂದಿತ್ತು.  ವಿಚಾರಣೆಯ ಸಮಯದಲ್ಲಿ ಬೇರೆ ಆರೋಪಿಗಳಿಗೆ ಸಮನ್ಸ್ ನೀಡಲು ಸಿಆರ್‌ಪಿಸಿ ಸೆಕ್ಷನ್ 319ರ ಅಡಿಯಲ್ಲಿ ಅಧಿಕಾರ ಚಲಾಯಿಸುವ ಕುರಿತು ನ್ಯಾಯಾಲಯ ವಿಸ್ತೃತ ಮಾರ್ಗಸೂಚಿಗಳನ್ನು ನೀಡಿತ್ತು.

ಪ್ರಕರಣದ ಶೀರ್ಷಿಕೆ: ಸುಖಪಾಲ್ ಸಿಂಗ್ ಖೇರ್  ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ.

ಅಪರಾಧಿಗಳಿಗೂ ಘನತೆಯ ಬದುಕು: ಅಪರಾಧಿಗಳು ಘನತೆಯ ಜೀವನ ನಡೆಸಲು ಅರ್ಹರು. ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಮೊದಲು ಅವರು ತಮ್ಮ ಬದುಕಿನಲ್ಲಿ ಸುಧಾರಣೆ ಮಾಡಿಕೊಳ್ಳು ಸಾಧ್ಯತೆ ಇದೆಯೇ ಎಂಬುದನ್ನು ಭೀರವಾಗಿ ಪರಿಗಣಿಸಬೇಕು ಎಂದು ತೀರ್ಪು ನೀಡಿದವರಲ್ಲಿ ನ್ಯಾ. ನಜೀರ್‌ ಕೂಡ ಒಬ್ಬರು.

ಪ್ರಕರಣದ ಶೀರ್ಷಿಕೆ: ರಾಜೇಂದ್ರ ಪ್ರಲ್ಹಾದರಾವ್ ವಾಸ್ನಿಕ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ.

ಎಜಿಆರ್‌ ಬಾಕಿ: ಕೇಂದ್ರ ಸರ್ಕಾರಕ್ಕೆ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್) ಪಾವತಿಸಲು ಟೆಲಿಕಾಂ ಕಂಪೆನಿಗಳಿಗೆ 10 ವರ್ಷಗಳ ಕಾಲಾವಕಾಶ ನೀಡಿ ನ್ಯಾ. ನಜೀರ್‌ ನೇತೃತ್ವದ ಪೀಠ ಆದೇಶಿಸಿತ್ತು. ಆದರೆ ಈ  ತೀರ್ಪಿನ ಅನುಸಾರ ತಾವು ಪಾವತಿಸಬೇಕಾದ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್‌) ಬಾಕಿ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದ್ದು, ಅದನ್ನು ಸರಿಪಡಿಸುವಂತೆ ಭಾರ್ತಿ ಏರ್‌ಟೆಲ್‌, ವೊಡಾಫೋನ್‌-ಐಡಿಯಾ ಮತ್ತು ಟಾಟಾ ಟೆಲಿಕಾಂ ಕಂಪೆನಿಗಳು ಸಲ್ಲಿಸಿದ್ದ ಮನವಿಯನ್ನು ನ್ಯಾ. ನಜೀರ್‌ ಅವರನ್ನೊಳ್ಳಗೊಂಡ ತ್ರಿಸದಸ್ಯ ಪೀಠ 2021ರಲ್ಲಿ ವಜಾಗೊಳಿಸಿತು.

ಪ್ರಕರಣದ ಶೀರ್ಷಿಕೆ:  ಭಾರತ ಒಕ್ಕೂಟ ಮತ್ತು  ಭಾರತೀಯ ಏಕೀಕೃತ ಟೆಲಿಕಾಂ ಸೇವಾ ಪೂರೈಕೆದಾರರ ಸಂಘ ನಡುವಣ ಪ್ರಕರಣ.

ಇದಲ್ಲದೆ ʼತಂದೆಯ ಸ್ವಯಾರ್ಜಿತ ಆಸ್ತಿ ಅಥವಾ ತನ್ನ ಪೂರ್ವಿಕರ ಆಸ್ತಿ ವಿಭಜನೆಯ ವೇಳೆ ಪಡೆದ ಪಾಲನ್ನು ಆನುವಂಶಿಕವಾಗಿ ಪಡೆಯಲು ಸಮರ್ಥಳು; ಐಟಿ ರಿಟರ್ನ್ಸ್‌ ಪಾವತಿಸಲು ಪ್ಯಾನ್‌ ಕಾರ್ಡ್‌ ಜೊತೆಗೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡುವುದು ಕಡ್ಡಾಯ; ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳ ಆದಾಯದ ಮೂಲಗಳನ್ನು ಬಹಿರಂಗಪಡಿಸಬೇಕು; ಅಶಿಸ್ತಿನ ವಿದ್ಯಾರ್ಥಿಯನ್ನು ಶಿಕ್ಷಕರು ದಂಡಿಸುವುದು ಐಪಿಸಿ ಸೆಕ್ಷನ್‌ 306ರ ಅಡಿ ಆತ್ಮಹತ್ಯೆಗೆ ನೀಡಿದ ಪ್ರಚೋದನೆ ಆಗುವುದಿಲ್ಲʼ ಎಂಬ ಮಹತ್ವದ ತೀರ್ಪುಗಳನ್ನು ನೀಡಿದ ನ್ಯಾಯಮೂರ್ತಿಗಳಲ್ಲಿ ನ್ಯಾ. ನಜೀರ್‌ ಅವರು ಒಬ್ಬರಾಗಿದ್ದಾರೆ.

ಭಿನ್ನ ತೀರ್ಪುಗಳು

ತ್ರಿವಳಿ ತಲಾಖ್ ಪದ್ಧತಿ ಅಸಾಂವಿಧಾನಿಕ ಎಂದು ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌ ತೀರ್ಪು ನೀಡಿದರು. ಆದರೆ ಈ ಸಂದರ್ಭದಲ್ಲಿ ಭಿನ್ನ ತೀರ್ಪು ನೀಡಿದ ನ್ಯಾ. ನಜೀರ್‌ ಅವರು ಮೂಲಭೂತ ಹಕ್ಕುಗಳ ಸ್ಥಾನಮಾನವನ್ನು ಅನುಭವಿಸುವ ವೈಯಕ್ತಿಕ ಕಾನೂನುಗಳಲ್ಲಿ ಉನ್ನತ ನ್ಯಾಯಾಲಯವು ಮಧ್ಯಪ್ರವೇಶಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಇಸ್ಮಾಯಿಲ್ ಫಾರುಕಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿಲ್ಲ, ಅಯೋಧ್ಯೆ-ರಾಮ ಜನ್ಮಭೂಮಿ ವಿವಾದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದಾಗ ಆ ನಿಲುವಿಗೆ ಪ್ರತಿಯಾಗಿ ತೀರ್ಪು ಬರೆದಿದ್ದರು ನ್ಯಾ. ನಜೀರ್‌. ಮಸೀದಿ ಇಸ್ಲಾಂನ ಅವಿಭಾಜ್ಯವಾಗಿದೆಯೇ ಇಲ್ಲವೇ ಎಂಬುದನ್ನು ವಿಸ್ತೃತ ಪೀಠವೇ ತೀರ್ಮಾನಿಸಬೇಕು ಎಂದು ಅವರು ಹೇಳಿದ್ದರು