ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ಯಾವಾಗಲೂ ಸರಿಯಾದುದರ ಪರ ನಿಂತವರು. ಸರಿ ತಪ್ಪುಗಳನ್ನು ಎದುರಿಸುವಾಗ ಅವರೆಂದೂ ತಟಸ್ಥರಾಗಿ ಉಳಿದವರಲ್ಲ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ನಿವೃತ್ತರಾಗಲಿರುವ ಕರ್ನಾಟಕದವರಾದ ನ್ಯಾ. ಅಬ್ದುಲ್ ನಜೀರ್ ಅವರು ಸಿಜೆಐ ಅವರೊಂದಿಗೆ ಔಪಚಾರಿಕ ಪೀಠದಲ್ಲಿ ಕುಳಿತು ನ್ಯಾಯಾಲಯದ ಕಲಾಪಗಳಲ್ಲಿ ಭಾಗಿಯಾದರು.
ಆಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡುವ ವೇಳೆ ತಾವು ಅವರೊಂದಿಗೆ ಪೀಠ ಹಂಚಿಕೊಂಡದ್ದನ್ನು ಈ ಸಂದರ್ಭದಲ್ಲಿ ಸಿಜೆಐ ನೆನಪಿಸಿಕೊಂಡರು.
"ನ್ಯಾಯಮೂರ್ತಿ ನಜೀರ್ ಅವರು ಸರಿ ಮತ್ತು ತಪ್ಪುಗಳೆದುರು ತಟಸ್ಥರಾಗಿ ಇರುತ್ತಿರಲಿಲ್ಲ. ಬದಲಿಗೆ ಯಾವಾಗಲೂ ಸರಿಯಾದುದರ ಪರ ನಿಲ್ಲುತ್ತಿದ್ದರು. ನಾವು ಅಯೋಧ್ಯೆ ತೀರ್ಪು ನೀಡುವ ವೇಳೆ ಪೀಠವನ್ನು ಹಂಚಿಕೊಂಡಿದ್ದೇವೆ. ಅಲ್ಲದೆ ಒಟ್ಟಿಗೆ ಕೆಲಸ ಮಾಡಿದ್ದೇವೆ ಒಟ್ಟಿಗೆ ತೀರ್ಪು ನೀಡಿದ್ದೇವೆ " ಎಂದು ಸಿಜೆಐ ಹೇಳಿದರು.
ನಾವು ಸ್ನೇಹಿತರಾಗಿ ಮುಂದುವರೆದರೂ ಮತ್ತೆಂದೂ ಪೀಠ ಹಂಚಿಕೊಳ್ಳಲು ಸಾಧ್ಯವಿಲ್ಲವಲ್ಲ ಎಂಬ ದುಃಖ ತಮಗಿದೆ ಎಂದು ಸಿಜೆಐ ಹೇಳಿದರು.
ಔಪಚಾರಿಕ ಪೀಠದ ಭಾಗವಾಗಿದ್ದ ನ್ಯಾ. ಪಿ ಎಸ್ ನರಸಿಂಹ ಅವರು ನ್ಯಾ. ನಜೀರ್ ಅವರೆದುರು ಹಿರಿಯ ನ್ಯಾಯವಾದಿಯಾಗಿ ತಾವು ವಾದ ಮಂಡಿಸುತ್ತಿದ್ದ ದಿನಗಳನ್ನು ನೆನೆದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಮತ್ತು ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ, ಸಂಜಯ್ ಹೆಗ್ಡೆ ಮತ್ತು ವಿ ಮೋಹನ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.
ಎಸ್‌ಡಿಎಂನಿಂದ ಸುಪ್ರೀಂ ಕೋರ್ಟ್‌ವರೆಗೆ…
ಜಸ್ಟಿಸ್ ನಜೀರ್ ಅವರು ಜನವರಿ 5, 1958ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಜನಿಸಿದರು. ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಅವರು ಫೆಬ್ರವರಿ 18, 1983ರಲ್ಲಿ ವಕೀಲಿಕೆ ಆರಂಭಿಸಿದರು. ಬಳಿಕ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದರು. ಮೇ 12, 2003ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅವರು ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾದದ್ದು ಸೆಪ್ಟೆಂಬರ್ 24, 2004ರಲ್ಲಿ. ಬಳಿಕ ಫೆಬ್ರವರಿ 17, 2017ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.