ಫಾರ್ಮಾ ಕಂಪೆನಿ ಹಿಮಾಲಯ ವೆಲ್‌ನೆಸ್ ಮತ್ತು ಸಾಮಾಜಿಕ ಮಾಧ್ಯಮ ಎಕ್ಸ್ ಕಾರ್ಪ್ (ಹಿಂದಿನ ಟ್ವಿಟರ್) ವಿರುದ್ಧ ದಲಿವರ್‌ಡಾಕ್ (TheLiverDoc) ಎಂದೇ ಪ್ರಸಿದ್ಧಿಯಾಗಿರುವ ಡಾ. ಸಿರಿಯಾಕ್ ಅಬಿ ಫಿಲಿಪ್ಸ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಹಿಮಾಲಯ ಸಂಸ್ಥೆಯು ಹೂಡಿದ್ದ ಮಾನಹಾನಿ ದಾವೆಯನ್ನು ಪರಿಗಣಿಸಿ ಬೆಂಗಳೂರಿನ ಸತ್ರ ನ್ಯಾಯಾಲಯವು ಡಾ. ಫಿಲಿಪ್ಸ್ ಅವರ ಎಕ್ಸ್ ಕಾರ್ಪ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿತ್ತು. ಇದಕ್ಕೆ ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದೆ.
ಡಾ. ಫಿಲಿಪ್ಸ್ ಅವರು ಯಕೃತ್ ವೈದ್ಯ (ಹೆಪಟೋಲೋಜಿಸ್ಟ್) ಮತ್ತು ಕ್ಲಿನಿಷಿಯನ್ ವಿಜ್ಞಾನಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ್ಯಾಯ ಔಷಧಗಳ ಕಟು ಟೀಕಾಕಾರರಾಗಿದ್ದಾರೆ.
ಕಂಪೆನಿ ಮಂಡಿಸಿರುವ ವಾಸ್ತವಿಕ ಅಂಶಗಳು ಮತ್ತು ಹಲವು ನ್ಯಾಯಾಲಯಗಳು ನೀಡಿರುವ ತೀರ್ಪಿನ ಪ್ರಕಾರ ಫಿಲಿಪ್ಸ್ ಅವರಿಗೆ ನೋಟಿಸ್ ಜಾರಿ ಮಾಡುವುದಕ್ಕೂ ಮುನ್ನ ಅವರ ವಿರುದ್ಧ ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಅವರು ಸೆಪ್ಟೆಂಬರ್ 23ರಂದು ಆದೇಶಿಸಿದ್ದರು.