Mamata Banerjee, ED and Supreme Court 
ಸುದ್ದಿಗಳು

ಐ- ಪ್ಯಾಕ್ ಪ್ರಕರಣದಲ್ಲಿ ಮಧ್ಯಪ್ರವೇಶಿಸದೆ ಹೋದರೆ ಅರಾಜಕತೆ ಎಂದ ಸುಪ್ರೀಂ ಕೋರ್ಟ್; ಮಮತಾ ಬ್ಯಾನರ್ಜಿಗೆ ನೋಟಿಸ್

ಐ-ಪ್ಯಾಕ್ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ದಾಖಲಿಸಿದ್ದ ಎಫ್ಐಆರ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡಿತು.

Bar & Bench

ರಾಜಕೀಯ ಸಲಹಾ ಸಂಸ್ಥೆ ಐ- ಪ್ಯಾಕ್‌ ಕಚೇರಿ ಹಾಗೂ ಅದರ ಸಹಸಂಸ್ಥಾಪಕ ಪ್ರತೀಕ್‌ ಜೈನ್ ಅವರ ನಿವಾಸದಲ್ಲಿ ಇತ್ತೀಚೆಗೆ ನಡೆಸಿದ ಶೋಧ ಕಾರ್ಯಾಚರಣೆಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಸಿಎಂ) ಮಮತಾ ಬ್ಯಾನರ್ಜಿ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕುಮಾರ್ ಹಾಗೂ ಇತರರಿಗೆ ಗುರುವಾರ ಸುಪ್ರೀಂ ಕೋರ್ಟ್ ನೋಟಿಸ್‌ ನೀಡಿದೆ.

 ಮಮತಾ ಬ್ಯಾನರ್ಜಿ, ರಾಜೀವ್ ಕುಮಾರ್ ಹಾಗೂ ಇತರರ ವಿರುದ್ಧ ಸಿಬಿಐ ತನಿಖೆಗೆ ನಿರ್ದೇಶಿಸಬೇಕು ಎಂದು ಇ ಡಿ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸಿಜೆಐ ಸೂರ್ಯ ಕಾಂತ್‌, ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರಿದ್ದ ಪೀಠ ಸೂಚಿಸಿದೆ.

ಇ ಡಿ ಸಲ್ಲಿಸಿದ ಅರ್ಜಿ ಗಂಭೀರ ಪ್ರಶ್ನೆಗಳನ್ನು ಒಳಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ. “ಮೇಲ್ನೋಟಕ್ಕೆ ಇ ಡಿ ಅಥವಾ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸುವಾಗ ರಾಜ್ಯ ಸರ್ಕಾರದ ಅಂಗಗಳು ಹಸ್ತಕ್ಷೇಪ ಮಾಡುವುದಕ್ಕೆ ಸಂಬಂಧಿಸಿದ ಗಂಭೀರ ವಿಚಾರವನ್ನು ಪ್ರಸ್ತುತ ಅರ್ಜಿ ಎತ್ತಿದೆ. ದೇಶದಲ್ಲಿ ಕಾನೂನಾತ್ಮಕ ಆಡಳಿತ ಕಾಪಡಾಡುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ಅಂಗವೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲು ಪ್ರಕರಣವನ್ನು ಪರಿಶೀಲಿಸುವುದು ಅಗತ್ಯ. ನಿರ್ದಿಷ್ಟ ರಾಜ್ಯದ ಕಾನೂನು ಜಾರಿ ಸಂಸ್ಥೆಗಳ ಮುದ್ರೆಯಡಿ ಅಪರಾಧಿಗಳ ರಕ್ಷಣೆ ಸಾಧ್ಯವಾಗಬಾರದು ಎನ್ನುವ ಕಾರಣಕ್ಕಾಗಿ ಈ ವಿಷಯವನ್ನು ಪರಿಶೀಲಿಸುವ ಅಗತ್ಯವಿದೆ” ಎಂದು ನ್ಯಾಯಾಲಯ ಗಮನ ಸೆಳೆದಿದೆ.

ಇ ಡಿ ಎತ್ತಿರುವ ವಿಚಾರಗಳನ್ನು ನ್ಯಾಯಾಲಯ ಪರಿಶೀಲಿಸದೆ ಹೋದರೆ ಅರಾಜಕತೆ ಉಂಟಾಗುವ ಸಾಧ್ಯತೆ ಇದೆ ಎಂದು ಕೂಡ ನ್ಯಾಯಾಲಯ ಹೇಳಿದೆ. ಪ್ರಕರಣದಲ್ಲಿ ವಿಸ್ತೃತ ಪ್ರಶ್ನೆಗಳು ಉದ್ಭವಿಸಿವೆ. ಅವುಗಳನ್ನು ನಿರ್ಣಯಿಸದೆ ಬಿಟ್ಟರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ವಿಭಿನ್ನ ರಾಜ್ಯಗಳಲ್ಲಿ ವಿಭಿನ್ನ ರಾಜಕೀಯ ಗುಂಪುಗಳು ಆಡಳಿತ ನಡೆಸುತ್ತಿರುವುದನ್ನು ಗಮನಿಸಿದರೆ, ಒಂದಿಲ್ಲೊಂದು ರಾಜ್ಯದಲ್ಲಿ ಅರಾಜಕತೆ ಆವರಿಸುವ ಸಾಧ್ಯತೆ ಇದೆ ಎಂದು ಪೀಠ ಹೇಳಿದೆ.

ಯಾವುದೇ ಕೇಂದ್ರ ಸಂಸ್ಥೆಗೆ ರಾಜಕೀಯ ಪಕ್ಷಗಳ ಚುನಾವಣಾ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ. ಆದರೆ ರಾಜಕೀಯ ಪಕ್ಷಗಳು ತನಿಖಾ ಸಂಸ್ಥೆಗಳ ಪ್ರಾಮಾಣಿಕ ತನಿಖೆಗೆ ಅಡ್ಡಿಪಡಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಐ- ಪ್ಯಾಕ್‌ ಮೇಲೆ ನಡೆಸಿದ ದಾಳಿಗಳ ವೇಳೆ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪದ ಆಧಾರದಲ್ಲಿ, ಅವರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಜಾರಿ ನಿರ್ದೇಶನಾಲಯವು (ಇ ಡಿ) ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು, ಇ ಡಿ ಮನವಿಯ ಮೇರೆಗೆ ಮುಂದೂಡಲಾಗಿತ್ತು. ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವುದರಿಂದ ವಿಚಾರಣೆಯನ್ನು ಮುಂದೂಡಲು ಇ ಡಿ ಕೋರಿತ್ತು.

ಇದೀಗ ಪ್ರಕರಣದಲ್ಲಿ ನೇರವಾಗಿ ಮಧ್ಯಪ್ರವೇಶಿಸಿರುವ ಸುಪ್ರೀಂ ಕೋರ್ಟ್‌ ಮಮತಾ ಬ್ಯಾನರ್ಜಿ ಹಾಗೂ ಇತರರು ಇ ಡಿ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಎರಡು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.

ಐ-ಪ್ಯಾಕ್  ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ದಾಖಲಿಸಿದ್ದ ಎಫ್ಐಆರ್‌ಗೆ ಸುಪ್ರೀಂ ಕೋರ್ಟ್ ಇದೇ ವೇಳೆ ತಡೆ ನೀಡಿತು. ಮುಂದಿನ ವಿಚಾರಣೆ ಫೆಬ್ರವರಿ 3ರಂದು ನಡೆಯಲಿದೆ.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದರು. ಮಮತಾ ಬ್ಯಾನರ್ಜಿ ಅವರನ್ನು ಕಪಿಲ್‌ ಸಿಬಲ್‌ ಪ್ರತಿನಿಧಿಸಿದ್ದರು. ಪ. ಬಂಗಾಳ ಸರ್ಕಾರ ಮತ್ತು ಡಿಜಿಪಿ ಅವರ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಇಬ್ಬರು ಪೊಲೀಸ್ ಅಧಿಕಾರಿಗಳ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ಇತರರು ವಾದ ಮಂಡಿಸಿದರು.