ದೆಹಲಿ ಗಲಭೆ ಪಿತೂರಿ ಪ್ರಕರಣದ ಆರೋಪಿಗಳು ಬಾಂಗ್ಲಾದೇಶ, ನೇಪಾಳದಲ್ಲಿ ನಡೆದ ಬೆಳವಣಿಗೆಗಳಂತೆ ಭಾರತದಲ್ಲಿಯೂ ಸರ್ಕಾರವನ್ನು ಬದಲಾಯಿಸಲು ಯತ್ನಿಸಿದ ದೇಶ ವಿರೋಧಿಗಳು ಎಂದು ದೆಹಲಿ ಪೊಲೀಸರು ಗುರುವಾರ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಿದ್ದಾರೆ.
ಆರೋಪಿಗಳಿಗೆ ಸಂವಿಧಾನದ ಬಗ್ಗೆ ನಿಕೃಷ್ಟ ಗೌರವ ಹೊಂದಿದ್ದು ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟಿಸುವ ವೇಳೆ ಅವರು ಕೋಲು, ಆಸಿಡ್ ಬಾಟಲಿ ಹಾಗೂ ಬಂದೂಕುಗಳನ್ನು ಇರಿಸಿಕೊಂಡಿದ್ದರು ಎಂದು ದೆಹಲಿ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು.
ದೆಹಲಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಾದಾಬ್ ಅಹ್ಮದ್ ಹಾಗೂ ಮೊಹಮ್ಮದ್ ಸಲೀಮ್ ಖಾನ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.
ರಾಜು ಅವರು ಜಾಮೀನು ವಿರೋಧಿಸುವ ವೇಳೆ "ದೆಹಲಿ ಗಲಭೆ ಸಂದರ್ಭದಲ್ಲಿ ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಭಯೋತ್ಪಾದಕ ದಾಳಿ ನಡೆಸಲು ಯೋಜಿಸಲಾಗಿತ್ತು. ದೊಡ್ಡ ಪ್ರಮಾಣದ ಹಿಂಸಾಚಾರ ಉಂಟಾಗಿತ್ತು. ಬಾಂಗ್ಲಾದೇಶ ಅಥವಾ ನೇಪಾಳದಲ್ಲಿ ನಡೆದಂತೆ ಆಡಳಿತ ಬದಲಾವಣೆಯ ಗಲಭೆಯನ್ನು ನಡೆಸುವುದು ಇವರ ವ್ಯವಸ್ಥಿತ ಯೋಜನೆಯಾಗಿತ್ತು" ಎಂದು ದೂರಿದರು.
ಪ್ರಮುಖ ಉದ್ದೇಶ ಆಡಳಿತದ ಬದಲಾವಣೆಯಾಗಿತ್ತು. ಧರಣಿಗೆ ಹೋದವರೆಲ್ಲರೂ ಕೋಲುು, ಆಸಿಡ್ ಬಾಟಲಿ, ಬಂದೂಕುಗಳನ್ನು ಹಿಡಿದಿದ್ದರು. ಇದು 43(ಡಿ)(5) ವ್ಯಾಪ್ತಿಗೆ ಬರುವುದರಿಂದ ಇದು ಜಾಮೀನು ನೀಡುವ ಪ್ರಕರಣವಲ್ಲ ಎಂದು ಅವರು ವಾದಿಸಿದರು.
ಆರೋಪಿಗಳ ವಿರುದ್ಧ ಯುಎಪಿಎ ಅಡಿ ಅಪರಾಧ ಸಾಬೀತಾಗಿದೆ. ಹೀಗಿರುವಾಗ ಅವರಿಗೆ ಜಾಮೀನು ಸಿಗಲು ಸಾಧ್ಯವಿಲ್ಲ. ಯುಎಪಿಎ ಸೆಕ್ಷನ್ 16ರ ಅಡಿಯಲ್ಲಿ ಆರೋಪಪಟ್ಟಿ ತಯಾರಿಸಲಾಗಿದ್ದು ಅದರಂತೆ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಅಸ್ಸಾಂ ರಾಜ್ಯವನ್ನು ದೇಶದಿಂದ ಪ್ರತ್ಯೇಕ ಮಾಡುವುದು ಇವರ ಸಂಚಾಗಿತ್ತು ಎಂದು ವಾದಿಸಿದರು.
ಮೀರನ್ ಹೈದರ‍್ ₹2.86 ಲಕ್ಷ ಹಣ ನೀಡಿ ಗಲಭೆಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಉಮರ್ ಖಾಲಿದ್ ಹಿಂಸೆಗೆ ಪ್ರಚೋದಿಸಿದ ಇತಿಹಾಸವನ್ನೇ ಹೊಂದಿದ್ದಾರೆ. ಅವರ ಮನೋಭಾವವೇ ಭಾರತ ತುಂಡಾಗಲಿ ಎಂಬುದು. ಚಕ್ಕಾ ಜಾಮ್ ಕಲ್ಪನೆ ಕೂಡ ಇವರದ್ದೇ. ಚಕ್ಕಾ ಜಾಮ್‌ಗೂ ರಸ್ತೆ ತಡೆಗೂ ವ್ಯತ್ಯಾಸವಿದೆ. ಚಕ್ಕಾ ಜಾಮ್ ಎಂಬುದು ಅಗತ್ಯ ಸೇವೆಗಳನ್ನು ಹಿಂಸಾಚಾರದ ಮೂಲಕ ಸಂಪೂರ್ಣವಾಗಿ ನಿಲ್ಲಿಸುವುದಾಗಿದೆ ಎಂದು ರಾಜು ಹೇಳಿದರು.
ರಾಜು ಅವರ ವಾದ ಇಂದಿಗೆ ಪೂರ್ಣಗೊಂಡಿದ್ದು ಆರೋಪಿಗಳ ಪರ ವಕೀಲರು ನವೆಂಬರ್ 24, ಸೋಮವಾರದಿಂದ ವಾದ ಮಂಡಿಸಲಿದ್ದಾರೆ.