

ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಕಾನೂನು ಸಚಿವ ಮತ್ತು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿಯ ಸೆಷನ್ಸ್ ನ್ಯಾಯಾಲಯ ಸೋಮವಾರ ರದ್ದುಗೊಳಿಸಿದ್ದು ಆ ಮೂಲಕ ಮಿಶ್ರಾ ನಿರಾಳರಾಗಿದ್ದಾರೆ.
ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ವೈಭವ್ ಚೌರಾಸಿಯಾ ಅವರು ಏಪ್ರಿಲ್ 1ರಂದು ನೀಡಿದ್ದ ಆದೇಶವನ್ನು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ದಿಗ್ವಿನಯ್ ಸಿಂಗ್ ರದ್ದುಗೊಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಲಯ ನೀಡಿದ್ದ ಆದೇಶ ಮೂಲಭೂತವಾಗಿ ದೋಷಪೂರಿತವಾಗಿದ್ದು ಕಾನೂನುಬಾಹಿರ ಮತ್ತು ಅನುಚಿತ ಎಂದು ನ್ಯಾ. ಸಿಂಗ್ ಅವರು ತೀರ್ಪು ನೀಡಿದ್ದಾರೆ.
ಯಮುನಾ ವಿಹಾರ್ ನಿವಾಸಿ ಮೊಹಮ್ಮದ್ ಇಲ್ಯಾಸ್ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಗಲಭೆಯ ಸಮಯದಲ್ಲಿ ಈಶಾನ್ಯ ದೆಹಲಿಯ ಕರ್ದಂಪುರಿಯಲ್ಲಿ ಮಿಶ್ರಾ ಮತ್ತಿತರರು ರಸ್ತೆ ತಡೆದು ಮಾರಾಟಗಾರರ ತಳ್ಳುಗಾಡಿಗಳನ್ನು ನಾಶಪಡಿಸುತ್ತಿರುವುದನ್ನು ತಾನು ನೋಡಿದ್ದೇನೆ. ಮಿಶ್ರಾ ಪಕ್ಕದಲ್ಲಿಯೇ ಆಗಿನ ದೆಹಲಿ ಪೊಲೀಸ್ ಡಿಸಿಪಿ ನಿಂತಿದ್ದರು ಎಂದು ಇಲ್ಯಾಸ್ ಆರೋಪಿಸಿದ್ದರು.
ದೆಹಲಿ ಪೊಲೀಸರ ವಾದ ಆಧಾರವಿಲ್ಲದ ಊಹೆ ಮತ್ತು ಅರ್ಧಸತ್ಯಗಳನ್ನು ಆಧರಿಸಿದೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಚೌರಾಸಿಯಾ ತಮ್ಮ ಹಿಂದಿನ ಆದೇಶದಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಪ್ರತಿಭಟನೆಗೆ ಮಹಿಳೆಯರನ್ನು ಅಸ್ತ್ರವನ್ನಾಗಿ ಬಳಸಲಾಗಿತ್ತು ಎಂಬ ವಾದವನ್ನೂ ಅವರು ಒಪ್ಪಿರಲಿಲ್ಲ.
ಮಿಶ್ರಾ ಮತ್ತು ದೆಹಲಿ ಪೊಲೀಸರು ಇಬ್ಬರೂ ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಏಪ್ರಿಲ್ 9 ರಂದು, ಸೆಷನ್ಸ್ ನ್ಯಾಯಾಲಯ ಮಿಶ್ರಾ ವಿರುದ್ಧ ಹೆಚ್ಚಿನ ತನಿಖೆಗೆ ನೀಡಲಾಗಿದ್ದ ಆದೇಶವನ್ನು ತಡೆಹಿಡಿದಿತ್ತು. ಇಂದು ಅದೇ ನ್ಯಾಯಾಲಯ ಆದೇಶವನ್ನು ಸಂಪೂರ್ಣ ರದ್ದುಗೊಳಿಸಿದೆ.
ಗಲಭೆಯ ಹಿಂದಿನ ಪಿತೂರಿಯ ಬಗ್ಗೆ ದೆಹಲಿ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದು ಕಡ್‌ಕಡ್‌ಡೂಮ ನ್ಯಾಯಾಲಯದಲ್ಲಿ ಆ ಪ್ರಕರಣ ಬಾಕಿ ಇರುವುದರಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. ಮಿಶ್ರಾ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ಆದೇಶಿಸಬಹುದಿತ್ತು ಎಂದು ಅದು ಹೇಳಿದೆ.