ಮುಸ್ಲಿಂ ಆರಾಧನಾ ಸ್ಥಳ ಕೂಡ ಇರುವ ಮಧುರೈ ಸಮೀಪದ ತಿರುಪರನ್‌ಕುಂಡ್ರಂ ಬೆಟ್ಟದ ಅರುಳ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗುವ ವಿಚಾರದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಒಪ್ಪಿಗೆಯನ್ನು ಮುಂಚಿತವಾಗಿ ಪಡೆಯಬೇಕು ಎಂದು ಮದ್ರಾಸ್ ಹೈಕೋರ್ಟ್ ಜನವರಿ 6ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪ್ರಕರಣದ ಮೂಲ ಅರ್ಜಿದಾರರಾದ ರಾಮ ರವಿಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ [ರಾಮ ರವಿಕುಮಾರ್ ಮತ್ತು ಅರುಳ್ಮಿಗು ಸುಬ್ರಮಣಿಯನ್ ಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ನಡುವಣ ಪ್ರಕರಣ]
ವಕೀಲ ಜಿ ಬಾಲಾಜಿ ಮೂಲಕ ಸಲ್ಲಿಸಲಾದ ಮೇಲ್ಮನವಿಯಲ್ಲಿ, ದೇವಸ್ಥಾನಕ್ಕೆ ಬೆಟ್ಟದ ಮಾಲೀಕತ್ವ ಮತ್ತು ನಿಯಂತ್ರಣವಿದೆ ಎಂದು ಗುರುತಿಸಿದ ಸಿವಿಲ್ ನ್ಯಾಯಾಲಯದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ದುರ್ಬಲಗೊಳಿಸಿದ್ದು, ಅವಶ್ಯಕ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಅತಿಕ್ರಮಣ ನಡೆಸಿದೆ ಎಂದು ರವಿಕುಮಾರ್ ದೂರಿದ್ದಾರೆ.
ವಿವಾದಿತ ಸ್ಥಳದಲ್ಲಿ ದೀಪ ಬೆಳಗಿಸುವ ಹಕ್ಕನ್ನು ಹೈಕೋರ್ಟ್ ಮನ್ನಿಸಿದ್ದರೂ ಅದನ್ನು ಆಡಳಿತಾತ್ಮಕ ವಿವೇಚನೆಯ ವ್ಯಾಪ್ತಿಗೆ ತರುವ ಮೂಲಕ ಷರತ್ತುಬದ್ಧಗೊಳಿಸಿದೆ ಎಂದು ಮೇಲ್ಮನವಿ ಆಕ್ಷೇಪಿಸಿದೆ.
2025ರ ಡಿಸೆಂಬರ್ 1ರಂದು, ಹೈಕೋರ್ಟ್ ನ್ಯಾ. ಜಿ ಆರ್ ಸ್ವಾಮಿನಾಥನ್ ಅವರಿದ್ದ ಏಕಸದಸ್ಯ ಪೀಠ, ದೀಪಸ್ತಂಭ ಇರುವ ಸ್ಥಳ ದೇವಸ್ಥಾನದ ಭೂಮಿಯಲ್ಲಿದ್ದು ಸಿಕಂದರ್ ಬಾದುಷಾ ದರ್ಗಾದ ಗುರುತಿಸಲಾದ ಗಡಿಯ ಹೊರಗಿದೆ ಎಂದು ತೀರ್ಪು ನೀಡಿತ್ತು. ಹೀಗಾಗಿ ಅಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿಸಲಾಗಿತ್ತು.
ಆದರೆ 2026ರ ಜನವರಿ 6ರ ತೀರ್ಪಿನಲ್ಲಿ, ವಿಭಾಗೀಯ ಪೀಠವು ಆ ಧಾರ್ಮಿಕ ಆಚರಣೆಯನ್ನು ತಾತ್ವಿಕವಾಗಿ ಒಪ್ಪಿದರೂ ಕೆಲ ಷರತ್ತುಗಳನ್ನು ವಿಧಿಸಿತ್ತು. ದೀಪ ಬೆಳಗಿಸುವ ಮುನ್ನ ಎಎಸ್‌ಐ ಮತ್ತು ಪೊಲೀಸ್ ಇಲಾಖೆಯ ಸಲಹೆ ಪಡೆಯಬೇಕು; ಸಂರಕ್ಷಿತ ಸ್ಮಾರಕವೆಂದು ಪರಿಗಣಿಸಲಾದ ಬೆಟ್ಟದ ರಕ್ಷಣೆಗೆ ಎಎಸ್‌ಐ ಷರತ್ತುಗಳನ್ನು ವಿಧಿಸಬಹುದು; ಭಾಗವಹಿಸುವ ಭಕ್ತರ ಸಂಖ್ಯೆಯನ್ನು ನಿಯಂತ್ರಿಸಬಹುದು ಎಂಬುದು ಆ ಷರತ್ತುಗಳಾಗಿದ್ದವು. ಇದನ್ನು ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ದೀಪವನ್ನು ಎಲ್ಲಿ ಮತ್ತು ಯಾರು ಬೆಳಗಿಸಬೇಕು ಎಂಬ ನಿರ್ಧಾರಗಳು ದೇವಸ್ಥಾನದ ಆಂತರಿಕ ಧಾರ್ಮಿಕ ನಿರ್ವಹಣೆ ಮತ್ತು ಧಾರ್ಮಿಕ ಸಮುದಾಯದ ಸ್ವಾಯತ್ತತೆಯ ಭಾಗವಾಗಿದ್ದು, ಸಂವಿಧಾನದ ಕಲಂ 26 ಅಡಿಯಲ್ಲಿ ರಕ್ಷಿತವಾಗಿವೆ. ಸ್ಪಷ್ಟವಾದ ಶಾಸನಾತ್ಮಕ ಆದೇಶವಿಲ್ಲದೆ ಅವುಗಳನ್ನು ಕಾನೂನುಬದ್ಧ ಪ್ರಾಧಿಕಾರಗಳ ಅನುಮತಿಗೆ ಒಳಪಡಿಸುವಂತಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಹೈಕೋರ್ಟ್ ಷರತ್ತು ವಿಧಿಸುವ ಮೂಲಕ ಸಾಕಷ್ಟು ಹಸ್ತಕ್ಷೇಪ ಮಾಡಿದ್ದು ಇದರಿಂದಾಗಿ ಸಾಂವಿಧಾನಿಕವಾಗಿ ಸಂರಕ್ಷಿತ ಧಾರ್ಮಿಕ ಆಚರಣೆಯನ್ನು ಅನುಮತಿ ಆಧಾರಿತ ಚಟುವಟಿಕೆಯಾಗಿ ಗೌಣಗೊಳಿಸಲಾಗಿದೆ ಎಂದು ಅರ್ಜಿ ಹೇಳಿದೆ.
ತಿರುಪರಂಕುಂಡ್ರಂ ಬೆಟ್ಟದ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸ್ಥಳದಲ್ಲಿ ಎಎಸ್‌ಐಗೆ ಹೆಚ್ಚಿನ ಪಾತ್ರ ನೀಡಬೇಕೆಂದು ಕೋರುವ ಮತ್ತೊಂದು ಅರ್ಜಿಯೂ ಸೇರಿದಂತೆ, ಸುಪ್ರೀಂ ಕೋರ್ಟ್‌ನಲ್ಲಿ ಸಮಾನಾಂತರ ವಿಚಾರಣೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಮೇಲ್ಮನವಿ ಸಲ್ಲಿಸಲಾಗಿದೆ.