

ಮುಸ್ಲಿಂ ಆರಾಧನಾ ಸ್ಥಳ ಕೂಡ ಇರುವ ಮಧುರೈ ಸಮೀಪದ ತಿರುಪರನ್‌ಕುಂಡ್ರಂ ಬೆಟ್ಟದ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಲು ಭಕ್ತರಿಗೆ ಅವಕಾಶ ಕಲ್ಪಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ಎತ್ತಿಹಿಡಿದಿದೆ.
ಅಶಾಂತಿಗೆ ರಾಜ್ಯ ಸರ್ಕಾರವೇ ಪ್ರಾಯೋಜಕತ್ವ ನೀಡದ ಹೊರತು, ದೇವಾಲಯದ ಆಡಳಿತ ಮಂಡಳಿ ದೇವಾಲಯದ ಸ್ಥಳದಲ್ಲಿ ದೀಪ ಹಚ್ಚುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ಸರ್ಕಾರ ವ್ಯಕ್ತಪಡಿಸುವ ಭಯ ಹಾಸ್ಯಾಸ್ಪದ ಮತ್ತು ನಂಬಲು ಅಸಾಧ್ಯವಾದುದು ಎಂದು ನ್ಯಾಯಮೂರ್ತಿಗಳಾದ ಜಿ ಜಯಚಂದ್ರನ್ ಮತ್ತು ಕೆ ಕೆ ರಾಮಕೃಷ್ಣನ್ ಅವರಿದ್ದ ಪೀಠ ಹೇಳಿದೆ.
ಕಲ್ಲಿನ ಸ್ತಂಭ ದರ್ಗಾಕ್ಕೆ ಸೇರಿದ್ದು ಎಂಬ ಸರ್ಕಾರದ ತರ್ಕ ಕುಚೋದ್ಯದ್ದು ಎಂದು ನ್ಯಾಯಾಲಯ ಟೀಕಿಸಿತು. ಎಲ್ಲಾ ಹಿಂದೂ ಭಕ್ತರಿಗೆ ಕಾಣುವಂತೆ ಎತ್ತರದ ಸ್ಥಳದಲ್ಲಿ ದೀಪ ಹಚ್ಚುವ ಪದ್ಧತಿ ಇದೆ ಎಂದು ನ್ಯಾಯಾಲಯ ಹೇಳಿದೆ. ಅಂತಹ ಪದ್ಧತಿ ಜಾರಿಯಲ್ಲಿರುವಾಗ, ದೀಪ ಹಚ್ಚುವಂತೆ ಭಕ್ತರು ಮಾಡುವ ಮನವಿಯನ್ನು ದೇವಾಲಯದ ಆಡಳಿತ ಮಂಡಳಿ ಪಾಲಿಸದಿರಲು ಯಾವುದೇ ಸಮಂಜಸವಾದ ಕಾರಣ ಇರದು ಎಂದು ನ್ಯಾಯಾಲಯ ಹೇಳಿದೆ.
ದೀಪ ಬೆಳಗಿಸಿದರೆ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗಬಹುದು ಎಂಬ ರಾಜ್ಯ ಸರ್ಕಾರದ ಆತಂಕ ಅನುಕೂಲಕ್ಕಾಗಿ ಸೃಷ್ಟಿಸಲಾದ ಕಪೋಲ ಕಲ್ಪಿತ ಭೂತವಷ್ಟೇ ಆಗಿದ್ದು, ಅದರಿಂದ ಸಮುದಾಯಗಳ ನಡುವಿನ ಅವಿಶ್ವಾಸ ಹೆಚ್ಚಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ದೀಪತೂಣ್ ಹೆಸರಿನ ದೀಪಸ್ತಂಭದ ಮೇಲೆ ದೇಗುಲ ಆಡಳಿತ ಮಂಡಳಿ ದೀಪ ಬೆಳಗಿಸಬೇಕು ಎಂದು ತೀರ್ಮಾನಿಸಿತ್ತು. ಹೀಗಾಗಿ ದೀಪಸ್ತಂಭ ದೀಪತೂಣ್ ಹೌದೇ ಎಂಬ ಸರ್ಕಾರದ ಆಕ್ಷೇಪಣೆ ಒಪ್ಪುವಂತದ್ದಲ್ಲ ಎಂದು ಅದು ಹೇಳಿದೆ.
ಬೆಟ್ಟದಲ್ಲಿರುವ ಸ್ಮಾರಕವನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಷರತ್ತುಗಳನ್ನು ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ದೇವಾಲಯದ ಆಡಳಿತ ಮಂಡಳಿ ದೀಪ ಬೆಳಗಿಸುವ ವೇಳೆ ಸಾರ್ವಜನಿಕರಿಗೆ ಅವಕಾಶ ನೀಡಬಾರದು ಎಂತಲೂ ನ್ಯಾಯಾಲಯ ನಿರ್ದೇಶಿಸಿದೆ. ಅಂತೆಯೇ ಕಾರ್ಯಕ್ರಮ ಮೇಲ್ವಿಚಾರಣೆ, ಸಂಯೋಜನೆಯ ಹೊಣೆಯನ್ನು ಜಿಲ್ಲಾಧಿಕಾರಿಗೆ ಅದು ವಹಿಸಿದೆ.
ತಾನು ವಿವರವಾದ ತೀರ್ಪಿನಲ್ಲಿ ನೀಡಲು ಹೊರಟಿರುವ ಮಾರ್ಗಸೂಚಿಗಳು ಬೆಟ್ಟದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಪರಸ್ಪರ ಅಡಚಣೆ ಮಾಡದೇ ತಮ್ಮ ಹಬ್ಬಗಳನ್ನು ಆಚರಿಸಲು ಸಹಕಾರಿಯಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.
"ಎರಡೂ ಕಡೆಯವರ ಶಾಂತಿಯುತ ಸಹಬಾಳ್ವೆಯನ್ನುಬಯಸುತ್ತೇವೆ. ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಏಕತೆ ಇದ್ದರೆ ಅದು ಸಾಧ್ಯವಾಗಲಿದೆ. ಆದೇಶವನ್ನು ಪಾಲಿಸಿ... ಸಂವಿಧಾನ, ನೈಸರ್ಗಿಕ ಸಂಪನ್ಮೂಲಗಳು ಎಲ್ಲರಿಗೂ ಸಮಾನ ಎಂದು ನಾವು ಹೇಳುತ್ತಿದ್ದೇವೆ. ಪ್ರತಿಯೊಬ್ಬರಿಗೂ ಇನ್ನೊಬ್ಬರಿಗೆ ತೊಂದರೆ ನೀಡದಂತಹ ಧಾರ್ಮಿಕ ಸ್ವಾತಂತ್ರ್ಯ ಇರಬೇಕು " ಎಂದು ತೀರ್ಪು ಪ್ರಕಟಣೆ ವೇಳೆ ನ್ಯಾಯಾಲಯ ತಿಳಿಸಿದೆ. ವಿವರವಾದ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.
ದೀಪಸ್ತಂಭದಲ್ಲಿ ದೀಪ ಬೆಳಗುವ ಹಕ್ಕು ತಮ್ಮದು ಎಂದು ಹಿಂದೂಗಳು ಒತ್ತಾಯಿಸಿದ್ದರೆ ಸಮೀಪದ ಸಿಕಂದರ್ ಬಾದುಷಾ ದರ್ಗಾ ನಿರ್ವಹಣಾ ಸಮಿತಿ ಮತ್ತು ಸರ್ಕಾರಿ ಅಧಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ನ್ಯಾ. ಜಿ ಆರ್ ಸ್ವಾಮಿನಾಥನ್ ಅವರಿದ್ದ ಏಕಸದಸ್ಯ ಪೀಠ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸುವ ಸಂಪ್ರದಾಯಕ್ಕೆ ಮತ್ತೆ ಚಾಲನೆ ನೀಡಬೇಕು ಎಂದು ತೀರ್ಪು ನೀಡಿತ್ತು.
ಈ ಬೆಳವಣಿಗೆ ಸಂಸತ್ ಅಧಿವೇಶನದ ವೇಳೆಯೂ ಪ್ರತಿಧ್ವನಿಸಿತ್ತು. ಪಕ್ಷಪಾತದ ಮತ್ತು ಜಾತ್ಯತೀತ ವಿರೋಧಿ ತೀರ್ಪುಗಳನ್ನು ನೀಡುತ್ತಿರುವ ಮದ್ರಾಸ್ ಹೈಕೋರ್ಟ್ ಮಧುರೈ ಪೀಠದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರನ್ನು ವಾಗ್ದಂಡನೆಗೆ (ಮಹಾಭಿಯೋಗ) ಒಳಪಡಿಸಬೇಕು ಎಂದು ಡಿಎಂಕೆ ಮತ್ತು ವಿರೋಧ ಪಕ್ಷದ ಸಂಸದರು ಗೊತ್ತುವಳಿ ಮಂಡಿಸಿದ್ದರು.