ಮುಸ್ಲಿಂ ಆರಾಧನಾ ಸ್ಥಳ ಕೂಡ ಇರುವ ಮಧುರೈ ಸಮೀಪದ ತಿರುಪರನ್‌ಕುಂಡ್ರಂ ಬೆಟ್ಟದ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಲು ಭಕ್ತರಿಗೆ ಅವಕಾಶ ಕಲ್ಪಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಮದ್ರಾಸ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ
ಸರ್ಕಾರಿ ಅಧಿಕಾರಿಗಳನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಮತ್ತು ಪ್ರತಿವಾದಿಗಳ ವಾದ ಆಲಿಸಿದ ವಿಭಾಗೀಯ ಪೀಠ ಇಂದು ಮಧ್ಯಾಹ್ನ ತೀರ್ಪು ಕಾಯ್ದಿರಿಸಿತು.
ದೀಪಸ್ತಂಭದಲ್ಲಿ ದೀಪ ಬೆಳಗುವ ಹಕ್ಕು ತಮ್ಮದು ಎಂದು ಹಿಂದೂಗಳು ಒತ್ತಾಯಿಸಿದ್ದರೆ ಸಮೀಪದ ಸಿಕಂದರ್ ಬಾದುಷಾ ದರ್ಗಾ ನಿರ್ವಹಣಾ ಸಮಿತಿ ಮತ್ತು ಸರ್ಕಾರಿ ಅಧಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ನ್ಯಾ. ಜಿ ಆರ್ ಸ್ವಾಮಿನಾಥನ್ ಅವರಿದ್ದ ಏಕಸದಸ್ಯ ಪೀಠ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸುವ ಸಂಪ್ರದಾಯಕ್ಕೆ ಮತ್ತೆ ಚಾಲನೆ ನೀಡಬೇಕು ಎಂದು ತೀರ್ಪು ನೀಡಿತ್ತು.
ಸರ್ಕಾರದ ಪರ ವಾದ ಮಂಡಿಸಿದ ರಾಮನ್ ಅವರು ಸ್ತಂಭದ ಮೂಲದ ಬಗ್ಗೆ ಸ್ಪಷ್ಟ ಸಾಕ್ಷ್ಯ ಇಲ್ಲ. ಕಾರ್ತಿಕ ದೀಪೋತ್ಸವದ ಅಂಗವಾಗಿ ಅಲ್ಲಿ ದೀಪ ಬೆಳಗಿಸುವುದು ಸಾಬೀತಾದ ಪರಂಪರೆಯಲ್ಲ. ಆಚರಣೆಗೆ ಮರುಚಾಲನೆ ನೀಡುವ ಅಧಿಕಾರ ನ್ಯಾ. ಸ್ವಾಮಿನಾಥನ್ ಅವರಿದ್ದ ಏಕಸದಸ್ಯ ಪೀಠಕ್ಕೆ ಇಲ್ಲ. ವಿವಾದವನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆಯ ಸೆಕ್ಷನ್ 63ರ ಅಡಿಯಷ್ಟೇ ತನಿಖೆ ನಡೆಸಬಹುದು ಎಂದಿತು.
ಹಿಂದೂ ಭಕ್ತರ ಪರ ವಾದ ಮಂಡಿಸಿದ ವಿವಿಧ ವಕೀಲರು ವಿರೋಧ ವ್ಯಕ್ತಪಡಿಸಿದರು. ದೀಪಸ್ತಂಭದಲ್ಲಿ ದೀಪ ಬೆಳಗಿಸಿದರೆ ದರ್ಗಾದ ಹಕ್ಕುಗಳಿಗೆ ಧಕ್ಕೆಯಾಗದು ಎಂದರು. ಈ ಹಿಂದೆ ನ್ಯಾ. ಸ್ವಾಮಿನಾಥನ್ ಅವರು ದೀಪ ಬೆಳಗಿಸಲು ಅನುಮತಿ ನೀಡಿದ್ದನ್ನು ಪ್ರಸ್ತಾಪಿಸಿದ ಅವರು ಇದನ್ನು ಮುಜರಾಯಿ ಇಲಾಖೆ ಅಧಿಕಾರಿಗಳೆದುರು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದರು.
ವಕ್ಫ್ ಮಂಡಳಿ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದನ್ನು ಸರ್ಕಾರ ಅನುಮೋದಿಸಿದರೂ ಹಿಂದೂ ಭಕ್ತರು ವಿರೋಧ ವ್ಯಕ್ತಪಡಿಸಿದರು. ಇಂತಹ ಕ್ರಮಗಳು ತಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದರು. ವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು.