

ಪಕ್ಷಪಾತದ ಮತ್ತು ಜಾತ್ಯತೀತ ವಿರೋಧಿ ತೀರ್ಪುಗಳನ್ನು ನೀಡುತ್ತಿರುವ ಮದ್ರಾಸ್ ಹೈಕೋರ್ಟ್ ಮಧುರೈ ಪೀಠದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರನ್ನು ವಾಗ್ದಂಡನೆಗೆ (ಮಹಾಭಿಯೋಗ) ಒಳಪಡಿಸಬೇಕು ಎಂದು ಡಿಎಂಕೆ ಮತ್ತು ವಿರೋಧ ಪಕ್ಷದ ಸಂಸದರು ಒತ್ತಾಯಿಸಿದ್ದಾರೆ.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು "ನಿರ್ದಿಷ್ಟ ರಾಜಕೀಯ ಸಿದ್ಧಾಂತ"ದ ಆಧಾರದ ಮೇಲೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ಪ್ರಕರಣಗಳನ್ನು ನಿರ್ಧರಿಸುತ್ತಿದ್ದಾರೆ ಎಂದು ಮಹಾಭಿಯೋಗ ಗೊತ್ತುವಳಿಯಲ್ಲಿ ಆರೋಪಿಸಲಾಗಿದೆ.
ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದಂತೆ ನ್ಯಾ. ಸ್ವಾಮಿನಾಥನ್ ಅವರ ನಡೆ ಪ್ರಶ್ನಿಸಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ಉಳಿದ ವಿರೋಧ ಪಕ್ಷಗಳ 107 ಸಂಸದರು ಸಂಸತ್ತಿನಲ್ಲಿ ಗೊತ್ತುವಳಿ ಮಂಡಿಸಿದ್ದಾರೆ .
ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಹಿರಿಯ ವಕೀಲ ಎಂ ಶ್ರೀಚರಣ್ ರಂಗನಾಥನ್ ಮತ್ತು ನಿರ್ದಿಷ್ಟ ಸಮುದಾಯವೊಂದರ ಇತರ ವಕೀಲರಿಗೆ ಅನಗತ್ಯ ಪಕ್ಷಪಾತ ತೋರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ .
ಡಿಎಂಕೆ ನಾಯಕರಾದ ಟಿ ಆರ್ ಬಾಲು, ಎ ರಾಜಾ, ಕನಿಮೋಳಿ, ದಯಾನಿಧಿ ಮಾರನ್, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ, ಗೌರವ್ ಗೊಗೊಯ್, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಹಾಗೂ ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಗೊತ್ತುವಳಿಗೆ ಸಹಿ ಹಾಕಿದ್ದಾರೆ.
ಮಧುರೈ ಸಮೀಪದ ತಿರುಪರನ್ ಕುಂಡ್ರಂ ಬೆಟ್ಟದ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಲು ನ್ಯಾ, ಜಿ. ಆರ್ ಸ್ವಾಮಿನಾಥನ್ ಆದೇಶಿಸಿದ್ದರು. ನಂತರ ತಮ್ಮ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಮತ್ತೊಂದು ಆದೇಶ ಹೊರಡಿಸಿದ್ದ ಅವರು ದೀಪ ಬೆಳಗಿಸಲು ತೆರಳಲಿರುವ ಭಕ್ತರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಭದ್ರತೆ ನೀಡಬೇಕೆಂದು ಸೂಚಿಸಿದ್ದರು. ಆದರೆ ಅದೇ ಬೆಟ್ಟದಲ್ಲಿ ಬಾದ್‌ಶಾ ದರ್ಗಾ ಇದ್ದು, ಹೈಕೋರ್ಟ್ ಆದೇಶದಿಂದ ಕೋಮು ಸೌಹಾರ್ದತೆಗೆ ಧಕ್ಕೆ ಒದಗುತ್ತದೆ ಎಂದು ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಹೇಳಿತ್ತು. ಈ ವಿವಾದ ಪ್ರಸ್ತುತ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.
ನ್ಯಾ. ಸ್ವಾಮಿನಾಥನ್ ಅವರ ಆದೇಶ ಪಾಲಿಸದಿರುವ ಬಗ್ಗೆ ಭಕ್ತರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಹೈಕೋರ್ಟ್‌ನಲ್ಲಿ ಬಾಕಿ ಇದೆ. ನ್ಯಾ. ಸ್ವಾಮಿನಾಥನ್ ಅವರು ಡಿಸೆಂಬರ್ 17 ರಂದು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.