Madras High Court, Madurai Bench  HC website
ಸುದ್ದಿಗಳು

ತಿರುಪರನ್ ಕುಂಡ್ರಂ ವಿವಾದ: ಆದೇಶ ಧಿಕ್ಕರಿಸಿದ ಅಧಿಕಾರಿಗಳಿಗೆ ಸಮನ್ಸ್ ನೀಡಿದ ನ್ಯಾ. ಜಿ ಆರ್ ಸ್ವಾಮಿನಾಥನ್

'ಓ ತಂದೆಯೇ, ಅವರನ್ನು ಕ್ಷಮಿಸಿ, ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ ಎಂದು ಕೈಚೆಲ್ಲಲು ನಾನಿಲ್ಲಿ ಬಂದಿಲ್ಲʼ ಎಂದು ನ್ಯಾ. ಸ್ವಾಮಿನಾಥನ್ ಅಸಮಾಧಾನ ವ್ಯಕ್ತಪಡಿಸಿದರು.

Bar & Bench

ಮಧುರೈ ಸಮೀಪದ ತಿರುಪರನ್ ಕುಂಡ್ರಂ ಬೆಟ್ಟದ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಲು ನೀಡಿದ್ದ ಅನುಮತಿಯನ್ನು ಏಕೆ ಪಾಲಿಸಿಲ್ಲ ಎಂಬ ಕುರಿತು ಉತ್ತರ ನೀಡುವಂತೆ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಇಬ್ಬರು ಹಿರಿಯ ಅಧಿಕಾರಿಗಳಿಗೆ ಮದ್ರಾಸ್‌ ಹೈಕೋರ್ಟ್‌ ಮಧುರೈ ಪೀಠ ಸಮನ್ಸ್‌ ನೀಡಿದೆ [ ರಾಮ ರವಿಕುಮಾರ್ ಮತ್ತು ಕೆಜೆ ಪ್ರವೀಣ್‌ ಕುಮಾರ್‌ ಐಎಎಸ್ ನಡುವಣ ಪ್ರಕರಣ]

ಡಿಸೆಂಬರ್ 17 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರು ನಿನ್ನೆ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದರು.

ಗಮನಾರ್ಹ ಅಂಶವೆಂದರೆ, ಸ್ಥಳೀಯ ಅಧಿಕಾರಿಗಳು ಇಂತಹ ಪ್ರಕರಣಗಳ ಕುರಿತು ಆದೇಶ ಧಿಕ್ಕರಿಸುತ್ತಾರೆ ಎಂದು ನ್ಯಾಯಾಧೀಶರು ಹೇಳಿದರು.

ಈ ಪ್ರಕರಣದಲ್ಲಿ, ಹಿಂದೂ ಭಕ್ತರು ದೀಪ ಬೆಳಗಲು ಅನುಮತಿಸಿ ಡಿಸೆಂಬರ್ 3 ರಂದು ತಾವು ಆದೇಶ ನೀಡಿದ್ದು, ಡಿಸೆಂಬರ್‌ 4 ರಂದು ಅದನ್ನು ವಿಭಾಗಿಯ ಪೀಠವು ಎತ್ತಿಹಿಡಿದಿದ್ದ ನಂತರವೂ ಈ ಆದೇಶವನ್ನು ಪಾಲಿಸದೆ ಪದೇಪದೇ ಉಲ್ಲಂಘಿಸಲಾಗಿದೆ ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಅಸಮಾಧಾನ ವ್ಯಕ್ತಪಡಿಸಿದರು.

Justice GR Swaminathan

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವುದು ಉದ್ದೇಶಪೂರ್ವಕ ಅವಿಧೇಯತೆಯಾಗಿದ್ದರೆ ಮಾತ್ರ ಅದು ನ್ಯಾಯಾಲಯದ ತಿರಸ್ಕಾರವಾಗುತ್ತದೆ ಈ ಕಾರಣಕ್ಕಾಗಿ, ಸಂಬಂಧಪಟ್ಟ ಅಧಿಕಾರಿಗಳು ಏಕೆ ಹಾಗೆ ವರ್ತಿಸಿದರು ಎಂಬುದನ್ನು ವಿವರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಆದರೆ ಬೇರೆ ಜಿಲ್ಲೆಗಳಲ್ಲಿಯೂ ಸಹ ಇದೇ ರೀತಿಯ ನ್ಯಾಯಾಲಯ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದರು. ಅಂತೆಯೇ "ನಾನು ಇಲ್ಲಿ ಕೈ ಚೆಲ್ಲಿ ಅಸಹಾಯಕತೆಯಿಂದ 'ಓ ತಂದೆಯೇ, ಅವರನ್ನು ಕ್ಷಮಿಸು, ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ ಎಂದು ಕೈಚೆಲ್ಲಲು ನಾನಿಲ್ಲಿ ಬಂದಿಲ್ಲ" ಎಂದು ನ್ಯಾ. ಸ್ವಾಮಿನಾಥನ್‌ ಅಸಮಾಧಾನ ವ್ಯಕ್ತಪಡಿಸಿದರು.

ಕನ್ಯಾಕುಮಾರಿಯ ಮೈಲಾಡಮ್ ಪಾರೈ ಹಾಗೂ ದಿಂಡಿಗಲ್‌ನ ಪೆರುಮಾಳ್ಕೋವಿಲ್‌ಪಟ್ಟಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯದವರು ಹಿಂದೂಗಳ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಈ ಪ್ರಕರಣಗಳಲ್ಲಿ ಕೂಡ ತಾನು ನೀಡಿದ್ದ ಆದೇಶದಲ್ಲಿ ಕ್ರಮ ಕೈಗೊಂಡಿಲ್ಲ ಎಂಬುದನ್ನು ಅವರು ಪ್ರಸ್ತಾಪಿಸಿದರು.

ಪ್ರಸ್ತುತ ಪ್ರಕರಣ ಮಧುರೈ ಸಮೀಪದ ತಿರುಪರನ್ ಕುಂಡ್ರಂ ಬೆಟ್ಟದ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗುವುದಕ್ಕೆ ಸಂಬಂಧಿಸಿದ್ದಾಗಿದೆ. ಬೆಟ್ಟದಲ್ಲಿ ಬಾದ್‌ಶಾ ದರ್ಗಾ ಇದ್ದು, ಹೈಕೋರ್ಟ್ ಆದೇಶದಿಂದ ಕೋಮು ಸೌಹಾರ್ದತೆಗೆ ಧಕ್ಕೆ ಒದಗುತ್ತದೆ ಎಂದು ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಹೇಳಿತ್ತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್ ಪ್ರಕರಣ ಕುರಿತಂತೆ ಮಂಡಿಸಿದ ವಿವಿಧ ವಾದಗಳನ್ನು ವಿಚಾರಣೆ ವೇಳೆ ನ್ಯಾ. ಸ್ವಾಮಿನಾಥನ್ ತಿರಸ್ಕರಿಸಿದರು.