ಚುನಾವಣೆ ಸನಿಹದಲ್ಲಿರುವಾಗ ಸರ್ಕಾರಗಳು ಉಚಿತ ಕೊಡುಗೆ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದು ಇಂತಹ ಸೌಲಭ್ಯಗಳಿಗೆ ತಗಲುವ ವೆಚ್ಚವನ್ನು ಕಟ್ಟಕಡೆಗೆ ಭರಿಸುವವರು ತೆರಿಗೆದಾರರೇ ಆಗಿದ್ದಾರೆ ಎಂದು ಸಿಡಿಮಿಡಿಗೊಂಡಿತು. [ತಮಿಳುನಾಡು ವಿದ್ಯುತ್ ವಿತರಣಾ ನಿಗಮ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ವಿದ್ಯುತ್ (ತಿದ್ದುಪಡಿ) ನಿಯಮಗಳು, 2024 ರ ನಿಯಮ 23ನ್ನು ಪ್ರಶ್ನಿಸಿ ತಮಿಳುನಾಡು ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸುವ ವೇಳೆ ಸಿಜೆಐ ಸೂರ್ಯಕಾಂತ್ , ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿ ಎಂ ಪಂಚೋಲಿ ಅವರಿದ್ದ ಪೀಠ ಈ ವಿಚಾರ ಪ್ರಸ್ತಾಪಿಸಿತು.
ಭಾರೀ ಪ್ರಮಾಣದಲ್ಲಿ ಉಚಿತ ಕೊಡುಗೆ ನೀಡುವುದರಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿ ಉಂಟಾಗುತ್ತದೆ.ಸಿಜೆಐ ಸೂರ್ಯ ಕಾಂತ್
ನಿಯಂತ್ರಣವಿಲ್ಲದ ಉಚಿತ ಕೊಡುಗೆಗಳ ವಿತರಣೆಯಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಬಹುದು. ಇದು ಇದಾಗಲೇ ಆದಾಯ ಕೊರತೆಯಲ್ಲಿರುವ ಸರ್ಕಾರಗಳ ಹಣಕಾಸು ವ್ಯವಸ್ಥೆ ಮೇಲೆ ಹೆಚ್ಚುವರಿ ಒತ್ತಡ ತರುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.
ಬಡವರು ಮತ್ತು ಮೂಲಭೂತ ಅಗತ್ಯಗಳನ್ನು ಭರಿಸಲು ಅಸಮರ್ಥರಾದವರಿಗೆ ನೆರವು ನೀಡುವುದು ಸರ್ಕಾರಗಳ ಕರ್ತವ್ಯವಾದರೂ, ಸೌಲಭ್ಯಗಳು ಸೂಕ್ತ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬುದು ಪರಿಶೀಲನೆಗೆ ಒಳಪಡಬೇಕಾದ ವಿಷಯವಾಗಿದೆ ಎಂದು ಅದು ಹೇಳಿತು.
ಸರ್ಕಾರಗಳು ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದರೂ ಉಚಿತ ಕೊಡುಗೆ ನೀಡುತ್ತಿವೆ.ಸುಪ್ರೀಂ ಕೋರ್ಟ್
ಉಚಿತ ವಿದ್ಯುತ್ ಸೇರಿದಂತೆ ಅನಿಯಂತ್ರಿತ ಅನುದಾನಗಳು ಸರ್ಕಾರದ ಮೇಲೆ ಭಾರೀ ಒತ್ತಡ ಉಂಟು ಮಾಡುತ್ತವೆ. ವಿದ್ಯುತ್ ದರ ನಿಗದಿ ಮಾಡಿದ ಬಳಿಕ ಸರ್ಕಾರದ ಹಸ್ತಕ್ಷೇಪ ಸ್ವತಂತ್ರ ನಿಯಂತ್ರಣ ಸಂಸ್ಥೆಗಳ ಪಾತ್ರವನ್ನು ದುರ್ಬಲಗೊಳಿಸಬಹುದು ಎಂದು ಅದು ಹೇಳಿತು.
ಎಲ್ಲಾ ರಾಜಕೀಯ ಪಕ್ಷಗಳು, ಸಮಾಜಶಾಸ್ತ್ರಜ್ಞರು ಉಚಿತ ಕೊಡುಗೆ ಕುರಿತಾದ ತಮ್ಮ ಆಲೋಚನೆಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕು. ಇದು ಎಷ್ಟು ಕಾಲ ಮುಂದುವರೆಯಲು ಸಾಧ್ಯ?ಸುಪ್ರೀಂ ಕೋರ್ಟ್
ಯಾವುದೇ ಕಲ್ಯಾಣ ಯೋಜನೆ ಜಾರಿಗೆ ತರುವಾಗ, ಅದನ್ನು ಬಜೆಟ್‌ನಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಿ ನ್ಯಾಯೋಚಿತವಾಗಿ ಸಮರ್ಥಿಸಿಕೊಳ್ಳಬೇಕು ಎಂದು ಕಿವಿಹಿಂಡಿದ ನ್ಯಾಯಾಲಯ ಉಚಿತ ಆಹಾರ, ಸೈಕಲ್, ವಿದ್ಯುತ್, ನಗದು ವರ್ಗಾವಣೆ ಮುಂತಾದ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತಂದರೆ ಅಭಿವೃದ್ಧಿ ಮತ್ತು ಮೂಲಸೌಕರ್ಯ ವೆಚ್ಚಕ್ಕೆ ಕಡಿಮೆ ಅವಕಾಶ ಉಳಿಯಬಹುದು ಎಂದಿತು.
ಚುನಾವಣೆ ಹೊಸ್ತಿಲಲ್ಲಿಯೇ ಯೋಜನೆಗಳನ್ನು ಘೋಷಿಸುತ್ತಿರುವ ಬಗ್ಗೆ ಪ್ರಶ್ನೆ ಕೇಳಿದ ನ್ಯಾಯಾಲಯ ರಾಜಕೀಯ ಪಕ್ಷಗಳು ತಮ್ಮ ಆಲೋಚನೆಗಳನ್ನು ಪರಾಮರ್ಶಿಸಿಕೊಳ್ಳಬೇಕು ಎಂದಿತು.