Madras High Court 
ಸುದ್ದಿಗಳು

ಆಕ್ಷೇಪಾರ್ಹ ಭಾಷೆ ಬಳಕೆ: ಎರಡು ವಾರ ಸಾಮಾಜಿಕ ಮಾಧ್ಯಮ ಬಳಸದಂತೆ ದೇವಸ್ಥಾನ ಕಾರ್ಯಕರ್ತನಿಗೆ ಮದ್ರಾಸ್ ಹೈಕೋರ್ಟ್ ತಾಕೀತು

ಸನಾತನ ಧರ್ಮದ ರಕ್ಷಕರೆಂದು ಹೇಳಿಕೊಳ್ಳುವವರು ಅಸಹ್ಯಕರ ಭಾಷೆ ಬಳಸದಂತೆ ಎಚ್ಚರ ವಹಿಸಬೇಕು ಎಂದು ನ್ಯಾಯಮೂರ್ತಿಗಳಾದ ಜೆ ನಿಶಾ ಬಾನು ಮತ್ತು ಎನ್ ಮಾಲಾ ಅವರಿದ್ದ ಪೀಠ ಹೇಳಿದೆ.

Bar & Bench

ಕೈಗಾರಿಕೋದ್ಯಮಿ ವಿರುದ್ಧ "ಅಸಭ್ಯ ಪದ" ಬಳಸಿದ್ದಕ್ಕಾಗಿ ದೇವಸ್ಥಾನ ಕಾರ್ಯಕರ್ತನಿಗೆ  ₹ 2,000 ದಂಡ ವಿಧಿಸಿರುವ ಮದ್ರಾಸ್‌ ಹೈಕೋರ್ಟ್‌ ಆತ ಎರಡು ವಾರ ಸಾಮಾಜಿಕ ಮಾಧ್ಯಮ  ಬಳಸದಂತೆ ತಾಕೀತು ಮಾಡಿದೆ.

"ಸನಾತನ ಧರ್ಮದ ರಕ್ಷಕರು" ಎಂದು ಹೇಳಿಕೊಳ್ಳುವವರು ಅಸಹ್ಯಕರ ಭಾಷೆಯನ್ನು ಬಳಸದಂತೆ ಎಚ್ಚರದಿಂದಿರಬೇಕು ಎಂದು ನ್ಯಾಯಮೂರ್ತಿಗಳಾದ ಜೆ ನಿಶಾ ಬಾನು ಮತ್ತು ಎನ್ ಮಾಲಾ ಅವರಿದ್ದ ಪೀಠ ಹೇಳಿದೆ.

"ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಭ್ಯತೆ ಮತ್ತು ಘನತೆ ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತಾರೆ ಎಂಬ ಆಶಯದೊಂದಿಗೆ ಕನಿಷ್ಠ ಎರಡು ವಾರಗಳವರೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಪ್ರತಿವಾದಿ (ರಂಗರಾಜನ್‌ ನರಸಿಂಹನ್‌) ದೂರ ಇರುವಂತೆ ಶಿಫಾರಸು ಮಾಡುತ್ತೇವೆ" ಎಂದು ಅದು ಹೇಳಿದೆ.

ಕಳೆದ ವರ್ಷ ನ್ಯಾಯಾಲಯವು ನಿರ್ದಿಷ್ಟ ತಡೆಯಾಜ್ಞೆ ನೀಡಿದ್ದರೂ ಪ್ರತಿವಾದಿ ರಂಗರಾಜನ್ ನರಸಿಂಹನ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆನೀಡುವುದನ್ನು ಮುಂದುವರೆಸಿದ್ದರು ಎಂದು ಕೈಗಾರಿಕೋದ್ಯಮಿ ವೇಣು ಶ್ರೀನಿವಾಸನ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.

ಎಕ್ಸ್‌ (ಹಿಂದಿನ ಟ್ವಿಟರ್‌) ಸಾಮಾಜಿಕ ಜಾಲತಾಣದಲ್ಲಿ ನರಸಿಂಹನ್‌ ನೀಡಿದ ಎರಡು ನಿರ್ದಿಷ್ಟ ಹೇಳಿಕೆಗಳ ಬಗ್ಗೆ ಶ್ರೀನಿವಾಸನ್‌ ನ್ಯಾಯಾಲಯದ ಗಮನ ಸೆಳೆದಿದ್ದರು.

ಹೇಳಿಕೆಗಳನ್ನು ಪರಿಶೀಲಿಸಿದ ಪೀಠ ಅವುಗಳಲ್ಲಿ ಒಂದು ಆಕ್ಷೇಪಾರ್ಹವಾಗಿದ್ದು ಲೈಂಗಿಕ ಕಾರ್ಯಕರ್ತೆಯನ್ನು ಉಲ್ಲೇಖಿಸಲು ಬಳಸುವ ತಮಿಳು ಪದ ʼವೇಸಿʼ ಸೇರಿದಂತೆ ಹಲವು ಪದ ಬಳಸಲಾಗಿದೆ ಎಂದಿತು.

“ಸನಾತನ ಧರ್ಮದ ರಕ್ಷಕ ಎಂದು ಹೇಳಿಕೊಳ್ಳುವ ವ್ಯಕ್ತಿಯು ಲೈಂಗಿಕ ಕಾರ್ಯಕರ್ತೆಯರನ್ನು ಉಲ್ಲೇಖಿಸುವ ವೇಸಿಯಂತಹ ಅಹಿತಕರ ಪದಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಳಸಬಾರದು. ವೇಸಿ ಪದ ಬಳಕೆಯನ್ನು ನಾವು ವಿರೋಧಿಸದೇ ಇರಲು ಸಾಧ್ಯವಿಲ್ಲ, ಏಕೆಂದರೆ ಇದು ಲೈಂಗಿಕ ಕಾರ್ಯಕರ್ತೆಯರನ್ನು ಸೂಚಿಸುತ್ತದೆ. ಅಂತಹ ಅಹಿತಕರ ಪದಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುವುದಿಲ್ಲ” ಎಂದು ನ್ಯಾಯಾಲಯ ನರಸಿಂಹನ್‌ ಅವರಿಗೆ ದಂಡ ವಿಧಿಸುವಾಗ ಹೇಳಿದೆ.