ದ್ರಾವಿಡ ವಾದ ನಿರ್ಮೂಲನಾ ಸಭೆಗೆ ಮದ್ರಾಸ್ ಹೈಕೋರ್ಟ್ ನಕಾರ: ಸನಾತನ ಧರ್ಮ ನಿರ್ಮೂಲನಾ ಸಮಾವೇಶ ಕುರಿತೂ ಅಸಮಾಧಾನ

ವಿಭಜಕ ವಿಚಾರಗಳನ್ನು ಪ್ರಚಾರ ಮಾಡುವ ಅಥವಾ ಯಾವುದೇ ಸಿದ್ಧಾಂತವನ್ನು ರದ್ದುಗೊಳಿಸುವ ಇಲ್ಲವೇ ನಿರ್ಮೂಲನೆ ಮಾಡಲು ಸಭೆ ಸೇರುವ ಹಕ್ಕು ಈ ದೇಶದ ಯಾವುದೇ ವ್ಯಕ್ತಿಗೆ ಇಲ್ಲ ಎಂದು ನ್ಯಾ. ಜಿ ಜಯಚಂದ್ರನ್ ಹೇಳಿದರು.
ದ್ರಾವಿಡ ವಾದ ನಿರ್ಮೂಲನಾ ಸಭೆಗೆ ಮದ್ರಾಸ್ ಹೈಕೋರ್ಟ್ ನಕಾರ: ಸನಾತನ ಧರ್ಮ ನಿರ್ಮೂಲನಾ ಸಮಾವೇಶ ಕುರಿತೂ ಅಸಮಾಧಾನ
Published on

ಯಾವುದೇ ಸಿದ್ಧಾಂತ ನಿರ್ಮೂಲನೆ ಮಾಡಲು ಸಭೆ ನಡೆಸುವ ಹಕ್ಕು ದೇಶದಲ್ಲಿ ಯಾರಿಗೂ ಇಲ್ಲ ಎಂದು ಈಚೆಗೆ ತಿಳಿಸಿರುವ ಮದ್ರಾಸ್ ಹೈಕೋರ್ಟ್ "ದ್ರಾವಿಡ ಸಿದ್ಧಾಂತ ನಿರ್ಮೂಲನೆ" ಕುರಿತು ಸಮಾವೇಶ ನಡೆಸಲು ಅನುಮತಿ ನೀಡಲು ನಿರಾಕರಿಸಿತು.

"ಸನಾತನ ಧರ್ಮದ ನಿರ್ಮೂಲನೆ" ಕುರಿತು ಈ ಹಿಂದೆ ನಡೆದ ಸಮಾವೇಶದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸದಸ್ಯರ ವಿರುದ್ಧ ಕ್ರಮಕೈಗೊಳ್ಳದ ತಮಿಳುನಾಡು ಪೊಲೀಸರನ್ನು ಕೂಡ ನ್ಯಾಯಾಲಯ ಇದೇ ವೇಳೆ ದೂಷಿಸಿದ್ದು ಪೊಲೀಸರ ನಿಷ್ಕ್ರಿಯತೆಯನ್ನು ʼಕರ್ತವ್ಯ ಲೋಪʼ ಎಂದು ಅದು ಬಣ್ಣಿಸಿದೆ.

ʼಬಹು ಸಿದ್ಧಾಂತಗಳ ಅಸ್ತಿತ್ವʼ ಭಾರತದ ಅಸ್ಮಿತೆಯ ಭಾಗವಾಗಿದ್ದು ಅಧಿಕಾರದಲ್ಲಿರುವವರು ವಿಭಜಕ ವಿಚಾರ ಪ್ರಚಾರ ಮಾಡುವುದನ್ನು ತಡೆಯಬೇಕು ಎಂದು ನ್ಯಾಯಮೂರ್ತಿ ಜಿ ಜಯಚಂದ್ರನ್ ಹೇಳಿದರು.

ಚೆನ್ನೈನಲ್ಲಿ "ದ್ರಾವಿಡ ಸಿದ್ಧಾಂತಗಳ ನಿರ್ಮೂಲನೆ" ಕುರಿತು ಸಭೆ ನಡೆಸಲು ಪೊಲೀಸರ ಅನುಮತಿ ಕೋರಿ ಮಗೇಶ್ ಕಾರ್ತಿಕೇಯನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ  ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ಸನಾತನ ಧರ್ಮ ಕುರಿತ ಹೇಳಿಕೆ: ಸಚಿವ ಸ್ಥಾನದಿಂದ ಉದಯನಿಧಿ ವಜಾಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಮೂರು ಅರ್ಜಿ

"ಸಾರ್ವಜನಿಕರಲ್ಲಿ ಕೆಟ್ಟ ಇಚ್ಛೆಯನ್ನು ಉಂಟುಮಾಡುವ ವಿಚಾರಗಳನ್ನು ಪ್ರಚಾರ ಮಾಡಲು ನ್ಯಾಯಾಲಯಗಳು ಸಹಾಯ ಮಾಡುತ್ತವೆ ಎಂದು ಯಾರೂ ನಿರೀಕ್ಷಿಸುವಂತಿಲ್ಲ. “ಸನಾತನ ಧರ್ಮ” ನಿರ್ಮೂಲನೆಗಾಗಿ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರು ಮತ್ತು ಸಚಿವರು ಭಾಗವಹಿಸಿದ್ದು ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಪೊಲೀಸರ ಕರ್ತವ್ಯ ಲೋಪವಾಗಿದೆ. “ಸನಾತನ ಧರ್ಮ”ನಿರ್ಮೂಲನೆ ಮಾಡಲು ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲವಾದ ಕಾರಣ ಈಗ, "ದ್ರಾವಿಡ ಸಿದ್ಧಾಂತ" ನಿರ್ಮೂಲನೆಗಾಗಿ ಸಭೆ ನಡೆಸುವ ಮೂಲಕ ಅದನ್ನು ಎದುರಿಸಲು ಅನುಮತಿ ಕೋರಲಾಗುತ್ತಿದೆ. ಅರ್ಜಿದಾರರ ಮನವಿಯನ್ನು ಅಂಗೀಕರಿಸಿದರೆ, ಅದು ಪ್ರಮಾಣವಚನ ಸ್ವೀಕರಿಸಿದ ಕೆಲವರು ವಚನಭ್ರಷ್ಟರಾಗಿ ಹಿಡಿದಿರುವ ಮಾರ್ಗದಿಂದ ಈಗಾಗಲೇ ಬೇಸತ್ತಿರುವ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುತ್ತದೆ. ದ್ರಾವಿಡ ಸಿದ್ಧಾಂತ ನಿರ್ಮೂಲನೆ ಮಾಡಲು ಸಮಾವೇಶ  ನಡೆಸುವುದಕ್ಕಾಗಿ ಅರ್ಜಿದಾರರಿಗೆ ಅನುಮತಿ ನೀಡುವ ಮೂಲಕ ಈ ನ್ಯಾಯಾಲಯ ಅಪರಾಧ ಎಸಗದು” ಎಂದು ನ್ಯಾಯಮೂರ್ತಿ ಜಯಚಂದ್ರನ್ ಹೇಳಿದರು.

ಅಧಿಕಾರ ಹಿಡಿದವರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಿದ್ಧಾಂತ, ಜಾತಿ ಮತ್ತು ಧರ್ಮದ ಮೂಲಕ ಜನರನ್ನು ವಿಭಜಿಸುವ ಯಾವುದೇ ಕೆಲಸದಿಂದ ದೂರವಿರಬೇಕು ಎಂದು ನ್ಯಾಯಾಧೀಶರು ಹೇಳಿದರು.

“ಅಧಿಕಾರದಲ್ಲಿರುವ ವ್ಯಕ್ತಿ ಭಾಷಣದ ಅಪಾಯ ಅರಿತು ಜವಾಬ್ದಾರಿಯುತವಾಗಿ ವರ್ತಿಸಬೇಕು.  ಸಿದ್ಧಾಂತ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಚಾರದಿಂದ ದೂರ ಇರಬೇಕು ಎಂದು ಈ ನ್ಯಾಯಾಲಯ ಅಭಿಪ್ರಾಯಪಡುತ್ತದೆ. ಬದಲಾಗಿ, ಅವರು ಆರೋಗ್ಯ, ಭ್ರಷ್ಟಾಚಾರ ಅಸ್ಪೃಶ್ಯತೆ ಮತ್ತಿತರ ಸಾಮಾಜಿಕ ಅನಿಷ್ಟಗಳ ಬಗ್ಗೆ, ಆರೋಗ್ಯಕ್ಕೆ ಮಾರಕವಾಗುವ ಮಾದಕ ಪಾನೀಯ ಮತ್ತು ದ್ರವ್ಯಗಳ ನಿರ್ಮೂಲನೆ ಮಾಡುವತ್ತ ಗಮನಹರಿಸಬೇಕು ”ಎಂದು ನ್ಯಾಯಾಲಯ ಕಿವಿಮಾತು ಹೇಳಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Magesh_Karthikeyan_v_The_Commissioner.pdf
Preview
Kannada Bar & Bench
kannada.barandbench.com