ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಪೌರಾಯುಕ್ತೆ ಜಿ ಅಮೃತಾ ಅವರನ್ನು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣದಲ್ಲಿ ಅಮಾನತುಗೊಂಡಿರುವ ಕಾಂಗ್ರೆಸ್ ಮುಖಂಡ ಬಿ ವಿ ರಾಜೀವ್ ಗೌಡಗೆ ಶಿಡ್ಲಘಟ್ಟ ಜೆಎಂಎಫ್‌ಸಿ ನ್ಯಾಯಾಲಯವು ಶುಕ್ರವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಅಮೃತಾ ಅವರನ್ನು ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣದಲ್ಲಿ ಜಾಮೀನು ಕೋರಿ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶಿಡ್ಲಘಟ್ಟದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ನಡೆಸಿದರು.
ರಾಜೀವ್ ಗೌಡ 15 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷಿಗಳನ್ನು ತಿರುಚಬಾರದು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಜೈಲಿನಿಂದ ಹೊರಬಂದ ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸುವಂತಿಲ್ಲ ಎಂದೂ ನ್ಯಾಯಾಲಯವು ರಾಜೀವ್ ಗೌಡಗೆ ಸೂಚಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪೌರಾಯುಕ್ತೆ ಜಿ ಅಮೃತಾ ಅವರನ್ನು ಬೆದರಿಸಿ, ನಿಂದಿಸಿದ ಪ್ರಕರಣದಲ್ಲಿ ರಾಜೀವ್ ಗೌಡ ಅವರನ್ನು ಬಂಧಿಸಲಾಗಿತ್ತು. ಜೆಡಿಎಸ್ ಶಾಸಕ ಬಿ ಎನ್ ರವಿಕುಮಾರ್ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಬಂಧಿಸಲಾಗಿರಲಿಲ್ಲ. ಹೀಗಾಗಿ, ಜಾಮೀನು ದೊರೆತ ತಕ್ಷಣ ಅವರು ಚಿಂತಾಮಣಿ ಜೈಲಿನಿಂದ ಹೊರಬಂದರು.
ರಾಜೀವ್ ಗೌಡ ಪರವಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದಿಸಿದರು.
ಅಮೃತಾ ಮತ್ತು ಜೆಡಿಎಸ್ ಶಾಸಕ ಬಿ ಎನ್ ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಸಂಬಂಧ ರಾಜೀವ್ ಗೌಡ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚಗೆ ನಿರಾಕರಿಸಿತ್ತು. ಇದರ ಬೆನ್ನಿಗೇ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ಹಿನ್ನೆಲೆ: ಸಾರ್ವಜನಿಕರ ದೂರಿನ ಮೇರೆಗೆ ಸಿನಿಮಾ ಒಂದಕ್ಕೆ ಬೆಂಬಲಿಸಿ ಬ್ಯಾನರ್ ಮತ್ತು ಕಟೌಟ್ ಹಾಕಿದ್ದನ್ನು ತೆಗೆಸಿದ್ದಕ್ಕೆ ರಾಜೀವ್ ಗೌಡ ಅವರು ಆರೋಗ್ಯಾಧಿಕಾರಿ ಮತ್ತು ನನ್ನನ್ನು ಅತ್ಯಂತ ಕೆಟ್ಟ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರು 14.01.2026ರಂದು ನೀಡಿದ ದೂರಿನ ಅನ್ವಯ ಬಿಎನ್‌ಎಸ್ ಸೆಕ್ಷನ್‌ಗಳಾದ 132, 224, 352, 351(3) ಮತ್ತು 56ರ ಅಡಿ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೇ, ಅಮೃತಾ ಅವರ ಜೊತೆ ಫೋನ್‌ನಲ್ಲಿ ಮಾತನಾಡುವಾಗ ಜೆಡಿಎಸ್ ಶಾಸಕರಾದ ಬಿ ಎನ್ ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜೆಡಿಎಸ್ ಶಿಡ್ಲಘಟ್ಟ ತಾಲ್ಲೂಕು ಉಪಾಧ್ಯಕ್ಷ ಎನ್ ಸಿ ಶ್ರೀನಿವಾಸ್ ಗೌಡ ನೀಡಿದ ದೂರಿನ ಅನ್ವಯ ರಾಜೀವ್ ಗೌಡ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 352, 353(2) ಅಡಿ ಪ್ರತ್ಯೇಕ ಪ್ರಕರಣ ಶಿಡ್ಲಘಟ್ಟ ನಗರ ಠಾಣೆಯಲ್ಲಿ ದಾಖಲಾಗಿದೆ.