ಪೌರಾಯುಕ್ತೆ ನಿಂದನೆ ಪ್ರಕರಣ: ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್‌; ಬಂಧನ ಭೀತಿ

ತಮ್ಮ ಭಾವಚಿತ್ರವಿರುವ ಸಿನಿಮಾ ಕಟೌಟ್‌ ತೆರವು ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಸಂಬಂಧ ಪೌರಾಯುಕ್ತೆ ಜಿ ಅಮೃತಾ ದೂರು ನೀಡಿದ್ದರು. ಅತ್ತ ಜೆಡಿಎಸ್‌ ಶಾಸಕ ರವಿಕುಮಾರ್‌ ಬೆಂಬಲಿಗ ಮತ್ತೊಂದು ದೂರು ನೀಡಿದ್ದಾರೆ.
ಪೌರಾಯುಕ್ತೆ ನಿಂದನೆ ಪ್ರಕರಣ: ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್‌; ಬಂಧನ ಭೀತಿ
Published on

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೌರಾಯುಕ್ತೆ ಜಿ ಅಮೃತಾ ಮತ್ತು ಸ್ಥಳೀಯ ಜೆಡಿಎಸ್‌ ಶಾಸಕ ಬಿ ಎನ್‌ ರವಿಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಸಂಬಂಧ ಕಾಂಗ್ರೆಸ್‌ ಮುಖಂಡ ಬಿ ವಿ ರಾಜೀವ್‌ ಗೌಡ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ. ಇದರಿಂದ ರಾಜೀವ್‌ ಗೌಡಗೆ ಬಂಧನ ಭೀತಿ ಎದುರಾಗಿದೆ.

ತಮ್ಮ ಭಾವಚಿತ್ರವಿರುವ ಸಿನಿಮಾ ಕಟೌಟ್‌ ತೆರವು ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಸಂಬಂಧ ಪೌರಾಯುಕ್ತೆ ಜಿ ಅಮೃತಾ ನೀಡಿರುವ ದೂರು ಮತ್ತು ಅಮೃತಾ ಅವರ ಜೊತೆ ಫೋನ್‌ನಲ್ಲಿ ಮಾತನಾಡುವಾಗ ಶಿಡ್ಲಘಟ್ಟ ಜೆಡಿಎಸ್‌ ಶಾಸಕ ಬಿ ಎನ್‌ ರವಿಕುಮಾರ್‌ ಅವರನ್ನು ವಾಚಾಮಗೋಚರವಾಗಿ ನಿಂದಿಸಿ, ಬೆದರಿಕೆ ಹಾಕಿರುವ ಆರೋಪದ ಮೇಲೆ ಜೆಡಿಎಸ್‌ ಕಾರ್ಯಕರ್ತ ಎನ್‌ ಸಿ ಶ್ರೀನಿವಾಸ್‌ ಗೌಡ ಅವರು ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ರಾಜೀವ್‌ ಗೌಡ ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ರಾಜೀವ್‌ ಗೌಡ ಅವರ ಅರ್ಜಿಗಳಲ್ಲಿ ಯಾವುದೇ ಮೆರಿಟ್‌ ಇಲ್ಲ. ಹೀಗಾಗಿ, ಅವುಗಳನ್ನು ವಜಾಗೊಳಿಸಲಾಗಿದೆ. ಹಾಲಿ ಅರ್ಜಿಗಳನ್ನು ಪರಿಗಣಿಸುವ ಸಂಬಂಧ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಮಹಿಳೆ ಎಂದರೆ ಗೌರವವೇ ಇಲ್ಲವೇ? ನಾಲಿಗೆ ಶುದ್ಧವಿರಬೇಕು. ಆಡಿದ ಮಾತುಗಳನ್ನು ಹಿಂಪಡೆಯಲಾಗದು. ನಾಲಿಗೆ ಸರಿಯಾಗಿರಬೇಕು. ನಾಲಿಗೆಯೇ ಎಲ್ಲವನ್ನೂ ಯಾವಾಗಲೂ ನಾಶ ಮಾಡಿದೆ. ನೀವು ಕ್ಷಮೆ ಕೋರಬಹುದು ಆದರೆ, ಬಿರುಕು ಹಾಗೆ ಉಳಿಯಲಿದೆ” ಎಂದು ನ್ಯಾಯಾಲಯವು ರಾಜೀವ್‌ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Also Read
'ಮಹಿಳೆ ಎಂದರೆ ಗೌರವ ಇಲ್ಲವೇ? ನಾಲಿಗೆ ಶುದ್ಧವಿರಲಿ': ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ವಿರುದ್ಧ ಹೈಕೋರ್ಟ್‌ ಕಿಡಿ

ಪ್ರಕರಣದ ಹಿನ್ನೆಲೆ: ಸಾರ್ವಜನಿಕರ ದೂರಿನ ಮೇರೆಗೆ ಸಿನಿಮಾ ಒಂದಕ್ಕೆ ಬೆಂಬಲಿಸಿ ಬ್ಯಾನರ್‌ ಮತ್ತು ಕಟೌಟ್‌ ಹಾಕಿದ್ದನ್ನು ತೆಗೆಸಿದ್ದಕ್ಕೆ ರಾಜೀವ್‌ ಗೌಡ ಅವರು ಆರೋಗ್ಯಾಧಿಕಾರಿ ಮತ್ತು ನನ್ನನ್ನು ಅತ್ಯಂತ ಕೆಟ್ಟ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರು 14.01.2026ರಂದು ನೀಡಿದ ದೂರಿನ ಅನ್ವಯ ಬಿಎನ್‌ಎಸ್‌ ಸೆಕ್ಷನ್‌ಗಳಾದ 132, 224, 352, 351(3) ಮತ್ತು 56ರ ಅಡಿ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲದೇ, ಅಮೃತಾ ಅವರ ಜೊತೆ ಫೋನ್‌ನಲ್ಲಿ ಮಾತನಾಡುವಾಗ ಜೆಡಿಎಸ್‌ ಶಾಸಕರಾದ ಬಿ ಎನ್‌ ರವಿಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜೆಡಿಎಸ್‌ ಶಿಡ್ಲಘಟ್ಟ ತಾಲ್ಲೂಕು ಉಪಾಧ್ಯಕ್ಷ ಎನ್‌ ಸಿ ಶ್ರೀನಿವಾಸ್‌ ಗೌಡ ನೀಡಿದ ದೂರಿನ ಅನ್ವಯ ರಾಜೀವ್‌ ಗೌಡ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 352, 353(2) ಅಡಿ ಪ್ರತ್ಯೇಕ ಪ್ರಕರಣ ಶಿಡ್ಲಘಟ್ಟ ನಗರ ಠಾಣೆಯಲ್ಲಿ ದಾಖಲಾಗಿದೆ.

Kannada Bar & Bench
kannada.barandbench.com