Javed Akhtar, Kangana Ranaut 
ಸುದ್ದಿಗಳು

ಹೃತಿಕ್ ರೋಷನ್ ಕ್ಷಮೆ ಕೇಳದೆ ಇದ್ದದ್ದಕ್ಕೆ ಅಖ್ತರ್ ಅವರಿಂದ ಬೆದರಿಕೆ: ಮುಂಬೈ ನ್ಯಾಯಾಲಯಕ್ಕೆ ಕಂಗನಾ ರನೌತ್

ಜಾವೇದ್ ಅಖ್ತರ್ ವಿರುದ್ಧದ ಸುಲಿಗೆ ಆರೋಪದ ದೂರಿನಲ್ಲಿ, ಮುಂಬೈ ನ್ಯಾಯಾಲಯವು ರನೌತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಂದೇಲ್‌ ಅವರ ಪರಿಶೀಲನಾ ಹೇಳಿಕೆಯನ್ನು ಸಾಕ್ಷಿಯಾಗಿ ದಾಖಲಿಸಿದೆ.

Bar & Bench

ಕವಿ, ಹಿಂದಿ ಚಿತ್ರರಂಗದ ಖ್ಯಾತ ಗೀತರಚನೆಕಾರ, ಜಾವೆದ್‌ ಅಖ್ತರ್‌ ವಿರುದ್ಧ ನೀಡಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ಸೋಮವಾರ ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರ ಹೇಳಿಕೆ ದಾಖಲಿಸಿಕೊಂಡಿದೆ. ತಾನು ಹೆಸರಾಂತ ನಟ ಹೃತಿಕ್‌ ರೋಷನ್‌ ಅವರ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಜಾವೇದ್‌ ಬೆದರಿಕೆ ಹಾಕಿ ತಮ್ಮನ್ನು ಅವಮಾನಿಸಿದ್ದಾರೆ. ಅಲ್ಲದೆ ತಮ್ಮನ್ನು ʼಸುಲಿಗೆʼ ಕೂಡ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹೃತಿಕ್‌ ಅವರ ಕ್ಷಮೆ ಕೋರಬೇಕೆಂಬ ಜಾವೇದ್‌ ಅವರ ಬೇಡಿಕೆ ನಿರಾಕರಿಸಿದಾಗ ಅವರು ಅಸಮಾಧಾನಗೊಂದು ನನ್ನ ಘನತೆಗೆ ಕುತ್ತು ಬರುವಂತೆ ಅವಮಾನಿಸಿದರು ಎಂದು ತನ್ನ ಸಹೋದರಿ ಪ್ರಕರಣದ ಸಾಕ್ಷಿಯಾಗಿರುವ ರಂಗೋಲಿ ಚಂದೇಲ್‌ ಅವರ ಸಮ್ಮುಖದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರಿಂದ ಪರಿಶೀಲಿಸಲಾದ ಕಿರು ಹೇಳಿಕೆಯಲ್ಲಿ ರೌನತ್‌ ತಿಳಿಸಿದ್ದಾರೆ.

ಕ್ರಿಮಿನಲ್ ಪಿತೂರಿ, ಸುಲಿಗೆ ಹಾಗೂ ಕಂಗನಾರ ಖಾಸಗಿತನ ಅತಿಕ್ರಮಿಸಿ ಘನತೆಗೆ ಕುತ್ತು ತಂದ ಆರೋಪದಡಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕಂಗನಾ ಹೇಳಿಕೆಗಳನ್ನು ದಾಖಲಿಸಿಕೊಂಡಿತು.

ಕಂಗನಾ ಹೇಳಿಕೆಯ ಪ್ರಮುಖಾಂಶಗಳು

  • ಕ್ಷಮೆ ಕೇಳದಿದ್ದರೆ ಹೃತಿಕ್‌ ರೋಷನ್‌ ಕುಟುಂಬದ ಬೆದರಿಕೆ ಎದುರಿಸಬೇಕಾಗುತ್ತದೆ. ಅವರು ಪ್ರಭಾವಿಯಾಗಿದ್ದು ಸರ್ಕಾರದೊಂದಿಗೆ ನಂಟು ಹೊಂದಿದ್ದಾರೆ. ನನ್ನನ್ನು (ಕಂಗನಾರನ್ನು) ಜೈಲಿಗೂ ಹಾಕಬಹುದು ಎಂದು ಬೆದರಿಸಿದರು.

  • ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಜಾವೇದ್‌ ಪ್ರಚೋದಿಸಿದ್ದು ಮಾನಸಿಕವಾಗಿ ತೊಂದರೆ ಅನುಭವಿಸಿದ್ದೇನೆ.

  • ನನ್ನ ವಿರುದ್ಧ ಅಖ್ತರ್‌ ಗಂಭೀರ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆ.

  • ನನ್ನ ಸಾರ್ವಜನಿಕ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಹೃತಿಕ್‌ ಪರವಾಗಿ ಜನ ತೀರ್ಪು ನೀಡಲೆಂದು ಜಾವೇದ್‌ ಅವರು ಹೃತಿಕ್‌ಗೆ ಲಿಖಿತವಾಗಿ ಕ್ಷಮೆಯಾಚಿಸಬೇಕೆಂದು ಕೋರಿದರು ಇದು ʼಕ್ಷಮಾಪಣೆಯ ಸುಲಿಗೆʼಯಾಗಿದೆ.

  • ಕ್ಷಮೆ ಕೇಳದಿದ್ದರೆ ʼಘೋರ ಪರಿಣಾಮʼ ಎದುರಿಸಬೇಕಾಗುತ್ತದೆ ಎಂದು ಜಾವೆದ್‌ ಅಖ್ತರ್‌ ಬೆದರಿಕೆ ಹಾಕಿದ್ದಾರೆ.

  • ಐಪಿಸಿ ಸೆಕ್ಷನ್ 383, 384, 387 (ಸುಲಿಗೆ), 503, 506 (ಅಪರಾಧ ಬೆದರಿಕೆ) ಮತ್ತು 509 (ಮಹಿಳೆಯರ ಘನತೆಗೆ ಧಕ್ಕೆ) ಅಡಿಯಲ್ಲಿ ಅಖ್ತರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು.