ಬಾಲಿವುಡ್ ನಟಿ ಪಾಯಲ್ ಘೋಷ್, ಕಮಾಲ್ ಆರ್ ಖಾನ್, ಸುದ್ದಿ ವಾಹಿನಿ ಎಬಿಎನ್ ಆಂಧ್ರಜ್ಯೋತಿ ಮತ್ತು ಇತರರ ವಿರುದ್ಧ ರಿಚಾ ಛಡ್ಡಾ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸೋಮವಾರ ರಿಚಾ ಹಾಗೂ ಪಾಯಲ್ ಅವರಿಗೆ ಸಂಧಾನ ಮಾತುಕತೆ ನಡೆಸಲು ಮತ್ತೊಂದು ಅವಕಾಶ ನೀಡುವಂತೆ ಉಭಯ ನಟಿಯರ ವಕೀಲರಿಗೆ ಸೂಚಿಸಿದೆ.
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪಾಯಲ್ ಘೋಷ್ ಅವರು ರಿಚಾ ಛಡ್ಡಾ ಅವರ ಹೆಸರು ಪ್ರಸ್ತಾಪಿಸಿದ್ದರು. ಇದರ ಆಧಾರದಲ್ಲಿ ರಿಚಾ ಅವರು ಪಾಯಲ್ ಮತ್ತು ಇತರರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ. ಕಮಾಲ್ ಖಾನ್ ಮತ್ತು ಸುದ್ದಿ ವಾಹಿನಿಗಳು ಪಾಯಲ್ ಅವರ ಹೇಳಿಕೆಯನ್ನು ಪ್ರಸಾರ ಮಾಡಿದ್ದರು. ಚಾನೆಲ್‌ಗಳು ಹಾಗೂ ಮತ್ತಿತರ ಆರೋಪಿಗಳ ವಿರುದ್ಧದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿರುವ ನ್ಯಾಯಾಲಯವು, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವಿಚಾರಣೆಯ ಸಂದರ್ಭದಲ್ಲಿ ಹೊರಹೊಮ್ಮುವ ದೂರುಗಳನ್ನು ಖಾಸಗಿಯೂ, ಸ್ವಯಂ ನೇಮಿತವೂ ಆದ ಸುದ್ದಿ ಪ್ರಸಾರ ಸಂಸ್ಥೆ (ಎನ್‌ಬಿಎ) ತರಹದ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಕೇಂದ್ರ ಸರ್ಕಾರವು ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಸೋಮವಾರ ಹಿರಿಯ ವಕೀಲ ದೇವದತ್ತ ಕಾಮತ್ ಪ್ರತಿಪಾದಿಸಿದ್ದಾರೆ.
ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿಚಾರಣೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿರುವ ಅರ್ಜಿದಾರರ ಪರವಾಗಿ ದೇವದತ್ತ ಕಾಮತ್ ವಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಸ್ಮಾರ್ಟ್‌ಫೋನ್‌ಗಳಿಗೆ ಈಗಾಗಲೇ ರೂಪಿಸಿ ಅಳವಡಿಸಲಾಗಿರುವ ಅಪ್ಲಿಕೇಶನ್‌ಗಳ ಮೂಲಕ ಸಂಗ್ರಹಿಸುವ ದತ್ತಾಂಶಗಳಿಗೆ ಸಂಬಂಧಿಸಿದಂತೆ ಸಂವಿಧಾನದ 21ನೇ ವಿಧಿಯಡಿ ಖಾಸಗಿ ಹಕ್ಕು ಜಾರಿಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಮೊಬೈಲ್‌ನಲ್ಲಿ ಅಳವಡಿಸಲಾಗಿರುವ ಅಪ್ಲಿಕೇಶನ್‌ಗಳ ಮಾಹಿತಿ ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಜತಿನ್ ರಾಣಾ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ. ಅಡ್ವೊಕೇಟ್ ಆನ್ ರೆಕಾರ್ಡ್‌ನ ವಾಜೀಹ್ ಶಫೀಕ್ ಮನವಿ ಸಲ್ಲಿಸಿದ್ದು, ವಕೀಲರಾದ ದಿವ್ಯೆ ಛುಘ್ ಮತ್ತು ನಿಮಿಷ್ ಛಿಬ್ ಅವರು ಅರ್ಜಿದಾರರನ್ನು ಪ್ರತಿನಿಧಿಸಲಿದ್ದಾರೆ.