“ನನ್ನ ತಂದೆ ಮತ್ತು ನಾನಿ ಪಾಲ್ಖಿವಾಲಾ ಅವರಿಗೂ ಮಹಾರಾಷ್ಟ್ರ ವಿಧಾನಸಭೆ ನೋಟಿಸ್ ನೀಡಿತ್ತು”: ಸಿಜೆಐ ಬೊಬ್ಡೆ

ಹಕ್ಕುಬಾಧ್ಯತಾ ಸಮಿತಿಯು ಅವಲೋಕಿಸಿದ ಬಳಿಕ ಅರ್ನಾಬ್ ಗೋಸ್ವಾಮಿ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
CJI SA Bobde
CJI SA Bobde

ಹಕ್ಕುಬಾಧ್ಯತೆ ಉಲ್ಲಂಘಿಸಲಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯು ನೀಡಿರುವ ನೋಟಿಸ್ ಪ್ರಶ್ನಿಸಿ ಅರ್ನಾಬ್ ಗೋಸ್ವಾಮಿ ಸಲ್ಲಿಸಿರುವ ಮನವಿ ವಿಚಾರಣೆಯ ವೇಳೆ, ತಮ್ಮ ತಂದೆ ಅರವಿಂದ ಶ್ರೀನಿವಾಸ ಬೊಬ್ಡೆ ಮತ್ತು ನಾನಿ ಪಾಲ್ಖಿವಾಲಾ ಅವರಿಗೂ ಇದೇ ರೀತಿಯ ನೋಟಿಸ್ ನೀಡಲಾಗಿತ್ತು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ.

“ಸದನಲ್ಲಿ ಸದಸ್ಯರೊಬ್ಬರು ಮತ್ತೊಬ್ಬ ಸದಸ್ಯರ ಬಗ್ಗೆ ಆರೋಪಿಸಿದಾಗ ಅದನ್ನು ಹಕ್ಕುಬಾಧ್ಯತಾ ಸಮಿತಿಗೆ ಸ್ಪೀಕರ್ ನೀಡುತ್ತಾರೆ. ನನ್ನ ತಂದೆ ಅರವಿಂದ ಬೊಬ್ಡೆ ಮತ್ತು ದಿವಂಗತ ನಾನಿ ಪಾಲ್ಖಿವಾಲಾ ಅವರಿಗೆ ಮಹಾರಾಷ್ಟ್ರ ವಿಧಾನಸಭೆಯು ಇದೇ ರೀತಿಯ ನೋಟಿಸ್ ನೀಡಿತ್ತು.”
ಸಿಜೆಐ ಎಸ್‌ ಎ ಬೊಬ್ಡೆ

ಹಕ್ಕುಬಾಧ್ಯತಾ ಸಮಿತಿ ಅವಲೋಕನ ನಡೆಸಿದ ಬಳಿಕ ಅರ್ನಾಬ್ ಗೋಸ್ವಾಮಿ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ. ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ ಸಿಜೆಐ ಬೊಬ್ಡೆ ನೇತೃತ್ವದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ಎರಡು ವಾರಗಳ ಕಾಲ ಪ್ರಕರಣ ಮುಂದೂಡಿದ್ದು, ಈ ಸಂದರ್ಭದಲ್ಲಿ ಗೋಸ್ವಾಮಿ ಅವರು ವಿಧಾನಸಭೆಗೆ ಅಫಿಡವಿಟ್ ಸಲ್ಲಿಸಬಹುದು ಎಂದಿತು. ಗೋಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಇಲ್ಲಿಯವರೆಗೆ ಸಲ್ಲಿಸಿಲ್ಲ ಎಂದು ಹೇಳಿದ್ದಕ್ಕೆ ನ್ಯಾಯಪೀಠವು ಮೇಲಿನಂತೆ ಹೇಳಿತು.

ಮೊದಲಿಗೆ ಸ್ಪೀಕರ್‌ಗೆ ದೂರು ನೀಡಲಾಗಿತ್ತು. ಬಳಿಕ ಅದನ್ನು ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿತ್ತು ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.

“ಹಕ್ಕುಬಾಧ್ಯತಾ ಸಮಿತಿಯು ಷೋಕಾಷ್ ನೋಟಿಸ್ ಬಗ್ಗೆ ಗಮನಹರಿಸಿದೆಯೇ” ಎಂದು ಸಿಜೆಐ ಬೊಬ್ಡೆ ಪ್ರಶ್ನಿಸಿದರು.

ನೋಟಿಸ್ ಸ್ವೀಕರಿಸದಿರುವ ಗೋಸ್ವಾಮಿ ಅವರ ನಡೆಯನ್ನು ಶಾಸನಸಭೆಯು ಸಂಘರ್ಷಾತ್ಮಕ ನಡೆ ಎಂದು ತಿಳಿಯಬಹುದು ಎಂದು ಗೋಸ್ವಾಮಿಯವರು ಆತಂಕಿತರಾಗಿದ್ದಾರೆ ಎಂದು ಸಾಳ್ವೆ ಹೇಳುತ್ತಿದ್ದಂತೆ, “ಏನು ಮಾಡಬೇಕು ಎಂದು ವಕೀಲರಿಗೆ ಗೊತ್ತು” ಎಂದು ಪೀಠವನ್ನು ಅವರ ವಾದವನ್ನು ತಳ್ಳಿ ಹಾಕಿತು.

ಹಕ್ಕುಬಾಧ್ಯತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ಷೋಕಾಷ್ ನೋಟಿಸ್ ಪ್ರಶ್ನಿಸಿ ಗೋಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಹಿಂದೆ ಮಹಾರಾಷ್ಟ್ರ ವಿಧಾನಸಭೆಗೆ ನೋಟಿಸ್ ನೀಡಿತ್ತು.

ಮಹಾರಾಷ್ಟ್ರ ಸರ್ಕಾರದ ಹಕ್ಕುಬಾಧ್ಯತಾ ಸಮಿತಿಯು ಷೋಕಾಷ್ ನೋಟಿಸ್ ಬಗ್ಗೆ ವಿಚಾರ ಮಾಡಿದೆಯೇ ಮತ್ತು ತನ್ನ ನಿಲುವು ಸ್ಪಷ್ಟಪಡಿಸಲು ಗೋಸ್ವಾಮಿ ಅವರು ಸಮಿತಿಯ ಮುಂದೆ ಹಾಜರಾಗಬೇಕೆ ಎಂಬುದರ ಬಗ್ಗೆ ತನಗೆ ಇನ್ನೂ ಖಚಿತವಾಗಿಲ್ಲ ಎಂದು ನ್ಯಾಯಪೀಠವು ಹೇಳಿದೆ.

ಮಹಾರಾಷ್ಟ್ರದ ಉಭಯ ಸದನಗಳಲ್ಲಿ ಶಿವಸೇನೆಯು ಅರ್ನಾಬ್ ಗೋಸ್ವಾಮಿ ವಿರುದ್ಧ ನಿರ್ಣಯ ಮಂಡಿಸಿದ ಬಳಿಕ ಅವರಿಗೆ 60 ಪುಟಗಳ ಹಕ್ಕುಬಾಧ್ಯತಾ ನೋಟಿಸ್ ಜಾರಿಗೊಳಿಸಲಾಗಿದೆ. ಸದನದ ಸದಸ್ಯರು ಅಥವಾ ಸಮಿತಿಯ ಹಕ್ಕುಗಳು, ವಿಶೇಷಾಧಿಕಾರ ಮತ್ತು ವಿನಾಯಿತಿಗಳನ್ನು ವ್ಯಕ್ತಿ ಅಥವಾ ಪ್ರಾಧಿಕಾರ ಉಲ್ಲಂಘಿಸಿದರೆ ಅವರ ವಿರುದ್ಧ ಹಕ್ಕುಬಾಧ್ಯತಾ ನಿರ್ಣಯ ಮಂಡಿಸಬಹುದಾಗಿದೆ. ಹಕ್ಕುಬಾಧ್ಯತೆ ಉಲ್ಲಂಘನೆ ಅಥವಾ ನಿಂದನೆಯ ಬಗ್ಗೆ ಸದನವು ನಿರ್ಧಾರ ಕೈಗೊಳ್ಳಲಿದ್ದು, ಶಿಕ್ಷೆ ವಿಧಿಸಲಿದೆ.

ಆದರೆ, ಈ ಪ್ರಕರಣದಲ್ಲಿ ಸದನದ ವ್ಯಾಪ್ತಿಯನ್ನೇ ಪ್ರಶ್ನಿಸಲಾಗುತ್ತಿದೆ ಎಂದು ಸಾಳ್ವೆ ಅವರು ವಾದಿಸಿದ್ದು, ಹಕ್ಕುಬಾಧ್ಯತೆ ಉಲ್ಲಂಘನೆಗೆ ಸಮನ್ಸ್ ನೀಡುವ ಅಧಿಕಾರ ಶಾಸನಸಭೆಯ ಆಚೆಗೆ ಇಲ್ಲ ಎಂದು ವಾದಿಸಿದ್ದಾರೆ.

“ರಾಜ್ಯ ಸರ್ಕಾರದ ವಿರುದ್ಧ ಕಟು ಶಬ್ದಗಳನ್ನು ಬಳಸಿದ ಮಾತ್ರಕ್ಕೆ ಹಕ್ಕುಬಾಧ್ಯತೆಯನ್ನು ವಿಧಾನಸಭೆ ವ್ಯಾಪ್ತಿ ಮೀರಿ ಅನ್ವಯಿಸಲಾಗದು. ಸಂವಿಧಾನದ 19 ಮತ್ತು 21ನೇ ವಿಧಿಗಳು ಹಕ್ಕುಚ್ಯುತಿಯನ್ನು ಮೀರುತ್ತವೆಯೇ ಎಂಬ ಆಸಕ್ತಿಕರ ಪ್ರಶ್ನೆ ಎದ್ದಿದೆ. ಎನ್ ರಾಮ್ ಪ್ರಕರಣವು ಇದೇ ಆಗಿದ್ದು, ಅದು ಏಳು ನ್ಯಾಯಮೂರ್ತಿಗಳ ಪೀಠದ ಮುಂದಿದೆ” ಎಂದು ಸಾಳ್ವೆ ವಾದಿಸಿದ್ದಾರೆ.

Also Read
ಟಿಆರ್‌ಪಿ ಹಗರಣ: ಮುಂಬೈ ಪೊಲೀಸ್ ಸಮನ್ಸ್ ಪ್ರಶ್ನಿಸಿ ‘ಸುಪ್ರೀಂ’ ಮೊರೆಹೋದ ರಿಪಬ್ಲಿಕ್ ಟಿವಿ

ಸದನದ ಕಾರ್ಯಾಚರಣೆ ಅಥವಾ ಸದಸ್ಯರಿಗೆ ಅಡ್ಡಿ ಪಡಿಸಿದಾಗ ಮಾತ್ರ ಹಕ್ಕುಬಾಧ್ಯತೆ ವಿಚಾರ ಮುನ್ನೆಲೆಗೆ ಬರಲಿದೆ ಎಂದು ಸಾಳ್ವೆ ಹೇಳಿದ್ದಾರೆ.

ತಮಗೆ ನೀಡಲಾದ ಷೋಕಾಷ್ ನೋಟಿಸ್ ಗೆ ಸಂಬಂಧಿಸಿದಂತೆ ಗೋಸ್ವಾಮಿ ಅವರು ತಮ್ಮ ರಿಪಬ್ಲಿಕ್ ಟಿವಿಯಲ್ಲಿ ಉದ್ದವ್ ಠಾಕ್ರೆ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳನ್ನು ನಿರಂತರವಾಗಿ ಪ್ರಶ್ನಿಸಲಾಗುವುದು. ಅಲ್ಲದೇ ತಮಗೆ ನೀಡಲಾದ ನೋಟಿಸ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದಿದ್ದರು.

Related Stories

No stories found.
Kannada Bar & Bench
kannada.barandbench.com