ಸುದ್ದಿಗಳು

ಆಸಿಡ್‌ ದಾಳಿ ಕೊಲೆಗಿಂತಲೂ ಘೋರ: ಮಹಿಳೆಗೆ ಆಸಿಡ್‌ ಎರಚಿದ್ದ ಭಗ್ನಪ್ರೇಮಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌

ಅಪರಾಧಿಗೆ ರೂ. 10 ಲಕ್ಷ ದಂಡ ವಿಧಿಸಿ ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಕಾಯಂಗೊಳಿಸಿರುವ ಹೈಕೋರ್ಟ್‌, ದಂಡದ ಮೊತ್ತವನ್ನು ಸಂತ್ರಸ್ತೆಗೆ ಪಾವತಿಸುವಂತೆ ಆದೇಶ.

Bar & Bench

ಸಂತ್ರಸ್ತೆಯ ಮೇಲಿನ ಆಸಿಡ್‌ ದಾಳಿಯು ಆಕೆಯ ವಿರುದ್ಧದ ಅಪರಾಧವಷ್ಟೇ ಅಲ್ಲ, ಅದು ಇಡೀ ನಾಗರಿಕ ಸಮಾಜದ ಮೇಲಿನ ದಾಳಿಯಾಗಿದೆ. ಇದು ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಅಂತ್ಯವೇ ಇಲ್ಲವಾಗಿದೆ. ಯುವತಿಯರು ಅಥವಾ ಮಕ್ಕಳ ಮೇಲೆ ಆಸಿಡ್‌ ಎರಚುವುದು ಕೊಲೆಗಿಂತಲೂ ಘೋರವಾದ ಪಾತಕ ಎಂದು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ವಿ ಶ್ರೀಶಾನಂದ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.

“ಮಹಿಳೆಯ ಮುಖಕ್ಕೆ ಆಸಿಡ್‌ ಎರಚಿದಾಗ ಅದು ಆಕೆಯ ದೇಹದಲ್ಲಿ ದೈಹಿಕ ಹಾನಿಯಾಗಿ ಮಾತ್ರವೇ ಉಳಿಯುವುದಿಲ್ಲ. ಬದಲಿದೆ ಅದು ಆಜೀವ ಅವಮಾನವಾಗಿ ಅವರ ಅಂತರಾಳದಲ್ಲಿ ಉಳಿಯಲಿದೆ. ಸಮಾಜದ ಎದುರು ಸಂತ್ರಸ್ತೆ ತನ್ನ ಮುಖವನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ಸಂತ್ರಸ್ತೆಯ ದೇಹವು ಆಟದ ವಸ್ತುವಲ್ಲ. ತನ್ನ ದ್ವೇಷವನ್ನು ತೀರಿಸಿಕೊಳ್ಳಲು ಆರೋಪಿಯು ಇದನ್ನು ಬಳಸಿಕೊಳ್ಳಲಾಗದು. ಇಂಥ ಪಾತಕ ಕೃತ್ಯಗಳನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ಮಹಿಳೆಯರ ವಿರುದ್ಧದ ಅಪರಾಧಗಳು ಎಂದಿಗೂ ಮುಗಿಯುವಂತೆ ಕಾಣುತ್ತಿಲ್ಲ. ಯುವತಿ, ಮಹಿಳೆ ಅಥವಾ ಅಪ್ರಾಪ್ತ ಬಾಲಕರ ಮೇಲೆ ಆಸಿಡ್‌ ಎರಚುವುದು ಕೊಲೆಗಿಂತಲೂ ಘೋರವಾದ ಪಾತಕವಾದ ಕೃತ್ಯವಾಗಿದೆ. ಇದನ್ನು ಸಂತ್ರಸ್ತೆಯ ತಂದೆ, ತಾಯಿ, ಪತಿ, ಮಕ್ಕಳು ಸೇರಿದಂತೆ ಸಮಾಜ ಸಹಿಸದು. ಹೀಗಾಗಿ, ಕ್ರಿಮಿನಲ್‌ಗಳು/ಆಸಿಡ್‌ ದಾಳಿಕೋರಿಗೆ ಕಟುವಾದ ಸಂದೇಶ ನೀಡಲು ಇದು ಸಕಾಲ” ಎಂದು ಆದೇಶದಲ್ಲಿ ಹೇಳಲಾಗಿದೆ.

ಇದೇ ಸಂದರ್ಭದಲ್ಲಿ ಪೀಠವು “ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದು ದೇಶವೊಂದರ ಪ್ರಗತಿ ಅಳೆಯಲು ಸರಿಯಾದ ಮಾಪನವಾಗಿದೆ” ಎಂಬ ಸ್ವಾಮಿ ವಿವೇಕಾನಂದರ ನುಡಿಯನ್ನು ನೆನಪಿಸಿತು.

ವಿಚಾರಣಾಧೀನ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದನ್ನು ಪ್ರಶ್ನಿಸಿದ್ದ ಅಪರಾಧಿ ಮಹೇಶನ ವಿರುದ್ಧದ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ತನ್ನ ಕೋರಿಕೆಯನ್ನು ಮನ್ನಿಸದ ಸಂತ್ರಸ್ತ ಮಹಿಳೆಯ ಮೇಲೆ ಭಗ್ನಪ್ರೇಮಿ ಮಹೇಶ ಆಸಿಡ್‌ ದಾಳಿ ನಡೆಸಿದ್ದನು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 326ಎ (ಆಸಿಡ್‌ ದಾಳಿ) ಅಡಿ ದಾಖಲಾಗಿದ್ದ ದೂರನ್ನು ಆಧರಿಸಿ ಸೆಷನ್ಸ್‌ ನ್ಯಾಯಾಧೀಶರು ಆತನನ್ನು ಅಪರಾಧಿ ಎಂದು ಘೋಷಿಸಿದ್ದು, ಜೀವಾವಧಿ ಶಿಕ್ಷೆಯ ಜೊತೆಗೆ 10 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದ್ದರು.

ಇದನ್ನು ಅಪರಾಧಿ ಪರ ವಕೀಲ ಎಸ್‌ ಜಿ ರಾಜೇಂದ್ರ ರೆಡ್ಡಿ ಪ್ರಶ್ನಿಸಿದ್ದು, ಐಪಿಸಿ ಸೆಕ್ಷನ್‌ಗಳಾದ 326ಎ ಮತ್ತು 307 ಅಡಿ ಅಪರಾಧಿ ಎಂದು ಘೋಷಿಸಿರುವುದು ದೋಷಪೂರಿತವಾಗಿದ್ದು, ವಾಸ್ತವಿಕವಾಗಿ ಲಭ್ಯವಿರುವ ದಾಖಲೆಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು.

ಮೇಲ್ಮನವಿದಾರರು ಸಂತ್ರಸ್ತೆಯ ಮೇಲೆ ಆಸಿಡ್‌ ಎರಚಿದಾಗ ಆಕೆ ತನ್ನ ಕೈಗಳಿಂದ ಮುಖ ಮುಚ್ಚಿಕೊಂಡರೂ ಆಸಿಡ್‌ ಆಕೆಯ ತಲೆ, ದೇಹ ಮತ್ತು ಕೈಗಳ ಮೇಲೆ ಆಸಿಡ್‌ ಬಿದ್ದಿತ್ತು ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

“ಸದರಿ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 326ಎ ಅಡಿ ಅಪರಾಧ ಸಾಬೀತಾಗಿದ್ದು, ಅದಕ್ಕೆ ಜೀವಾವಧಿ ಶಿಕ್ಷೆ ಮತ್ತು ಹತ್ತು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 307ರ ಅಡಿ ಸಾಬೀತಾಗಿರುವ ಅಪರಾಧಕ್ಕೆ ಜೀವಾವಧಿಯ ಜೊತೆಗೆ ರೂ. 50,000 ದಂಡ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆಯು ಅಪರಾಧಿ ಬದುಕಿರುವವರೆಗೂ ಅನ್ವಯವಾಗಲಿರುವುದರಿಂದ ಅದನ್ನು ಎರಡು ಬಾರಿ ಹೇರಲಾಗದು” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ಮೇಲ್ಮನವಿದಾರರಿಗೆ ಐಪಿಸಿ ಸೆಕ್ಷನ್‌ 326ಎ ಅಡಿ ದಾಖಲಾಗಿರುವ ಆರೋಪಕ್ಕೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಸೆಕ್ಷನ್ 307 ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಪರಾಧಿಗೆ ವಿಧಿಸಲಾಗಿರುವ ಹತ್ತು ಲಕ್ಷ ರೂಪಾಯಿ ದಂಡವನ್ನು ಸಂತ್ರಸ್ತೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶ ಮಾಡಿದೆ.