Varthur Santosh 
ಸುದ್ದಿಗಳು

ಹುಲಿ ಉಗುರು ಪೆಂಡೆಂಟ್‌ ಪ್ರಕರಣ: ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು ಮಾಡಿದ ಬೆಂಗಳೂರು ಗ್ರಾಮಾಂತರ ನ್ಯಾಯಾಲಯ

ವರ್ತೂರು ಸಂತೋಷ್‌ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯೆ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಬಿ ಆರ್‌ ನರೇಂದ್ರ ಇಂದು ಪ್ರಕಟಿಸಿದರು.

Bar & Bench

ಹುಲಿ ಉಗುರಿನಿಂದ ಮಾಡಿಸಿದ ಆಭರಣ ಧರಿಸಿದ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಬಂಧಿತರಾಗಿದ್ದ ಬಿಗ್‌ ಬಾಸ್‌ ರಿಯಾಲಿಟಿ ಷೋನ ಸ್ಪರ್ಧಿ ವರ್ತೂರು ಸಂತೋಷ್‌ ಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ವರ್ತೂರು ಸಂತೋಷ್‌ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯೆ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಬಿ ಆರ್‌ ನರೇಂದ್ರ ಇಂದು ಪ್ರಕಟಿಸಿದರು.

ನಾಲ್ಕು ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ. ತನಿಖಾಧಿಕಾರಿಯ ಮುಂದೆ ತಿಂಗಳಲ್ಲಿ ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಹಾಜರಾಗಿ, ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಬೇಕು. ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

'ಹಳ್ಳಿಕಾರ್ ಒಡೆಯ' ಖ್ಯಾತಿಯ ವರ್ತೂರು ಸಂತೋಷ್ ಅವರು 'ಬಿಗ್ ಬಾಸ್‌' ಕನ್ನಡ ರಿಯಾಲಿಟಿ ಷೋನ ಸ್ಪರ್ಧಿಯಾಗಿದ್ದರು. ಅವರು ಧರಿಸಿದ್ದ ಚಿನ್ನದ ಪೆಂಡೆಂಟ್‌ನಲ್ಲಿ ಹುಲಿ ಉಗುರು ಇತ್ತು ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಅಕ್ಟೋಬರ್‌ 22ರಂದು ಅರಣ್ಯಾಧಿಕಾರಿಗಳು ಬಿಗ್‌ ಬಾಸ್‌ ಸೆಟ್‌ಗೆ ತೆರಳಿ, ಸಂತೋಷ್‌ ಅವರನ್ನು ಬಂಧಿಸಿದ್ದರು. ಹುಲಿ ಉಗುರನ್ನು ವಶಕ್ಕೆ ಪಡೆದಿದ್ದರು.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸಂತೋಷ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದರಿಂದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದರು.