ಹುಲಿ ಉಗುರಿನ ಪೆಂಡೆಂಟ್‌ ಪ್ರಕರಣ: ವರ್ತೂರು ಸಂತೋಷ್‌ ಜಾಮೀನು ಆದೇಶ ಕಾಯ್ದಿರಿಸಿದ ಬೆಂಗಳೂರು ಗ್ರಾಮಾಂತರ ನ್ಯಾಯಾಲಯ

ಬಂಧನದ ವೇಳೆ ಆರೋಪಿಯ ಕುತ್ತಿಗೆಯಲ್ಲಿಯೇ ಹುಲಿ ಉಗುರು ಇತ್ತು. ಆಭರಣವು ಹುಲಿ ಉಗುರಿನಿಂದಲೇ ಮಾಡಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇದುವರೆಗಿನ ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದ ಸರ್ಕಾರದ ಪರ ವಕೀಲರು.
Varthur Santosh
Varthur Santosh

ಹುಲಿ ಉಗುರಿನಿಂದ ಮಾಡಿಸಿದ ಚಿನ್ನದ ಆಭರಣ ಧರಿಸಿದ ಆರೋಪದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಬಿಗ್‌ ಬಾಸ್‌ ರಿಯಾಲಿಟಿ ಷೋನ ಸ್ಪರ್ಧಿ ವರ್ತೂರು ಸಂತೋಷ್‌ ಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯವು ಶುಕ್ರವಾರಕ್ಕೆ ಆದೇಶ ಕಾಯ್ದಿರಿಸಿದೆ.

ವರ್ತೂರು ಸಂತೋಷ್‌ ಕುಮಾರ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಬಿ ಆರ್‌ ನರೇಂದ್ರ ಅವರು ನಡೆಸಿದರು.

ಇದಕ್ಕೂ ಮುನ್ನ, ಸರ್ಕಾರಿ ಅಭಿಯೋಜಕ ಎಚ್‌ ಎನ್‌ ಮಧುಸೂಧನ ಅವರು, ಬಂಧನದ ವೇಳೆ ಆರೋಪಿಯ ಕುತ್ತಿಗೆಯಲ್ಲಿಯೇ ಹುಲಿ ಉಗುರು ಇತ್ತು. ಆಭರಣವು ಹುಲಿ ಉಗುರಿನಿಂದಲೇ ಮಾಡಿಸಿರುವುದಾಗಿ ಆರೋಪಿಯೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇದುವರೆಗಿನ ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವಾದಿಸಿದರು.

Also Read
ಹುಲಿ ಉಗುರಿನ ಲಾಕೆಟ್‌ ಪ್ರಕರಣ: ವರ್ತೂರು ಸಂತೋಷ್‌ಗೆ ನವೆಂಬರ್‌ 6ವರೆಗೆ ನ್ಯಾಯಾಂಗ ಬಂಧನ

ಆರೋಪಿಯ ಕೃತ್ಯವು ವನ್ಯ ಜೀವಿ ಜೀವಿಸುವ ಹಕ್ಕನ್ನು ಕಿತ್ತುಕೊಂಡಿದೆ. ಹುಲಿ ಉಗುರು ಎಲ್ಲಿಂದ ಬಂದಿದೆ, ಆ ಉಗುರು ಯಾವ ಹುಲಿಯದ್ದು ಹಾಗೂ ಯಾರಿಂದ ಖರೀದಿ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಪ್ರಕರಣದ ಎರಡನೇ ಮತ್ತು ಮೂರನೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎರಡನೇ ಆರೋಪಿ ರಂಜಿತ್ ಮೂಲಕ ಹುಲಿ ಉಗುರು ಪಡೆದಿರುವುದಾಗಿ ಅರ್ಜಿದಾರ ಹೇಳಿದ್ದಾನೆ. ತಲೆಮರೆಸಿಕೊಡಿರುವ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ. ಅರ್ಜಿದಾರನ ಅಪರಾಧ ಕೃತ್ಯಕ್ಕೆ ಮೂರರಿಂದ ಏಳು ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಸದ್ಯ ಜಾಮೀನು ನೀಡಿದರೆ, ಆರೋಪಿಯು ತಲೆಮರೆಸಿಕೊಳ್ಳುವ ಹಾಗೂ ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಆದ್ದರಿಂದ, ಜಾಮೀನು ನೀಡಬಾರದು ಎಂದು ಕೋರಿದರು.

ಈ ವಾದವನ್ನು ಅಲ್ಲಗಳೆದ ಸಂತೋಷ್‌ ಪರ ವಕೀಲರು, ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದು ಸಮರ್ಥಿಸಿದರು.

Kannada Bar & Bench
kannada.barandbench.com