ಮಹಿಳೆಯರು ಆರಾಮದಾಯಕ ವಲಯದಿಂದ ಹೊರಬಂದು ತಮಗೆ ಅರ್ಹವಾಗಿ ದೊರೆಯಬೇಕಾದ ಮುಖ್ಯ ಪಾತ್ರಗಳಿಗೆ ಬೇಡಿಕೆ ಇಡಬೇಕು ಎಂದು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಮಹಿಳಾ ವಕೀಲರಿಗೆ ಸಲಹೆ ನೀಡಿದರು.
ದೆಹಲಿ ಹೈಕೋರ್ಟ್‌ನ ಮಹಿಳಾ ವಕೀಲೆಯರ ಒಕ್ಕೂಟ ಶುಕ್ರವಾರ ಆಯೋಜಿಸಿದ್ದ “ನಿಮ್ಮ ಸ್ವಂತದ ಹಾದಿಗಳನ್ನು ರೂಪಿಸಿಕೊಳ್ಳುವುದು” ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯತ್ನಿಸುವುದಿಲ್ಲ. ಇದರಿಂದ ಪ್ರತಿಭಾವಂತ ಮಹಿಳೆಯರು ಇಂದು ತಮ್ಮ ಹೆಜ್ಜೆಗುರುತು ಮೂಡಿಸಲಾಗುತ್ತಿಲ್ಲ” ಎಂದು ಅರೋರಾ ಅಭಿಪ್ರಾಯಪಟ್ಟರು.
ಅಮೆರಿಕಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರುಥ್ ಬೇಡರ್ ಗಿನ್ಸ್ ಬರ್ಗ್ ಅವರ ವೃತ್ತಿ ಬದುಕಿನಲ್ಲಿಯೂ ಒಮ್ಮೆ ಹೀಗಾಗಿತ್ತು. ಗಿನ್ಸ್ ಬರ್ಗ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ ಮೇಲೆ ದಿವಂಗತ ಗಿನ್ಸ್ ಬರ್ಗ್ ಅವರನ್ನು ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಮೂರ್ತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗಿದೆಯೇ ಎಂದು ಪ್ರಶ್ನಿಸಲಾಗಿತ್ತು.
ಆಗ ಗಿನ್ಸ್ ಬರ್ಗ್ ಸುಪ್ರೀಂ ಕೋರ್ಟ್‌ನ ಎಲ್ಲಾ ಒಂಭತ್ತು ನ್ಯಾಯಮೂರ್ತಿಗಳು ಮಹಿಳಾ ನ್ಯಾಯಮೂರ್ತಿಗಳಾಗಿದ್ದರೆ ಹೆಚ್ಚಿನ ಮಹಿಳಾ ನ್ಯಾಯಮೂರ್ತಿಗಳು ಇರುತ್ತಿದ್ದರು ಎಂದು ಗಿನ್ಸ್ ಬರ್ಗ್ ಪ್ರತಿಕ್ರಿಯಿಸಿದ್ದರು. ಅಲ್ಲದೆ ಮುಂದುವರೆದು, “ಇಲ್ಲಿಯವರೆಗೆ ಒಂಭತ್ತು ಪುರುಷ ನ್ಯಾಯಮೂರ್ತಿಗಳಿದ್ದರು, ಆದರೆ ಆ ಬಗ್ಗೆ ಯಾರೊಬ್ಬರೂ ಪ್ರಶ್ನೆ ಎತ್ತಿರಲಿಲ್ಲ” ಎಂದು ಉತ್ತರಿಸಿದ್ದ ಸ್ಫೂರ್ತಿದಾಯಕ ಘಟನೆಯನ್ನು ಅರೋರಾ ನೆನೆದರು.
ಸಾಂಪ್ರದಾಯಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದ ಅರೋರಾ ಅವರು 1986ರಲ್ಲಿ ತಾವು ಸುಪ್ರೀಂ ಕೋರ್ಟ್ ನಲ್ಲಿ ವೃತ್ತಿ ಬದುಕು ಆರಂಭಿಸಿದಾಗ ಹೆಚ್ಚೆಂದರೆ 30 ಅಥವಾ 40 ವಕೀಲೆಯರು ಇದ್ದರು. ಈ ಸಂಖ್ಯೆ ಬಳಿಕ 6-10ಕ್ಕೆ ಕುಸಿಯಿತು. ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಮಹಿಳೆಯರು ಕಾನೂನು ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಹಿಳಾ ನ್ಯಾಯಮೂರ್ತಿಗಳ ಅವಶ್ಯಕತೆ ಇದೆ. ಇದರಿಂದ ಕಾನೂನು ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ವಿಭಿನ್ನವಾಗಿ ಅರ್ಥೈಸಬಹುದು ಎಂದರು.
“ನಾವು (ಮಹಿಳೆಯರು) ಶೇ.50ರಷ್ಟಿದ್ದೇವೆ. ಸದ್ಯ ವಕೀಲರ ಪರಿಷತ್ತಿನಲ್ಲಿ ನಮ್ಮ ಬಲ ಶೇ. 50ರಷ್ಟು ಇಲ್ಲದೇ ಇರಬಹುದು. ಆದರೆ, ಇದನ್ನೇ ಮುಖ್ಯವಾಗಿಸಿಕೊಂಡು ಹೆಚ್ಚಿನ ಪ್ರಾತಿನಿಧ್ಯ ನೀಡಬಾರದು ಎಂದಲ್ಲ. ಮಹಿಳೆಯರು ಎಂಬ ಕಾರಣಕ್ಕೆ ಸ್ಥಾನಮಾನ ನೀಡಬಾರದು. ನಮ್ಮಲ್ಲಿ ಹಲವು ಪ್ರತಿಭಾನ್ವಿತ ಮಹಿಳಾ ವಕೀಲೆಯರು ಇದ್ದು, ಆ ಸ್ಥಾನಗಳನ್ನು ತುಂಬಲು ಅವರು ಅರ್ಹರಾಗಿದ್ದಾರೆ. ಆದರೆ, ಅವರಿಗೆ ಸ್ವಲ್ಪ ಬೆಂಬಲಬೇಕಿದೆ.”ಹಿರಿಯ ವಕೀಲೆ ಮೀನಾಕ್ಷಿ ಅರೋರಾ
“ಕೆಲಸದ ವಿಚಾರ ಬಂದಾಗ ನನ್ನನ್ನು ಮಹಿಳೆ ಅಥವಾ ಪುರುಷ ಎಂದು ಗುರುತಿಸಬಾರದು, ಮೊದಲಿಗೆ ವಕೀಲರು ಎಂದು ಗುರುತಿಸಬೇಕು. ಲಿಂಗದ ಕಾರಣಕ್ಕೆ ಬೆಂಬಲ ನೀಡಬಾರದು” ಎಂದು ಹೇಳಿದರು
“ನ್ಯಾಯಾಲಯದ ಕೊಠಡಿಯಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುವ ಪುರುಷ ಸಹೋದ್ಯೋಗಿಗಳು ನನ್ನ ವಾದಸರಣಿಗೆ ಅಡ್ಡಿಪಡಿಸಲಾಗದು” ಎಂದು ವರ್ಚುವಲ್ ವಿಚಾರಣೆಯ ಅನುಕೂಲತೆಯನ್ನು ಅರೋರಾ ಇದೇ ಸಂದರ್ಭದಲ್ಲಿ ವಿವರಿಸಿದರು.
“ಹಿಂದೆ ಲಿಂಗದ ವಿಚಾರ ಪ್ರಮುಖವಾಗಿತ್ತು. ಈಗ ಅದು ಪ್ರಮುಖ ವಿಷಯವಾಗಿ ಉಳಿದಿಲ್ಲ. ನ್ಯಾಯಮೂರ್ತಿಗಳು ಆಲಿಸುತ್ತಾರೆ. ನಿಮ್ಮನ್ನು ಸರಿಯಾಗಿ ಆಲಿಸಿಲ್ಲ ಎಂದೆನಿಸಿದರೆ, ಕಾಯಿರಿ, ಪ್ರತಿವಾದಿಗಳು ಮೌನವಾದಾಗ ನಿಮ್ಮ ದನಿ ಎತ್ತಿ ” ಎಂದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್ ಮುರುಳೀಧರ್ ಅವರೂ ಚರ್ಚೆಯಲ್ಲಿ ಭಾಗವಹಿಸಿದ್ದರು. ಕಾನೂನು ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಐವರು ಮಹನೀಯರ ಬದುಕಿನಿಂದ ಹಲವು ಪಾಠಗಳನ್ನು ಕಲಿತಿದ್ದನ್ನು ಅವರು ವಿವರಿಸಿದರು. ವಕೀಲೆಯರಾದ ಮೃಣಾಲಿನಿ ಸೇನ್ ಮತ್ತು ಸೌಮ್ಯಾ ಟಂಡನ್ ಅವರು ಸಂವಾದ ನಡೆಸಿಕೊಟ್ಟರು