ವಕೀಲರ ರಾಜಕೀಯ ಮತ್ತು ವೈಯಕ್ತಿಕ ನಂಬಿಕೆಗಳು ಸಾಂವಿಧಾನಿಕ ಮೌಲ್ಯಗಳನ್ನು ಮಣಿಸಲು ಸಾಧ್ಯ ಇಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಮುರಳೀಧರ್ ಅಭಿಪ್ರಾಯಪಟ್ಟರು.
ಗಾಂಧಿ ಜಯಂತಿ ಅಂಗವಾಗಿ ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆ ಆಯೋಜಿಸಿದ್ದ ವರ್ಚುವಲ್ ಸಮಾವೇಶದಲ್ಲಿ ಅವರು ಮಾತನಾಡಿದರು.
ದಾಕ್ಷಾಯಣಿ ವೇಲಾಯುಧನ್, ನ್ಯಾ ಅಣ್ಣಾ ಚಾಂಡಿ, ನ್ಯಾ. ರುತ್ ಬೇಡರ್ ಗಿನ್ಸ್ಬರ್ಗ್, ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಯವರಂತಹ ಕಾನೂನು ಲೋಕದ ಧ್ರುವತಾರೆಗಳನ್ನು ಸ್ಮರಿಸಿದ ನ್ಯಾಯಮೂರ್ತಿ ಮುರಳೀಧರ್ ಅವರು ಹೀಗೆಂದರು:
"ಸಂವಿಧಾನವನ್ನು ನೀವು ಅಪ್ಪಿಕೊಳ್ಳಬೇಕು. ಸಾಂವಿಧಾನಿಕ ಮೌಲ್ಯಗಳನ್ನು ನಿಮ್ಮ ವೈಯಕ್ತಿಕ ನೆಲೆಯಲ್ಲಿ ಅಳವಡಿಸಿಕೊಳ್ಳಬೇಕು. ನೀವು ವೈಯಕ್ತಿಕ ನೆಲೆಯಲ್ಲಿ ಒಂದು ನಡವಳಿಕೆ, ವೃತ್ತಿಪರವಾಗಿ ಮತ್ತೊಂದು ನಡವಳಿಕೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ತೋರ್ಪಡುತ್ತದೆ. ಅಂತಹ ಬೂಟಾಟಿಕೆಗಳು ನಿಮ್ಮ ನಿಲುವನ್ನು ದುರ್ಬಲಗೊಳಿಸುತ್ತವೆ. ಆ ದ್ವಂದ್ವದಲ್ಲಿ ನೀವು ಮುಂದುವರೆದರೆ ಆದರ್ಶಗಳನ್ನು ಪ್ರತಿನಿಧಿಸುವ ನೈತಿಕ ಅಧಿಕಾರ ಅಥವಾ ನ್ಯಾಯಸಮ್ಮತಿಯನ್ನು ಕಳೆದುಕೊಳ್ಳುತ್ತೀರಿ" ಎಂದು ತಿಳಿಸಿದರು.
ಶಾಶ್ವತ ನ್ಯಾಯಿಕ ಸುಧಾರಣೆ ಎಂಬುದು ಒಳಗಿನಿಂದಲೇ ಆಗಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
"ನೀವು ಸಿನಿಕರಾಗಲು ಸಾಧ್ಯವಿಲ್ಲ, ನ್ಯಾಯಕ್ಕಾಗಿ ಹಲವಾರು ಜನ ಕಾಯುತ್ತಿದ್ದು ವ್ಯವಸ್ಥೆ ಕುಸಿದಿದೆ ಅಥವಾ ನಿಷ್ಪ್ರಯೋಜಕ ಎಂದು ನೀವು ಹೇಳಲಾಗದು. ನೀವು ಸೋಲೊಪ್ಪಲು ಸಾಧ್ಯವೇ ಇಲ್ಲ. ನೀವೇ ವ್ಯವಸ್ಥೆ. ನೀವು ಅದನ್ನು ನ್ಯಾಯಿಕ ನಿಯಮ ಸಂವಿಧಾನವನ್ನು ನಂಬುವಂತೆಯೇ ನಂಬಬೇಕು" ಎಂದು ಹೇಳಿದರು.
ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಮಾತನಾಡಿ, ‘ಕೆಲವು ಮಂದಿ ನ್ಯಾಯಾಧೀಶರಾಗಲೆಂದೇ ಹುಟ್ಟಿರುತ್ತಾರೆ ಏಕೆಂದರೆ ಅವರ ಹೃದಯಗಳು ಸೂಕ್ತ ಸ್ಥಳದಲ್ಲಿರುತ್ತವೆ" ಎಂದರು.
ವಕೀಲರಾದ ಮೃಣಾಲಿನಿ ಸೇನ್ ಮತ್ತು ಸೌಮ್ಯಾ ಟಂಡನ್ ಕಾರ್ಯಕ್ರಮ ನಿರೂಪಿಸಿದರು.