ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸ್ಥಾಪಿಸಿರುವ ಹಾಲು ಉತ್ಪಾದನಾ ಕಂಪೆನಿ ಹೆರಿಟೇಜ್ ಫುಡ್ಸ್‌ಗೂ ತಿರುಪತಿ ಲಡ್ಡು ವಿವಾದಕ್ಕೂ ನಂಟು ಕಲ್ಪಿಸುವ ವರದಿಗಳಿಗೆ ನಿರ್ಬಂಧ ವಿಧಿಸುವಂತೆ ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಒಡೆತನದ ತೆಲುಗು ದೈನಿಕ ಸಾಕ್ಷಿಗೆ ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಲೇಖನಗಳನ್ನು 24 ಗಂಟೆಗಳೊಳಗೆ ತೆಗೆದುಹಾಕುವಂತೆ ಜಗನ್ ಮೋಹನ್ ರೆಡ್ಡಿ ಅವರ ಪತ್ನಿ ವೈ ಎಸ್ ಭಾರತಿ ರೆಡ್ಡಿ ಅವರು ಅಧ್ಯಕ್ಷೆಯಾಗಿರುವ ಸಾಕ್ಷಿ ದಿನಪತ್ರಿಕೆ ಒಡೆತನದ ಜಗತಿ ಪಬ್ಲಿಕೇಷನ್ಸ್‌ಗೆ ನ್ಯಾ. ಮಿನಿ ಪುಷ್ಕರ್ಣ ತಾಕೀತು ಮಾಡಿದರು. ಒಂದು ವೇಳೆ ಸಾಕ್ಷಿ 24 ಗಂಟೆಗಳೊಳಗೆ ವರದಿಗಳನ್ನು ತೆಗೆದುಹಾಕದಿದ್ದರೆ ಆ ಕಾರ್ಯವನ್ನು ಮೆಟಾ, ಗೂಗಲ್ ಮತ್ತು ಎಕ್ಸ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮಾಡಬೇಕು ಎಂದು ಪೀಠ ನಿರ್ದೇಶಿಸಿತು.
ತಿರುಪತಿ ಲಡ್ಡು ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮತ್ತೊಂದು ಕಂಪೆನಿಯೊಂದಿಗೆ ಮುಖ್ಯಮಂತ್ರಿ ನಾಯ್ಡು ಕುಟುಂಬದ ನಿಯಂತ್ರಣದಲ್ಲಿರುವ ಕಂಪೆನಿ ವ್ಯಾವಹಾರಿಕ ಸಂಬಂಧ ಹೊಂದಿದೆ ಎಂದು ಪತ್ರಿಕೆ ಈಚೆಗೆ ಸುದ್ದಿ ಪ್ರಕಟಿಸಿತ್ತು.
ಕಂಪೆನಿಯನ್ನು ನಾಯ್ಡು ಅವರು 1992ರಲ್ಲಿ ಸ್ಥಾಪಿಸಿ 1994ರಲ್ಲಿ ರಾಜೀನಾಮೆ ನೀಡಿದ್ದಾರೆ. ಈ ಆರೋಪ ಸಂಪೂರ್ಣ ತಪ್ಪು ಎಂದು ಹೇಳಿದ ಹೆರಿಟೇಜ್ ಫುಡ್ಸ್ ತಾವು ವ್ಯವಹಾರ ನಡೆಸುತ್ತಿರುವುದು ಭೋಲೆ ಬಾಬಾ ಮಿಲ್ಕ್ ಫುಡ್ ಇಂಡಸ್ಟ್ರೀಸ್ ಎಂಬ ವಿಭಿನ್ನ ಸಂಸ್ಥೆಯೊಂದಿಗೆ; ಲಡ್ಡು ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಬೋಲೆ ಬಾಬಾ ಆರ್ಗ್ಯಾನಿಕ್ ಸಂಸ್ಥೆಗೂ ತಮಗೂ ಸಂಬಂಧ ಇಲ್ಲ ಎಂದಿತ್ತು. ಈ ಆರೋಪಗಳು ದುರುದ್ದೇಶಪೂರ್ವಕವಾಗಿದ್ದು ಕಂಪನಿಯ ಖ್ಯಾತಿಗೆ ಮತ್ತು ವ್ಯವಹಾರಕ್ಕೆ ಗಂಭೀರ ಹಾನಿ ಉಂಟುಮಾಡಬಹುದು ಎಂದು ಹೆರಿಟೇಜ್ ಫುಡ್ಸ್ ಪರ ಹಾಜರಾದ ಹಿರಿಯ ವಕೀಲರು ವಾದ ಮಂಡಿಸಿದರು.
ವಿಚಾರಣೆಯನ್ನು ಕೆಲಕಾಲ ಆಲಿಸಿದ ಬಳಿಕ, ನ್ಯಾಯಾಲಯ ಪ್ರತಿವಾದಿಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸುವುದಾಗಿ ತಿಳಿಸಿತು.
ಜಗನ್ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿದ್ದ ಅವಧಿಯಲ್ಲಿ ತಿರುಮಲ ವೆಂಕಟೇಶ್ವರ ದೇವಾಲಯದ ಪವಿತ್ರ ಲಡ್ಡು ಪ್ರಸಾದ ತಯಾರಿಸಲು ಗೋಮಾಂಸ, ಹಂದಿ ಹಾಗೂ ಮೀನಿನ ಕೊಬ್ಬಿನಿಂದ ತಯಾರಿಸಲಾದ ಕೆಳಮಟ್ಟದ ತುಪ್ಪ ಬಳಸಲಾಗಿದೆ ಎಂದು ನಾಯ್ಡು ಅವರು 2024ರಲ್ಲಿ ಆರೋಪಿಸುವ ಮೂಲಕ ತಿರುಪತಿ ಲಡ್ಡು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಕಳೆದ ತಿಂಗಳು, ಅಂತಿಮ ವರದಿ ಸಲ್ಲಿಸಿದ ಸಿಬಿಐ 2019ರಿಂದ 2024ರ ಅವಧಿಯಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸಿದ ತುಪ್ಪದಲ್ಲಿ ಗೋಮಾಂಸ ಕೊಬ್ಬು ಅಥವಾ ಹಂದಿ ಕೊಬ್ಬಿನ ಯಾವುದೇ ಅಂಶ ಪತ್ತೆಯಾಗಿಲ್ಲ ಎಂದು ತಿಳಿಸಿತ್ತು. ಆದರೆ, ಪ್ರಾಣಿಜಾತ ಕೊಬ್ಬಿನ ಬದಲು ಪಾಮ್ ಎಣ್ಣೆ ಹಾಗೂ ಇತರ ರಾಸಾಯನಿಕಗಳ ಮಿಶ್ರಣದ ಮೂಲಕ ಕಲಬೆರಕೆ ನಡೆದಿರುವುದು ಕಂಡುಬಂದಿದೆ ಎಂದು ಹೇಳಿತ್ತು. ಅಲ್ಲದೆ ಟಿಟಿಡಿಯ ಕೆಲ ನೌಕರರು ಖಾಸಗಿ ಕಂಪನಿಗಳೊಂದಿಗೆ ಕೈಜೋಡಿಸಿ ಟಿಟಿಡಿಗೆ ವಂಚನೆ ಎಸಗಿದ್ದಾರೆ ಎಂದು ಕೂಡ ಸಿಬಿಐ ಹೇಳಿತ್ತು.
[ಆದೇಶದ ಪ್ರತಿ]